ಟೋಲ್ ಗೇಟ್ ತೆರವಾಗದಿದ್ದರೆ ಬಿಜೆಪಿಯೇ ತೆರವಾಗಲಿದೆ- ಜೆ ಬಾಲಕೃಷ್ಣ ಶೆಟ್ಟಿ

ಸುರತ್ಕಲ್‌ :  ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆಯ ಪ್ರಕಾರ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಕೇವಲ ಒಂದು ದಿನ ಅಷ್ಟೇ ಉಳಿದಿದೆ. ತನ್ನ ಭರವಸೆಯ ಪ್ರಕಾರ ಅಕ್ರಮ ಟೋಲ್ ಗೇಟ್ ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನ ಬಿಜೆಪಿಯನ್ನೇ ತೆರವುಗೊಳಿಸಲಿದ್ದಾರೆ ಎಚ್ಚರವಿರಲಿ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ ಅಕ್ರಮ ಟೋಲ್ ಗೇಟ್ ವಿರುದ್ದದ 9ನೇ ದಿನದ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಸದನದಲ್ಲಿ ಟೋಲ್ ಗೇಟ್ ತೆರವುಗೊಳಿಸುವ ತೀರ್ಮಾನವು ತಿಂಗಳು ಕಳೆದರೂ ಈವರೆಗೂ ಕನಿಷ್ಟ ತನ್ನ ಸಣ್ಣ ಕೆಲಸವನ್ನು ಜಾರಿಗೊಳಿಸಲು ಬಿಜೆಪಿ ಪಕ್ಷಕ್ಕೆ ಸಾಧ್ಯವಾಗಿಲ್ಲ . ಇನ್ನು ಜನರ ಬದುಕು , ಬವಣೆಗಳ ಯೋಜನೆಗಳನ್ನು ಯಾವ ರೀತಿ ಜಾರಿಗೊಳಿಸಬಹುದು. ದೇಶದಲ್ಲಿ ಎರಡು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಜಾರಿಗೊಳಿಸುತ್ತಿದ್ದು ಅವುಗಳ ಜನವಿರೋಧಿ ನೀತಿಗಳ ವಿರುದ್ಧ ಜನ ಬೀದಿಗೆ ಬಂದರೆ ಅವರನ್ನು ಬಂಧಿಸುವ , ಹೋರಾಟಗಳನ್ನು ಕಡೆಗಣಿಸುವ ಪ್ರಯತ್ನಗಳ ಭಾಗವಾಗಿಯೇ ಇವತ್ತು ಟೋಲ್ ಗೇಟ್ ವಿರುದ್ಧದ ಹೋರಾಟವನ್ನೂ ಕಡೆಗಣಿಸಲಾಗುತ್ತಿದೆ. ಆದರೆ ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವವರೆಗೂ ಹೋರಾಟ ಮುಂದುವರಿಯುತ್ತದೆ. ಬಿಜೆಪಿ ಸರಕಾರ ಸಾಧ್ಯವಾದರೆ ಕೂಡಲೇ ಈ ಅಕ್ರಮ ಟೋಲ್ ಗೇಟನ್ನು ತೆರವುಗೊಳಿಸಬೇಕು ಇಲ್ಲವೇ ಬಿಜೆಪಿ ಸರಕಾರವನ್ನು ಈ ಜಿಲ್ಲೆಯಿಂದಲೇ ತೆರವುಗೊಳಿಸುವ ಕೆಲಸ ಜಿಲ್ಲೆಯ ಜನ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಇದನ್ನೂ ಓದಿ :ಸದನದಲ್ಲಿ ಟೋಲ್‌ ತೆರವು ಘೋಷಿಸಿ ತಿಂಗಳಾದರೂ ಮುಖ್ಯಮಂತ್ರಿ ಭರವಸೆ ಈಡೇರಿಲ್ಲ: ಮುನೀರ್ ಕಾಟಿಪಳ್ಳ

