ಜೈಲಿನಂತೆ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಗೋಡೆ ನಿರ್ಮಾಣದ ಯತ್ನ: ಮುನೀರ್‌ ಕಾಟಿಪಳ್ಳ

ಮಂಗಳೂರು : “ಮಂಗಳೂರಿನಲ್ಲಿ ಜೈಲು ಈಗಾಗಲೇ ಹಿಂದೂ ಜೈಲು, ಮುಸ್ಲಿಮ್‌ ಜೈಲು ಎಂದು ಇಬ್ಭಾಗವಾಗಿದೆ. ಈಗ ಕಾಲೇಜುಗಳನ್ನು ಅದರಂತೆ ಮಾಡಲು ನಮ್ಮ ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಹಿಂದೂ, ಮುಸ್ಲಿಂ ಎಂದು ತರಗತಿಗಳನ್ನು ಬೇರೆ ಬೇರೆ ಮಾಡುವಂತಾಗಿದೆ. ನೀವು ಈ ವಿವಾದವನ್ನು ಸೃಷ್ಟಿ ಮಾಡಿ, ಕಾಲೇಜುಗಳಲ್ಲಿ ಕೂಡಾ ಮಂಗಳೂರು ಜೈಲಿನಂತೆ ಹಿಂದೂ ಮುಸ್ಲಿಮರ ನಡುವೆ ಗೋಡೆಯನ್ನು ಕಟ್ಟಿದ್ದೀರಿ. ಚುನಾವಣೆಯಲ್ಲಿ ಗೆಲುವ ತಂತ್ರ ನಡೆಸಿದ್ದೀರಿ,” ಎಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಹೇಳಿದರು.

ಅನಗತ್ಯವಾಗಿ ಹಿಜಾಬ್‌ ವಿವಾದ ಸೃಷ್ಟಿ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕಂಟಕವಾದ ಕೋಮುವಾದಿ ಶಕ್ತಿಗಳ ನಡೆ, ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಿಸಿದ ಪ್ರಾಂಶುಪಾಲರ ದುರ್ವರ್ತನೆಯ ವಿರುದ್ಧ ನಗರದ ಕ್ಲಾಕ್‌ ಟವರ್‌ ಬಳಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು “ನಿಜವಾಗಿ ಈ ವಿಚಾರವೂ ನಾವು ಗಂಭೀರವಾಗಿ ಮಾತನಾಡಬೇಕಾದಂತಹ ವಿಚಾರ ಆಗಬಾರದಿತ್ತು. ಈ ಸಣ್ಣ ವಿಚಾರವನ್ನು ಕಾನೂನು, ನ್ಯಾಯಾಲಯ, ಸಂವಿಧಾನ ಎಂದು ಜಠಿಲವಾದಂತಹ ಸಮಸ್ಯೆಯನ್ನಾಗಿಸಲಾಗಿದೆ. ಅದು ಕೂಡಾ ಆಳುವ ಶಕ್ತಿಗಳೇ ವ್ಯವಸ್ಥಿತವಾದ ಪಿತೂರಿಯನ್ನು ಮಾಡುವಾಗ ನಾವು ಅನಿವಾರ್ಯವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇವೆ. ವಿದ್ಯಾರ್ಥಿಗಳ ನಡುವೆ ಈ ಕೋಮು ವಿಚಾರ ಭಿತ್ತಿದ ನಳಿನ್‌ ಕುಮಾರ್‌, ರಘುಪತಿ ಭಟ್ಟರು, ಸುನಿಲ್‌ ಕುಮಾರ್‌ ಅವರಿಗೆ ನಾಚಿಕೆಯಾಗಬೇಕು. ನೀವು ಜನಪ್ರತಿನಿಧಿಯಾಗಲು ನಾಲಾಯಕ್ಕು. ಸಾಮಾನ್ಯ ನಾಗರಿಕರಿಗೆ ಇರುವ ಪ್ರಜ್ಞೆ ಈ ಸಂಸದರು, ಶಾಸಕರುಗಳಿಗೆ ಇಲ್ಲ ಎಂಬುವುದು ಖೇಧಕರ ವಿಚಾರ,” “ಭಾರತದ ಇತಿಹಾಸದಲ್ಲಿ ಜನಪ್ರಿಯ ಪ್ರಧಾನಿಯಾಗಿ ದೇಶ ಆಳಿದ ಇಂಧಿರಾಗಾಂಧಿಯವರು ತಲೆಯ ಮೇಲೆ ವಸ್ತ್ರ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ನೀವು ನೆನಪು ಮಾಡಿಕೊಳ್ಳಿ. ನಿಮ್ಮ ನಾಯಕರು ಅವರನ್ನು ದುರ್ಗೆ ಎಂದು ಕರೆದಿದ್ದರು. ಅವರು ತಲೆಯ ಮೇಲೆ ವಸ್ತ್ರ ಹಾಕಿದ್ದಕ್ಕೆ ಅವರನ್ನು ನೀವು ಪಾಕಿಸ್ತಾನಕ್ಕೆ ಕಳುಹಿಸಿದಿರಾ?,” ಎಂದು ಪ್ರಶ್ನೆ ಮಾಡಿದ ಅವರು, “ಪ್ರಸ್ತುತ ಜಗತ್ತಿನ ಮುಂದೆ ಭಾರತದ ಮಾನ ಹರಾಜು ಆಗುತ್ತಿದೆ. ವಿದೇಶದ ಮಾಧ್ಯಮಗಳಲ್ಲಿ ಉಡುಪಿ, ಕುಂದಾಪುರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಕೊಡಿ ಎಂದು ಅಂಗಲಾಚುವ ಸುದ್ದಿ ಪ್ರಸಾರವಾಗುತ್ತಿದೆ. ಹಾಗಿರುವಾಗ ಭಾರತದ ಘನತೆ ಏನಾಗಬೇಕು,””ಬಿಜೆಪಿ ಮುಖಂಡರುಗಳು ತಮ್ಮದೇ ಆದ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಈ ಹಿಜಾಬ್‌ ಪ್ರಶ್ನೆಗಳು ಬರುವುದಿಲ್ಲ. ದೊಡ್ಡ ದೊಡ್ಡ ಕಾಲೇಜು, ಸಂಸ್ಥೆಗಳಲ್ಲಿ ಈ ಹಿಜಾಬ್‌ ಪ್ರಶ್ನೆ ಬರುವುದಿಲ್ಲ. ಶ್ರೀಮಂತರ ಮಕ್ಕಳು ಹಿಜಾಬ್‌ ಧರಿಸಿದರೆ ಅದು ದೊಡ್ಡ ಸಮಸ್ಯೆ ಆಗುವುದಿಲ್ಲ. ಆದರೆ ಬಡ ಮಕ್ಕಳು ಕಲಿಯುವ ಕಾಲೇಜುಗಳಲ್ಲಿ ಮಾತ್ರ ಈ ಸಮಸ್ಯೆ ಯಾಕೆ ಬರುತ್ತದೆ ಎಂಬುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು,” ಎಂದರು.

