ಹಾವೇರಿ: ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕನೋರ್ವ ಕೆಲಸ ನಿರಾಕರಿಸದನೆಂದು ಆತನ ಮೇಲೆ ಅಮಾನುಷವಾಗಿ ಭೀಕರ ಹಲ್ಲೆ ನಡೆಸಿದ ಘಟನೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದ್ದಾರೆ.
ಮಂಗಳವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಹಲ್ಲೆ ನಡೆಸಿದ ಇಟ್ಟಿಗೆ ಭಟ್ಟಿ ಮಾಲೀಕ, ಆತನ ಮಗ ಹಾಗೂ ಇತರ ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ಸಿಗದಂತೆ ಕಠಿಣ ಕಾನೂನು ಶಿಕ್ಷೆಯನ್ನು ನೀಡಬೇಕು. ಈ ದುರುಳರಿಗೆ ನೀಡುವ ಶಿಕ್ಷೆಯು ಮುಂದೆ ಯಾರೂ ಕೂಡ ಇಂತಹ ದುಷ್ಕೃತ್ಯವೆಸಗುವವರಿಗೆ ಎಚ್ಚರಿಕೆಯ ಪಾಠವಾಗಬೇಕು ಎಂದಿದ್ದಾರೆ.
ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರನ್ನೊಳಗಂಡಂತೆ ಬಡಜನರು, ಕೆಲಸದ ಸ್ಥಳದಲ್ಲಿ ವಾಸಿಸುತ್ತಿರುತ್ತಾರೆ. ಅವರಿಗೆ ಸಮರ್ಪಕ ವಸತಿ, ಶೌಚಾಲಯ ಸೇರಿದಂತೆ ಕನಿಷ್ಠ ಅಗತ್ಯ ಸೌಲಭ್ಯಗಳೂ ಕೂಡ ಲಭ್ಯವಿಲ್ಲ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪುಸ್ತಕ ಲೋಕಾರ್ಪಣೆ ಸಮಾರಂಭ
ಅಲ್ಲದೇ ಯಾವುದೇ ಕಾರ್ಮಿಕ ಕಾನೂನುಗಳ ಕನಿಷ್ಠ ಭದ್ರತೆ ಹಾಗೂ ರಕ್ಷಣೆಯಿಲ್ಲದೇ ದುಡಿಯುತ್ತಿದ್ದಾರೆ. ಅತ್ಯಂತ ಕಡಿಮೆ ಕೂಲಿಗೆ ದುಡಿಯುವ ಬಡಜನರು ಮಾನಸಿಕ, ದೈಹಿಕ ಶೋಷಣೆಗೊಳಗಾಗತ್ತಿದ್ದರೂ ಬದುಕಿನ ಅನಿವಾರ್ಯತೆಗಾಗಿ ಭಯದ ವಾತಾವರಣದಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ರಾಜ್ಯ ಸರಕಾರ ರಾಜ್ಯದಲ್ಲಿ ಈ ರೀತಿಯಾಗಿ ಇಟ್ಟಿಗೆ ಭಟ್ಟಿ ಸೇರಿದಂತೆ ಇತರೆ ವಲಯಗಳಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕರಿಗೆ ಕಾರ್ಮಿಕ ಕಾನೂನು ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಭದ್ರತೆ ಹಾಗೂ ರಕ್ಷಣೆಯನ್ನು ಒದಗಿಸಬೇಕು.
ವಿಜಯಪುರದಲ್ಲಿ ಇಟ್ಟಿಗೆ ಗೂಡಿನಲ್ಲಿ ಹಲ್ಲೆಗೊಳಗಾದ ಬಡ ಕಾರ್ಮಿಕನಿಗೆ ವೈದ್ಯಕೀಯ ಸವಲತ್ತುಗಳನ್ನು ಉಚಿತವಾಗಿ ಒದಗಿಸಬೇಕು. ಆತನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವ ಜೊತೆಯಲ್ಲಿ ಸಂತ್ರಸ್ತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ರಾಜ್ಯ ಸರಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ಕಲಬುರಗಿ | ಬಹುತ್ವ ಭಾರತ ಉಳಿಸುವುದು ಅಗತ್ಯ : ದಾಕ್ಷಾಯಿಣಿ ಶರಣಬಸಪ್ಪ ಅಪ್ಪ Janashakthi Media