ಜಿಲ್ಲೆ ಗಂಭೀರ ಸಮಸ್ಯೆಗಳ ಆಗರ, ಟೋಲ್ ಗೇಟ್ ಸುಲಿಗೆ ಅದರ ಒಂದು ಪಾಲು : ಬಿ ಎಂ ಫಾರೂಕ್ ಆರೋಪ ದಕ್ಷಿಣ ಕನ್ನಡ ಜಿಲ್ಲೆ ಹಲವು ಗಂಭೀರ ಸಮಸ್ಯಗಳ ಸುಳಿಗೆ ಸಿಲುಕಿದೆ‌. ಸುರತ್ಕಲ್ ಪರಿಸರದ ಕೈಗಾರಿಕಾ ಮಾಲಿನ್ಯ ಅಪಾಯಕಾರಿ ಮಟ್ಟವನ್ನು ದಾಟಿದೆ. ಕೈಗಾರಿಕೆಗಳ ಸ್ಥಳೀಯ ಯುವಜನರಿಗೆ ಉದ್ಯೋಗವನ್ನು ನಿರಾಕರಿಸುತ್ತಾ ಸ್ಥಳೀಯ ನದಿ, ಸಮುದ್ರಗಳಿಗೆ ವಿಷಕಾರಿ ಮಾಲಿನ್ಯ ಹರಿಸುವ ಕಾಯಕದಲ್ಲಿ ತೊಡಗಿದೆ. ಇಂತಹ ಹಲವು ಗಂಭೀರ ಸಮಸ್ಯೆಗಳಲ್ಲಿ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸಹ ಒಂದು. ಜನತೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯ ಅಪಾಯಕಾರಿಯಾಗಲಿದೆ.

ಟೋಲ್ ಗೇಟ್ ತೆರವು ಹೋರಾಟದಲ್ಲಿ ಜಿಲ್ಲೆಯ ಜನ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವುದು ಸದ್ಯ ಸಮಾಧಾನಕರ ಬೆಳವಣಿಗೆ. ಈ ಹೋರಾಟ ಗೆಲುವು ಸಾಧಿಸದೆ ನಿಲ್ಲಬಾರದು. ನಾನು ವಿಧಾನ ಪರಿಷತ್ ನಲ್ಲೂ ಟೋಲ್ ತೆರವಿಗಾಗಿ ಹೋರಾಟ ನಡೆಸುವೆ ಎಂದು ವಿಧಾನ ಪರಿಷತ್ ಭರವಸೆ ಸಮಿತಿ ಅಧ್ಯಕ್ಷ, ಜೆಡಿಎಸ್ ನಾಯಕ ಬಿ ಎಂ ಫಾರೂಕ್ ಹೇಳಿದರು. ಅವರು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಹಗಲು ರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ವಿಚಾರವಾದಿ ಪ್ರೋ ನರೇಂದ್ರ ನಾಯಕ್ ನಾಯಕ್ ಧರಣಿಯನ್ನು ಉದ್ದೇಶಿಸಿ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.

ಧರಣಿಯನ್ನು ಬೆಂಬಲಿಸಿ ಭಾಗವಹಿಸಿದ, ಧರಣಿಯನ್ನು ಬೆಂಬಲಿಸಿ ಲಾವಣ್ಯ ಬಳ್ಳಾಲ್ ಕಾಂಗ್ರೆಸ್ ರಾಜ್ಯ ಮುಖಂಡರು, ಸುರೇಂದ್ರ ಶೆಟ್ಟಿ, ಕೆಪಿಸಿಸಿ ಸದಸ್ಯರು ಮಾತನಾಡಿದರು, ಮುನೀರ್ ಕಾಟಿಪಳ್ಳ ಹೋರಾಟ ಸಮಿತಿ ಸಂಚಾಲಕರು, ಪುರುಷೋತ್ತಮ ಚಿತ್ರಾಪುರ ಮಾಜಿ ಉಪಮೇಯರ್, ಶುಭದ ರಾವ್ ಕಾರ್ಕಳ ಪುರಸಭಾ ಸದಸ್ಯರು, ಸದಾಶಿವ ದೇವಾಡಿಗ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಯಂತಿ ಬಿ ಶೆಟ್ಟಿ ಮಾಜಿ ಕಾರ್ಪೊರೇಟರ್, , ಅಜಿತ್ ಹೆಗ್ಡೆ ಮಾಜಿ ಅಧ್ಯಕ್ಷರು ಗಾ.ಪ.ಮಾಳ, ಭಾರತಿ ಬೋಳಾರ ಜೆಎಮ್ಎಸ್ ಜಿಲ್ಲಾ ಮುಖಂಡರು, ಸಂತೋಷ್ ಬಜಾಲ್ ಡಿವೈಎಫ್ಐ ಮುಖಂಡರು, ಮೂಸಬ್ಬ ಪಕ್ಷಿಕೆರೆ, ಜಯಲಕ್ಷ್ಮಿ ಜಪ್ಪಿನಮೊಗರು ಸಿಪಿಐಎಂ ಮುಖಂಡರು, ಸೆಲ್ವಿಯಾ, ಪ್ರಮೀಳಾ ಶಕ್ತಿನಗರ, ಶ್ರೀನಾಥ್ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *