ಯುಪಿ: ಇಬ್ಬರು ಪೊಲೀಸರಿಂದ ಅಮಾನವೀಯ ಹಲ್ಲೆ – ದೂರು ನೀಡಲು ಹೆದರುತ್ತಿರುವ ಕುಟುಂಬಗಳು

ಲಕ್ನೋ: ಪೊಲೀಸ್ ಠಾಣೆಯಂತೆ ಕಂಡುಬಂದಿರುವ ಸ್ಥಳದಲ್ಲಿ ಇಬ್ಬರು ಪೊಲೀಸರು 9 ಜನರ ಮೇಲೆ ಲಾಠಿಯಿಂದ ಥಳಿಸುತ್ತಿರುವುದು, ಪೆಟ್ಟು ತಿಂದವರು ಹೊಡೆಯದಂತೆ ಬೇಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿತ್ತು.

ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಸ್ವತಃ ಆಡಳಿತ ಪಕ್ಷದ  ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ತಮ್ಮ ಟ್ವಿಟ್ಟರ್‌ನಲ್ಲಿ “ಗಲಭೆಕೋರರಿಗೆ ರಿಟರ್ನ್ ಗಿಫ್ಟ್” ಎಂದು ಹಂಚಿಕೊಂಡಿದ್ದರು. ಘಟನೆಯ ವಿಡಿಯೋ ಹಂಚಿಕೆಯಾಗಿ ನಾಲ್ಕು ದಿನಗಳಾದರೂ ಸಹರಾನ್‌ಪುರದ ಪೊಲೀಸರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಯಾರೂ ದೂರು ನೀಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಶಾಸಕ ಶಲಭ್‌ ಮಣಿ ತ್ರಿಪಾಠಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಜಿ ಮಾಧ್ಯಮ ಸಲಹೆಗಾರರಾಗಿದ್ದರು. ಘಟನೆ ಎಲ್ಲಿ ಹಾಗೂ ಯಾವಾಗ ನಡೆಯಿತು ಎಂಬುದರ ಕುರಿತು ಅವರು ಯಾವುದೇ ವಿವರಗಳನ್ನು ಹಂಚಿಕೊಂಡಿರಲಿಲ್ಲ.

ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್‌ “ವಿಡಿಯೊದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ನಮಗೆ ತಿಳಿದಿಲ್ಲ, ಯಾವುದೇ ದೂರು ಬಂದರೆ ನಾವು ಪರಿಶೀಲಿಸುತ್ತೇವೆ” ಎಂದು ಎನ್‌ಡಿಟಿವಿ ವರದಿಗಾರರಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋದಲ್ಲಿ, ಇಬ್ಬರು ಪೊಲೀಸರು 9 ಜನರನ್ನು ಲಾಠಿಯಿಂದ ಅಮಾನವೀಯವಾಗಿ, ಮನಬಂದಂತೆ ಥಳಿಸುತ್ತಿದ್ದಾರೆ. ಒಂಬತ್ತು ಮಂದಿ ಕೈ ಮುಗಿದ್ದು ಬೇಡಿಕೊಂಡರು ಕ್ಯಾರೆ ಎನ್ನದೇ ಥಳಿಸಲಾಗುತ್ತಿದೆ. ಪೊಲೀಸರ ವರ್ತನೆಗೆ ಜನರು ಆಕ್ರೋಶ ಹೊರಹಾಕಿದ್ದರು.

ವರದಿಗಳ ಪ್ರಕಾರ, ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಪಕ್ಷದಿಂದ ಅಮಾನತ್ತುಕೊಂಡಿರುವ ಇಬ್ಬರ ವಿರುದ್ಧ ಕಳೆದ ಶುಕ್ರವಾರ (ಜೂನ್‌ 10) ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದಿತ್ತು. ಉತ್ತರ ಪ್ರದೇಶದ ಸಹರಾನ್‌ಪುರದ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿತ್ತು.

ಘಟನೆಯ ಬಗ್ಗೆ ಎನ್‌ಡಿಟಿವಿ ತನಿಖೆ ನಡೆಸಿದ್ದು, ವಿಡಿಯೋದಲ್ಲಿರುವ ಕನಿಷ್ಠ ಐವರ ಕುಟುಂಬ ಸದಸ್ಯರು ಇದು ನಿಜವಾಗಿಯೂ ಸಹರಾನ್‌ಪುರದಲ್ಲಿ ನಡೆದಿರುವುದು. ಹಲ್ಲೆಗೊಳಗಾದವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅವರಲ್ಲೊಬ್ಬ ಯುವಕ ಮೊಹಮ್ಮದ್ ಅಲಿ ಸಹರಾನ್‌ಪುರದ ಪಿರ್ ಗಲಿಯಲ್ಲಿ ವಾಸವಾಗಿದ್ದಾನೆ. ಕೈ ಮುರಿಯುತ್ತದೆ ಹೊಡೆಯಬೇಡಿ ಎಂದು ಬೇಡಿಕೊಳ್ಳುತ್ತಿರುವ ಮಗನ ವಿಡಿಯೋ ನೋಡಿ ಆತನ ತಾಯಿ ಅಸ್ಮಾ ಕಣ್ಣೀರಿಟ್ಟಿದ್ದಾರೆ. ಇನ್ನು ವಿಡಿಯೋದಲ್ಲಿ ಹಲ್ಲೆಗೊಳಗಾಗುತ್ತಿರುವ ಮೊಹಮ್ಮದ್ ಸೈಫ, ಮೊಹಮ್ಮದ್ ಸಫಾಜ್, ರಾಹತ್ ಅಲಿ ಮತ್ತು ಇಮ್ರಾನ್ ಕೂಡ ಸಹರಾನ್‌ಪುರದವರು ಎಂದು ಕುಟುಂಬದವರು ದೃಢಪಡಿಸಿದ್ದಾರೆ.

ಈ ವ್ಯಕ್ತಿಗಳನ್ನು ಥಳಿಸಿ ನಾಲ್ಕು ದಿನಗಳು ಕಳೆದರೂ ಸಹಾರನ್‌ಪುರದಲ್ಲಿ ಇನ್ನೂ ಯಾವುದೇ ತನಿಖೆ ನಡೆದಿಲ್ಲ, ಈ ವಿಡಿಯೋ ಮತ್ತು ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ತಮಗೆ ತಿಳಿದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಸಂತ್ರಸ್ತ ಕುಟುಂಬಗಳು ಪೊಲೀಸರನ್ನು ಎದುರಿಸಲು, ಲಿಖಿತ ದೂರು ನೀಡಲು ಹೆದರುತ್ತಿದ್ದಾರೆ. ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಲಾಕಪ್‌ ಡೆತ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ.

Donate Janashakthi Media

Leave a Reply

Your email address will not be published. Required fields are marked *