ಮಂಗಳೂರು : ನಗರದಲ್ಲಿ ಕುಡಿಯುವ ನೀರಿನ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ ಮಂಗಳೂರು ನಗರಪಾಲಿಕೆ ಪ್ರತಿವರ್ಷ ನೀರಿನ ಅಭಾವ ಎದುರಿಸಲು ಅನೇಕ ರೀತಿಯ ಯೋಜನೆಗಳನ್ನು ಹಮ್ಮಿಕೊಂಡು ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದರೂ ನಗರಪಾಲಿಕೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಲು ವಿಫಲವಾಗಿದೆ ಎಂದು ಡಿವೈಎಫ್ಐ ಆರೋಪಿಸಿದೆ.
ಈ ಬಾರಿ ನೀರಿನ ಕ್ಷಾಮ ಕಳೆದ 6ವರ್ಷಗಳಿಗೆ ಹೋಲಿಸಿದರೆ ಗರಿಷ್ಠ ಮಟ್ಟದಲ್ಲಿ ನೀರಿನ ಅಭಾವ ಆಗಿದೆ. ಸಾರ್ವಜನಿಕರ ದಿನ ಬಳಕೆಗಾಗಿ ಪೂರೈಕೆ ಆಗುತ್ತಿರುವ ನೀರಿನ ಪ್ರಮಾಣ ನಗರದ ಜನರ 50% ನೀರಿನ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಗರದ ವಸತಿ ಸಮುಚ್ಚಯಗಳು, ಹೋಟೆಲ್, ಮಾಲ್, ಶಾಲಾ ಕಾಲೇಜು ವಿದ್ಯಾರ್ಥಿನಿಲಯ, ವಸತಿ ಗೃಹಗಳು, ಕಲ್ಯಾಣ ಮಂಟಪಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಕಳೆದ ಒಂದು ತಿಂಗಳಿನಿಂದ ಬದಲಾಗಿ ನೀರಿನ ಕೊರತೆಯಿಂದಾಗಿ ಟ್ಯಾಂಕರ್ ನೀರನ್ನು ಬಳಸುತ್ತಿವೆ. ಇದರಿಂದಾಗಿ ಸಾರ್ವಜನಿಕರು ಅನೇಕರಿಗೆ ವಾಂತಿ, ಭೇದಿ, ಚರ್ಮದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ವಸತಿ ಸಮುಚ್ಚಯ, ವಿದ್ಯಾರ್ಥಿ ನಿಲಯಗಳಲ್ಲಿ ಈ ರೀತಿಯ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಂಡಿದೆ. ಕುದಿಸಿ, ಶುದ್ಧಿಕರಿಸಿದ ನೀರನ್ನು ಕುಡಿಯುತ್ತಿರುವ ಜನರಿಗೂ ವಾಂತಿ ಭೇದಿ ಸಮಸ್ಯೆ ಕಾಣುತ್ತಿರುವುದು ಆಶ್ಚರ್ಯವಾಗಿದೆ. ಸ್ನಾನ, ಪಾತ್ರೆ, ಕೈ ತೊಳೆಯುವ, ಆಹಾರಕ್ಕೆ ಬಳಸುವ ನೀರು ಕಲುಷಿತಗೊಂದಿರುವುದೇ ಸಮಸ್ಯೆಗೆ ಕಾರಣವಾಗಿದ್ದರೂ ಮಹಾನಗರ ಪಾಲಿಕೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ ಧೋರಣೆ ತಾಳುತ್ತಿರುವುದು ಆಕ್ಷೇಪಾರ್ಹ ಸಂಗತಿ ಎಂದು ಡಿವೈಎಫ್ಐ ಆಪಾದಿಸಿದೆ.