ಬೆಂಗಳೂರು: ಕೋವಿಡ್ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಈಗಾಗಲೇ ತೀರ್ಮಾನ ಕೈಗೊಂಡಿತ್ತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಅತ್ಯಂತ ಪ್ರಮುಖವಾದದ್ದು. ಪರೀಕ್ಷೆ ರದ್ದಾದ ನಂತರ ಶಿಕ್ಷಣ ಇಲಾಖೆಯು ಯಾವ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಿದೆ ಎಂಬುದರ ಬಗ್ಗೆ ತೀವ್ರವಾದ ಗೊಂದಲಗಳು ಇದ್ದವು.
ಇದೀಗ ಸರಕಾರವು ಅಧಿಕೃತವಾದ ಆದೇಶವನ್ನು ಪ್ರಕಟಣೆ ಮಾಡಿದ್ದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದ ಕುರಿತ ಅಂಶಗಳನ್ನು ತಿಳಿಸಿದೆ.
ಈ ಹಿಂದೆ ಗ್ರೇಡ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಿಂದ ಹಿಂದೆ ಸರಿದ ಶಿಕ್ಷಣ ಇಲಾಖೆಯು ಒಟ್ಟು 7 ಹಂತಗಳಲ್ಲಿ ಪರಿಶೀಲನೆಯನ್ನು ನಡೆಸಿ ಅಂಕಗಳನ್ನು ನಿಗದಿಪಡಿಸಲು ಮಾರ್ಗಸೂಚಿಯನ್ನು ರೂಪಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳನ್ನು ಫಲಿತಾಂಶ ಸೇರಿದಂತೆ ಜೊತೆಗೆ ವಿದ್ಯಾರ್ಥಿಗಳಲ್ಲಿದ್ದ ಹಲವು ಗೊಂದಲಗಳನ್ನು ಶಿಕ್ಷಣ ಇಲಾಖೆ ಪರಿಹರಿಸಿದೆ.
ಇದನ್ನು ಓದಿ: SSLC ಪರೀಕ್ಷೆ ರದ್ದು ಇಲ್ಲ ಆದರೆ, ಪಿಯುಸಿ ಪರೀಕ್ಷೆ ರದ್ದು
ಇದರೊಂದಿಗೆ ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳು ಏನು ಮಾಡಬಹುದು ಎಂಬುದನ್ನೂ ಇಲಾಖೆ ತಿಳಿಸಿದೆ. ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪಿಯು ಫಲಿತಾಂಶದ ಕುರಿತು ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಸಂಪೂರ್ಣ ಮಾರ್ಗಸೂಚಿ ಮುಂದಿದೆ.
ಶಿಕ್ಷಣ ಇಲಾಖೆ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ
ʻʻಕೋವಿಡ್-19 ಸೋಂಕಿನ ಪರಿಣಾಮವಾಗಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಂಡಿದೆ. ದ್ವಿತೀಯ ಪಿಯುಸಿ ಅಭ್ಯರ್ಥಿಗಳನ್ನು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು, ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಅತಿ ಶೀಘ್ರದಲ್ಲಿಯೇ ಫಲಿತಾಂಶ ಘೋಷಿಸಲಾಗುವುದು” ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪರೀಕ್ಷೆ ಇಲ್ಲದೆ ಅಂಕಗಳ ನಿಗದಿ ಹೇಗೆ?
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳಲ್ಲಿ ಶೇಕಡಾ 45 ರಷ್ಟು ಅಂಕಗಳು ಹಾಗೂ ಪಿಯುಸಿ ಮೊದಲ ವರ್ಷದಲ್ಲಿ ಪಡೆದ ಅಂಕಗಳಲ್ಲಿ ಶೇಕಡಾ 45 ರಷ್ಟು ಅಂಕಗಳನ್ನು ಸೇರಿಸಲಾಗುವುದು. ಅದಕ್ಕೆ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆ ಆಧರಿಸಿ ಕೊಡಲಾಗಿರುವ ಶೇಕಡಾ 10ರಷ್ಟು ಅಂಕಗಳಲ್ಲಿ ಪಡೆದಿರುವ ಅಂಕಗಳನ್ನು ಸೇರಿಸಲಾಗುವುದು. ಜೊತೆಗೆ ಪಿಯುಸಿ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಶೇಕಡಾ 5ರಷ್ಟು ಕೃಪಾಂಕಗಳನ್ನು ಕೊಡಲಾಗುವುದು. ಪ್ರತಿ ವಿಷಯಕ್ಕೂ ಇದೇ ಮಾನದಂಡದ ಮೇಲೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ನಿಗದಿ ಮಾಡಲು ಸರ್ಕಾರ ಆದೇಶ ಮಾಡಿದೆ.
ಇದನ್ನು ಓದಿ: ನೂತನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟ: 2021-2022ರ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ
ಖಾಸಗಿ ಅಭ್ಯರ್ಥಿಗಳು, ಅಂಕಗಳು ತೃಪ್ತಿಯಾಗದಿದ್ದಲ್ಲಿ?
ಒಂದು ವೇಳೆ ವಿದ್ಯಾರ್ಥಿಗಳಿಗೆ ಇಲಾಖೆ ಕೊಡುವ ಅಂಕಗಳು ತೃಪ್ತಿಯಾಗದಿದ್ದಲ್ಲಿ ಮುಂದೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಹಾಗೆ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಲ್ಲಿ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ಅಂತಿಮವಾಗಿದ್ದು, ಹಿಂದಿನ ಅಂಕಗಳನ್ನು ಪಡೆಯಲು ಅವಕಾಶ ಇರುವುದಿಲ್ಲ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ಖಾಸಗಿ ವಿದ್ಯಾರ್ಥಿಗಳ ಅಂಕಗಳನ್ನು ನಿಗದಿ ಮಾಡಲು ಯಾವುದೇ ರೀತಿಯ ದಾಖಲೆಗಳು (ಪ್ರಥಮ ಪಿಯುಸಿ ಅಂಕಗಳು ಇತ್ಯಾದಿ) ಇಲ್ಲದ ಕಾರಣ ಸದರಿ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಕೊಡಲಾಗುತ್ತದೆ. ಖಾಸಗಿ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ ಮುಂದಿನ ವರ್ಷ ಶುಲ್ಕ ರಹಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಪುನರಾವರ್ತಿತ ವಿದ್ಯಾರ್ಥಿಗಳೂ ಪಾಸ್!
ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು ಮತ್ತು ಶೇ. 5ರಷ್ಟು ಕೃಪಾಂಕಗಳನ್ನು ನೀಡಿ ಫಲಿತಾಂಶ ಘೋಷಿಸಲಾಗುತ್ತದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಕೈಗೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪುನರಾವರ್ತಿತ ಅಭ್ಯರ್ಥಿಗಳನ್ನೂ ಸಹ ಉತ್ತೀರ್ಣಗೊಳಿಸಬೇಕೆಂದು ಕೆಲವರು ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಪುನರಾವರ್ತಿತ ಅಭ್ಯರ್ಥಿಗಳನ್ನೂ ಈ ವರ್ಷದ ಮಟ್ಟಿಗೆ ಉತ್ತೀರ್ಣಗೊಳಿಸುವ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಸರ್ಕಾರದ ನಿಲುವನ್ನು ಹೈಕೋರ್ಟ್ ಸಮ್ಮತಿಸಿದೆ ಎಂದು ಸಚಿವರು ತಿಳಿಸಿದ್ದಾರೆ.