ಕೆತ್ತಿಕಲ್ ಗುಡ್ಡ ಕುಸಿತದ ಭೀತಿ -ಪ್ರದೇಶಕ್ಕೆ ಡಿವೈಎಫ್ಐ ನಿಯೋಗ ಭೇಟಿ, ಸಂತ್ರಸ್ತರ ಪರಿಹಾರ ಕ್ರಮಕ್ಕೆ ಆಗ್ರಹ

ಮಂಗಳೂರು: ವಾಮಂಜೂರು ಕೆತ್ತಿಕಲ್ ಅಮೃತ್ ನಗರ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 169 ರ ನಿರ್ಮಾಣ ಸಂದರ್ಭದ ಅವೈಜ್ಞಾನಿಕ ಗುಡ್ಡ ಅಗೆತದಿಂದ ಗುಡ್ಡ ಕುಸಿಯುವ ಹಂತವನ್ನು ತಲುಪಿದ್ದು ಮುಂಜಾಗ್ರತಾ ಕ್ರಮದ ಭಾಗವಾಗಿ ಈ ಪ್ರದೇಶದ ಬಹುತೇಕ ಕುಟುಂಬಗಳನ್ನು ತಾತ್ಕಾಲಿಕ ತೆರವುಗೊಳಿಸುವ ಹೆಸರಲ್ಲಿ ಅವರ ಮನೆ ವಿದ್ಯುತ್ ಮತ್ತು ನೀರು ಸಂಪರ್ಕವನ್ನು ಕಡಿತಗೊಳಿಸಿದ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ನಡೆಯನ್ನು ಡಿವೈಎಫ್ಐ ವಿರೋಧಿಸುತ್ತದೆ. ಹಾಗೂ ಬೀದಿ ಪಾಲಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ಕ್ರಮ ಒದಗಿಸಬೇಕು ಅಲ್ಲದೆ ಈ ರೀತಿ ಅವೈಜ್ಞಾನಿಕ ಮಣ್ಣು ತೆರವುಗೊಳಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಹೇಳಿದರು. ಕೆತ್ತಿಕಲ್

ಇಂದು ಕೆತ್ತಿಕಲ್ ಗುಡ್ಡ ಕುಸಿತದ ಭೀತಿಗೊಳಗಾಗಿರುವ ಪ್ರದೇಶಕ್ಕೆ ಭೇಟಿ ನೀಡಿದ ಡಿವೈಎಫ್ಐ ನಾಯಕರುಗಳ ನಿಯೋಗ ಸ್ಥಳೀಯ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಪ್ರದೇಶವನ್ನು ಪರಿಶೀಲಿಸಿದರು. ಜಿಲ್ಲೆಯ ಪ್ರಭಾವಿಯೊಬ್ಬರ ನಿರ್ಮಾಣ ಸಂಸ್ಥೆಯು ಗುರುಪುರ ಹೊಳೆಯ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಈ ಪ್ರದೇಶದಿಂದಲೇ ಅಕ್ರಮವಾಗಿ ಮಣ್ಣು ಅಗೆಯುವ ಕಾರ್ಯವನ್ನು ನಡೆಸಿತ್ತು ಆದರೆ ಆ ವೇಳೆ ಇಲ್ಲಿನ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಮೌನವಹಿಸಿತ್ತು. ನಂತರದಲ್ಲಿ ಆರಂಭವಾದ ಹೆದ್ದಾರಿ ಕಾಮಗಾರಿಯ ವೇಳೆಯೂ ಇದೇ ಗುಡ್ಡಗಳನ್ನು ಅಕ್ರಮವಾಗಿ ಅಗೆಯುವ ಕೆಲಸ ಎಗ್ಗಿಲ್ಲದೆ ಸಾಗಿದ ಪರಿಣಾಮವಾಗಿಯೇ ಇಂದು ವಯನಾಡ್ ಮಾದರಿ ಕುಡ್ಡ ಕುಸಿತ ಸಂಭವಿಸುವ ಸ್ಥಿತಿಗೆ ಬಂದು ನಿಂತಿದೆ ಎಂದರು.

ಕೆಲ ದಿನದ ಹಿಂದೆ ಉತ್ತರ ಕನ್ನಡದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ನಡೆದ ದುರಂತದಿಂದ ಎಚ್ಚೆತ್ತ ಸರಕಾರ ಪ್ರದೇಶದ ಜನರ ಕಾಳಜಿ  ವಹಿಸುತ್ತಿರುವುದು ಒಂದು ನಾಟಕೀಯ ಬೆಳವಣೆಗೆ. ಸರಕಾರದ ಗಣಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಅವೈಜ್ಞಾನಿಕ ಮಣ್ಣು ಅಗೆದ ಸಂದರ್ಭದಲ್ಲಿ ಯಾವುದೇ ಮುತ್ತುವರ್ಜಿಯನ್ನು ವಹಿಸದೆ ಬೇಜವಾಬ್ದಾರಿ ವಹಿಸಿರುವ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಈಗ ಪರಿಸ್ಥಿತಿ ಅಪಾಯಕಾರಿ ಹಂತಕ್ಕೆ ತಲುಪಿದಾಗ ಎಚ್ಚೆತ್ತುಕೊಂಡು ಸ್ಥಳೀಯರನ್ನು ತೆರವುಗೊಳಿಸುವ ಹೆಸರಲ್ಲಿ ಅವರ ಬದುಕನ್ನು ಅತಂತ್ರಗೊಳಿಸಲು ಮುಂದಾಗಿದೆ. ಇಂತಹ ಒಂದು ವಿಷಮ ಪರಿಸ್ಥಿತಿಗೆ ತಲುಪಲು ಇಲ್ಲಿನ ಬಿಜೆಪಿ ಪಕ್ಷದ ಸಂಸದರು, ಶಾಸಕರು ನೇರ ಹೊಣೆಯಾಗಲಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ : ಕಾಂತೇಶ್ ಸ್ಪರ್ಧೆ ಮಾಡಲ್ಲ: ಕೆ.ಎಸ್.ಈಶ್ವರಪ್ಪ

