ಬಿಸಿಯೂಟ ನೌಕರರ ಮೇಲೆ ದೌರ್ಜನ್ಯ – ಡಿವೈಎಫ್‌ಐ ಖಂಡನೆ

ಬೆಂಗಳೂರು : ವೇತನ ಹೆಚ್ಚಳ, ನಿವೃತ್ತಿ ಪಿಂಚಣಿ ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸುತ್ತಿದ್ದ ಬಿಸಿಯೂಟ ತಾಯಂದಿರು ಹಾಗೂ ಸಂಘಟನೆಯ ಮುಖಂಡರನ್ನು, ಇಂದು ರಾಜ್ಯ ಸರಕಾರ ಪೋಲಿಸರ ಮೂಲಕ ದಬ್ಬಾಳಿಕೆ ನಡೆಸಿ ಬಂಧಿಸಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಬಸವರಾಜ ಪೂಜಾರ, ಕೇವಲ ಎರಡ್ಮೂರು ಸಾವಿರ ರೂಪಾಯಿಗಳ ಗೌರವಧನ ರೂಪದಲ್ಲಿ ನಿಗದಿತ ವೇಳೆಗೆ ಸಿಗದಿರುವ ಸಂಬಳದಲ್ಲಿ ಬದುಕುತ್ತಿರುವ ಅಕ್ಷರದಾಸೋಹ ತಾಯಂದಿರು ವೇತನ ಹೆಚ್ಚಳಕ್ಕಾಗಿ, ಪಿಂಚಣಿ ನೀಡಲು ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟಿನೆ ನಡೆಸುತ್ತಿರುವುದು ನ್ಯಾಯಯುತವಾಗಿದೆ ಹಾಗೂ ಪ್ರಜಾಸತ್ತಾತ್ಮಕವಾಗಿದೆ. ರಾಜ್ಯ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಸೇವೆಗೆ ಗೌರವ ನೀಡಬೇಕಿತ್ತು. ಆದರೆ ದುಷ್ಟ ಬಿಜೆಪಿ ಸರಕಾರ ಬಿಸಿಯೂಟ ತಾಯಂದಿರರನ್ನು ಬಂಧಿಸಿದೆ. ಇದು ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ, ಇಂತಹ ದುಷ್ಟ ಸರಕಾರ ತೊಲಗಲೇಬೇಕಿದೆ ಎಂದು ಸಂಘಟನೆ ಆರೋಪಿಸಿದೆ.

ಇದನ್ನೂ ಓದಿಸರಕಾರದ ನಿರ್ಲಕ್ಷ್ಯ : ವಿಧಾನಸೌಧದತ್ತ ಹೊರಟ ಬಿಸಿಯೂಟ ನೌಕರರ ಮೇಲೆ ಪೊಲೀಸ್‌ ದೌರ್ಜನ್ಯ

ಯಾವುದೇ ಭದ್ರತೆ ಇಲ್ಲದೇ ನಿವೃತ್ತಿಯಾಗುವವರೆಗೆ ದುಡಿಸಿಕೊಂಡು, ಪಿಂಚಣಿ ನೀಡದೆ ಸೇವೆಯಿಂದ ಬಿಡುಗಡೆಗೊಳಿಸುವುದು ಅಮಾನವೀಯವಾದುದು. ಈ ನೌಕರರಿಗೆ ಸರಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ, ಈಗ ನಿವೃತ್ತಿ ಹೊಂದಿದ 6000 ನೌಕರರಿಗೆ ಇಡಗಂಟು (ಪಿಎಫ್) ರೂ. 1,00,000/- (ಒಂದು ಲಕ್ಷ ರೂಪಾಯಿಗಳು) ಪರಿಹಾರ ತೆಗದಿರಿಸಬೇಕು. ಹೆಚ್ಚುತ್ತಿರುವ ಬೆಲೆ ಏರಿಕೆಗನುಗುಣವಾಗಿ ಕನಿಷ್ಠ ವೇತನ ನೀಡುವುದು ಸೇರಿದಂತೆ ಇನ್ನು ಮುಂತಾದ ಅಕ್ಷರ ದಾಸೋಹ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಹಾಗೂ ನ್ಯಾಯಯುತವಾಗಿ ಶಾಂತರೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ದಬ್ಬಾಳಿಕೆ ನಡೆಸಿರುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಬಿಸಿಯೂಟ ನೌಕರರನ್ನು ಬೇಷರತ್ ಬಿಡುಗಡೆ ಮಾಡಬೆಡಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

 

 

Donate Janashakthi Media

Leave a Reply

Your email address will not be published. Required fields are marked *