“ಸುನಿಲ್‌ ಕುಮಾರ್‌ ಅವರು ಜಾಬಿಗಾಗಿ ಕಾಲೇಜಿಗೆ ಬನ್ನಿ ಹಿಜಾಬಿಗಾಗಿ ಅಲ್ಲ ಎಂದು ಹೇಳುತ್ತಾರೆ. ಆದರೆ ನಿಮಗೆ ಉದ್ಯೋಗ ಕೊಡುವ ಸಾಮರ್ಥ್ಯ ಇದೆಯೇ. ನಿಮ್ಮ ಸರಕಾರಿ ಇಲಾಖೆಯಲ್ಲಿ ಎರಡುವರೆ ಲಕ್ಷ ಉದ್ಯೋಗ ಇದೆ. ಅದನ್ನು ಭರ್ತಿ ಮಾಡಿ. ನೀವು ಹಿಜಾಬಿಗೂ ಜಾಬಿಗೂ (ಉದ್ಯೋಗ) ಹೋಲಿಕೆ ಮಾಡಬೇಡಿ. ನಿಮಗೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡುವ, ಸಮಾನ ಶಿಕ್ಷಣ ನೀಡುವ ಯೋಗ್ಯತೆ ಇದೆಯೇ,” ಎಂದು ಪ್ರಶ್ನಿಸಿದ ಮುನೀರ್‌, “ಪ್ರಸ್ತುತ ಕೋರ್ಟ್‌ನ ಆದೇಶ ಬರುವವರೆಗೂ ಯಥಾಸ್ಥಿತಿ ಮುಂದುವರೆಯಬೇಕು. ಯಾವುದೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟು ಆಗಬಾರದು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು,” ಎಂದು ಆಗ್ರಹ ಮಾಡಿದರು.