ಗುಡ್ಡ ಕುಸಿತದ ಭೀತಿಯಿಂದ ಅಪಾಯಕ್ಕೆ ತಲುಪಿರುವ ಮನೆಗಳನ್ನು ಏಕಾಏಕಿ ಯಾವುದೇ ಪರಿಹಾರ ಕ್ರಮವನ್ನು ನೀಡದೆ ವಿದ್ಯುತ್ ಸಹಿತ ನೀರಿನ ಕನೆಕ್ಷನ್ ಅನ್ನು ಕಡಿತಗೊಳಿಸಿ ಮೂಲಭೂತ ಸೌಕರ್ಯಗಳಿಂದ ವಂಚಿತರನ್ನಾಗಿಸುವ ಮೂಲಕವಾಗಿ ಅಮಾನವೀಯವಾಗಿ ಮನೆಯಿಂದ ಹೊರಗಟ್ಟಿದ್ದಾರೆ. ತಾತ್ಕಾಲಿಕವಾಗಿ ಶಾಲೆಯಲ್ಲಿ ನಿರ್ಮಿಸಿರುವ ಕಾಳಜಿ ಕೇಂದ್ರದಲ್ಲಿ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ಜಿಲ್ಲಾಡಳಿತದ ಸಂಪೂರ್ಣ ಬೇಜಾವಾಬ್ದಾರಿ ವಹಿಸಿದೆ. ಸಂತ್ರಸ್ತ ಕುಟುಂಬವೊಂದು ಹಕ್ಕು ಪತ್ರದ ಮುಖಾಂತರವಾಗಿ ನಿವೇಶನವನ್ನು ಪಡೆದು ಸಾಲ ಮಾಡಿ ಮನೆ ನಿರ್ಮಿಸಿರುವ ಶೇಕರ್ ಎಂಬವರು ಈ ಸಾಲದೊಂದಿಗೆ ಮನೆಯನ್ನು ಕೂಡಾ ಕಳೆದುಕೊಂಡಿದ್ದಾರೆ ಎಂಬ ಅಳಲನ್ನು ನಿಯೋಗದ ಜೊತೆ ತೋಡಿಕೊಂಡರು.

ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ಕೂಡಲೇ ಬೀದಿಗೆ ಬಂದಿರುವ ಕುಟುಂಬಗಳಿಗೆ ತಕ್ಷಣದ ನೆರವನ್ನು ನೀಡಬೇಕು ಮತ್ತು ಸರಕಾರವು ಶಾಶ್ವತ ಪರಿಹಾರವನ್ನು ಒದಗಿಸಿಕೊಡಬೇಕು. ಅಲ್ಲಿಯವರೆಗೆ ಮನೆ ಬಾಡಿಗೆ ರೂಪದಲ್ಲಿ ಆರ್ಥಿಕ ಸಹಕಾರವನ್ನು ಜಿಲ್ಲಾಡಳಿತ ವಿತರಿಸಬೇಕು. ಕೆತ್ತಿಕಲ್ ಪ್ರದೇಶದಲ್ಲಿ ಅಕ್ರಮ ಮಣ್ಣು ತೆರವುಗೊಳಿಸಿದ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡುವಂತಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್ಐ ಆಗ್ರಹಿಸುತ್ತದೆ ಎಂದು ಹೇಳಿದರು.

ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ವಾಮಂಜೂರು ಪ್ರದೇಶ ಅಧ್ಯಕ್ಷರಾದ ದಿನೇಶ್ ಬೊಂಡಂತಿಲ, ಕಾರ್ಯದರ್ಶಿ ಚಂದ್ರಹಾಸ್ ತಾರಿಗುಡ್ಡೆ, ಸ್ಥಳೀಯ ಮುಖಂಡರಾದ ಹೊನ್ನಯ ಅಂಚನ್ ಶಂಕೇಶಬೆಟ್ಟು, ಕೀರ್ತನ್ ಶಂಕೇಶಬೆಟ್ಟು, ಜಿತೇಶ್ ದೇವಸಬೆಟ್ಟು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಕನ್ನಡ ಚಿತ್ರರಂಗದ ಸಂಕಷ್ಟವನ್ನು ಹೋಮ ಹವನ ನಿವಾರಿಸಬಹುದೆ? – ಬಿ.ಸುರೇಶ್ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *