ದಾವಣಗೆರೆ | ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಸಮೀಕ್ಷೆಗೆ ಹಾಜರಾಗದ ಶಿಕ್ಷಕರ ಅಮಾನತು

ದಾವಣಗೆರೆ : ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಲು ಈಗಾಗಲೇ ರಾಜ್ಯದಲ್ಲಿ ಜಾತಿಗಣತಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ಶಿಕ್ಷಕರಿಗೆ ದಸರಾ ರಜೆಯನ್ನು ನೀಡಲಾಗಿಲ್ಲ. ಬದಲಾಗಿ ಅವರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಇನ್ನೂ ಇದೀಗ ಜಿಲ್ಲೆಯಲ್ಲಿ ಸಮೀಕ್ಷೆಗೆ ಹಾಜರಾಗದ ಕಾರಣ ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಲು ಹಿಂದೇಟು ಹಾಕಿದ ಇಬ್ಬರು ಶಿಕ್ಷಕರೂ ಸೇರಿದಂತೆ ಮೂವರು ಸಿಬ್ಬಂದಿಯನ್ನು ಜಿಲ್ಲಾ ಶಿಸ್ತು ಪ್ರಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೇವೆಯಿಂದ ಅಮಾನತು ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇದನ್ನೂ ಓದಿ : ಎಜಿ ಆರ್‌ ವೆಂಕಟರಮಣಿ ಅಧಿಕಾರಾವಧಿ 2 ವರ್ಷಗಳ ಕಾಲ ವಿಸ್ತರಣೆ

ಸಮೀಕ್ಷೆಗೆಂದು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ಮೂವರನ್ನೂ ನಿಯೋಜನೆ ಮಾಡಲಾಗಿತ್ತು. ಆದರೆ, ಇವರು ಸಮೀಕ್ಷೆಗೆ ಹಾಜರಾಗದೇ ಹಿಂದೇಟು ಹಾಕಿದ್ದರು. ನೆಪ ಹೇಳಿ ಜಾರಿ ಮಾಡಲಾಗಿದ್ದ ನೋಟಿಸ್‌ಗೂ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆ ಮೂವರೂ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ಸರ್ಕಾರಿ ಸಿವಿಲ್ ವರ್ಗೀಕರಣ ಮತ್ತು ಅಪೀಲು ನಿಯಮಾವಳಿ 1957ರ ನಿಯಮ 10(1)(ಜ)ರ ಅನ್ವಯ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ದಾವಣಗೆರೆ ಉತ್ತರ ವಲಯದ ಜಮ್ಮಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಡಿ.ಕೆ.ಮಂಜುನಾಥ, ದಾವಣಗೆರೆ ದಕ್ಷಿಣ ವಲಯದ ನಾಗನೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಚ್.ಬಸವರಾಜಪ್ಪ, ದಾವಣಗೆರೆ ತಾಲೂಕು ಮಾಯಕೊಂಡ ಹಿಂದುಳಿಗ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಕೆ.ಆರ್.ದುರ್ಗಪ್ಪ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

ರಾಜ್ಯದಲ್ಲಿ ಇದೀಗ ಸದ್ಯ ಜಾತಿಗಣತಿ ನಡೆಯುತ್ತಿರುವುದರಿಂದ ಶಿಕ್ಷಕರನ್ನು ಸಮೀಕ್ಷೆಗೆಂದು ಬಳಸಿಕೊಳ್ಳಲಾಗಿದೆ. ಆದ್ದರಿಂದ ಅವರಿಗೆ ದಸರಾ ರಜೆಯನ್ನೂ ಸಹ ನೀಡಲಾಗಿದೆ. ಈ ನಡುವೆಯೇ ಶಿಕ್ಷಕರಿಬ್ಬರನ್ನು ಸಮೀಕ್ಷೇಗೆ ಹೋಗಲು ಹಿಂದೇಟು ಹಾಕಿದ ಕಾರಣ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇದರಿಂದ ಉಳಿದ ಶಿಕ್ಷಕರು ಹೈ ಅಲರ್ಟ್ ಆಗಿದ್ದು, ಸಮೀಕ್ಷೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಇನ್ನು ರಾಜ್ಯದಲ್ಲಿನ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಸಮೀಕ್ಷೆ ಅನಿವಾರ್ಯ ಆಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಲು ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಜೊತೆ ಮಾತನಾಡಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಿಕ್ಷಕರು ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಜನರು ಕೂಡ ಮನೆಗಳ ಬಳಿಗೆ ಬರುವ ಶಿಕ್ಷಕರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇತ್ತೀಚೆಗಷ್ಟೇ ಮನವಿ ಮಾಡಿದ್ದರು. ದಸರಾ ರಜೆ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರಜೆ ಮುಗಿದ ತಕ್ಷಣವೇ ಶಾಲೆಗಳು ಆರಂಭ ಆಗುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸುವ ಶಿಕ್ಷಕರಿಗೆ ಪರ್ಯಾಯ ರಜೆ ನೀಡುವ ಕುರಿತು ಚರ್ಚೆ ನಡೆಸಲಾಗುವುದು. ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇತ್ತೀಚೆಗಷ್ಟೇ ಸಮೀಕ್ಷೆಗೆ ಬಳಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಯಾವುದೇ ಪರ್ಯಾಯ ರಜೆ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ನೋಡಿ : ‘ಷಡ್ಯಂತ್ರ’ ಯಾರದ್ದು??ದೂರುದಾರನನ್ನು ಬಂಧಿಸಿದ್ದು‌‌ಯಾಕೆ??? Janashakthi Media

Donate Janashakthi Media