ಬಳಿಕ ಮಾತನಾಡಿದ ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿಯ ಸಹ ಸಂಚಾಲಕರಾದ ಡಾ.ಕೃಷ್ಣಪ್ಪ ಕೊಂಚಾಡಿಯವರು, “ಉಡುಪಿ, ಕುಂದಾಪುರದಲ್ಲಿ ಪ್ರಾಂಶುಪಾಲರುಗಳ ವರ್ತನೆ ಖಂಡನೀಯ. ಪ್ರಾಂಶುಪಾಲರುಗಳು ತಮ್ಮ ವೃತ್ತಿಯ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಕಟುಕರ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಇದು ಜನಾಂಗೀಯ ದ್ವೇಷದ ಪ್ರತಿರೂಪವಾಗಿದೆ. ಇದು ಕರಾಳ ಕೃತ್ಯ. ಪ್ರಾಂಶುಪಾಲರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು,” ಎಂದು ಒತ್ತಾಯ ಮಾಡಿದರು. “ಈಗ ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣದಿಂದ ವಚನೆ ಆಗುವಂತೆ ಮಾಡಲಾಗುತ್ತಿದೆ. ಮುಂದೆ ದಲಿತರು ಶಿಕ್ಷಣ ಪಡೆಯಬಾರದು ಎಂದು ಹೇಳಬಹುದು,” ಎಂದರು

ಹಿರಿಯ ದಲಿತ ಮುಖಂಡರಾದ ಎಂ ದೇವದಾಸ್‌ ರವರು ಮಾತನಾಡಿ, “ಎಲ್ಲ ಧರ್ಮಗಳಿಗೂ ಅದರದ್ದೇ ಆದ ಪದ್ಧತಿ ಇದೆ. ಇದು ಹಿಂದಿನಿಂದಲೂ ಬಂದ ಒಂದು ಪದ್ಧತಿ. ಈಗ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚಾಗಿ ಶಿಕ್ಷಣವನ್ನು ಪಡೆಯುತ್ತಿದ್ಧಾರೆ. ಇದನ್ನು ಸಹಿಸಲಾಗದೆ ಹೀಗೆ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ಬುದ್ಧಿವಂತರ ಜಿಲ್ಲೆ ಈಗ ಬುದ್ಧಿವಂತರ ಹುಚ್ಚರ ಸಂತೆಯಾಗುತ್ತಿದೆ. ಸರ್ಕಾರ ಧರ್ಮ ರಾಜಕಾರಣ ಮಾಡುತ್ತಿದೆ,” ಎಂದು ಹೇಳಿದರು.

ಪ್ರತಿಭಟನೆಯನ್ನು ಉದ್ಧೇಶಿಸಿ ಸಿಪಿಐಎಂ ಜಿಲ್ಲಾ ಮುಖಂಡರಾದ ಸುನಿಲ್‌ ಕುಮಾರ್‌ ಬಜಾಲ್‌, SFI ಜಿಲ್ಲಾ ನಾಯಕಿ ಮಾಧುರಿ ಬೋಳಾರ್‌, ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿಯವರು ಮಾತನಾಡಿದರು. ಪ್ರತಿಭಟನೆ ಯಲ್ಲಿ DYFI ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ರಫೀಕ್ ಹರೇಕಳ, ಸುನಿಲ್ ತೇವುಲ, ನವೀನ್ ಕೊಂಚಾಡಿ, ಸಾಧಿಕ್ ಕಣ್ಣೂರು, ನಿತಿನ್ ಕುತ್ತಾರ್, ಚರಣ್ ಶೆಟ್ಟಿ, ಶ್ರೀನಾಥ್ ಕಾಟಿಪಳ್ಳ, SFI ಮುಖಂಡರಾದ ವಿನೀತ್ ದೇವಾಡಿಗ, ವಿನೀಷ್, JMS ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ,ನಳಿನಾಕ್ಷಿ, ವಿಲಾಸಿನಿ, CPIM ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಮುಖಂಡರಾದ ಸದಾಶಿವದಾಸ್, ಪದ್ಮಾವತಿ ಶೆಟ್ಟಿ, ದಯಾನಂದ ಶೆಟ್ಟಿ, JDS ನಾಯಕರಾದ ಸುಮತಿ ಎಸ್ ಹೆಗ್ಡೆ, ಅಲ್ರಾಫ್ ತುಂಬೆ, ದಲಿತ ಸಂಘಟನೆ ಗಳ ಮುಖಂಡರಾದ ಕ್ರಷ್ಣ ತಣ್ಣೀರುಬಾವಿ, ತಿಮ್ಮಯ್ಯ ಕೊಂಚಾಡಿ, ರಘು ಎಕ್ಜಾರು,ರಾಕೇಶ್ ಕುಂದರ್, ಸಾಮಾಜಿಕ ಚಿಂತಕರಾದ ವಾಸುದೇವ ಉಚ್ಚಿಲ್, ಪಟ್ಟಾಭಿರಾಮ ಸೋಮಯಾಜಿ, ಹುಸೇನ್ ಕಾಟಿಪಳ್ಳ, ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *