- ದೂತ ಘಟೋತ್ಕಚ (ಕನ್ನಡ) ನಾಟಕ ಪ್ರದರ್ಶನ
- ನವೆಂಬರ್ 13, 2022 – ಸಂಜೆ 6.30ಕ್ಕೆ
- ರಚನೆ : ಮಹಾಕವಿ ಭಾಸ
- ರಂಗ ವಿನ್ಯಾಸ/ ನಿರ್ದೇಶನ : ಶಿವು ಹೊನ್ನಿಗನಹಳ್ಳಿ
- ತಂಡ : ಬಿಂಕ ಬಿನ್ನಾಣರು ರಂಗ ತಂಡ (ರಿ.)
- ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು.
ಈ ತಂಡಕ್ಕೆ ಈಗ 7 ವರ್ಷಗಳ ಸಂಭ್ರಮ. ಪ್ರತಿ ವರ್ಷ 4-5 ನಾಟಕಗಳನ್ನು ರಂಗಪ್ರಯೋಗ ಮಾಡಿ ರಂಗಾಸಕ್ತರ ಮುಂದಿಡುತ್ತಿರುವ ಬಿಂಕ ಬಿನ್ನಾಣರು ರಂಗ ತಂಡ ನಾಟಕ ದೂತ ಘಟೋತ್ಕಚ ನಾಳೆ(ನವೆಂಬರ್ 13) ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.
ದಯಾನಂದ ಸಾಗರ್ ಪ್ರತಿಷ್ಠಾನ ಸಂಘಟಿಸಿದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ, ಅತ್ಯುತ್ತಮ ನಿರ್ದೇಶನ ಸೇರಿದಂತೆ ಹನ್ನೊಂದು ವಿಭಾಗಗಳಲ್ಲಿ ಮೊದಲ ಬಹುಮಾನಗಳನ್ನು ಗೆದ್ದುಕೊಂಡ ದೂತ ಘಟೋತ್ಕಚ ಎರಡೇ ವರ್ಷದಲ್ಲಿ 63 ಪ್ರದರ್ಶನಗಳನ್ನು ಕಂಡಿದೆ.
ಶಿವು ಹೊನ್ನಿಗನಹಳ್ಳಿ ನಿರ್ದೇಶಿಸಿ ನಿರ್ಮಾಣ ಮಾಡಿರುವ ನಾಟಕಗಳಲ್ಲಿ ಕರ್ಣಭಾರ ನಾಟಕವು 41ಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡರೆ ದೂತ ಘಟೋತ್ಕಚ ನಾಟಕವು 63 ಪ್ರದರ್ಶನಗಳನ್ನು ಕಂಡಿದೆ. ಕರ್ಣಭಾರ ನಾಟಕದಲ್ಲಿ ಕರ್ಣನ ಅಂತ್ಯ ಸಂಸ್ಕಾರವನ್ನು, ಸತ್ಯ ಹರಿಶ್ಚಂದ್ರ ಬಂದು ನೆರವೇರಿಸುವುದು ವಿಶಿಷ್ಟ ಅನುಭವವನ್ನು ನೀಡುತ್ತದೆ.
ದೂತ ಘಟೋತ್ಕಚ, ಕರ್ಣಭಾರ, ಮಧ್ಯಮವ್ಯಾಯೋಗ, ಊರುಭಂಗ, ಗುರುಶಿಷ್ಯರು, ಕುರಿದೊಡ್ಡಿ ಕುರುಕ್ಷೇತ್ರ, ಆಶೀರ್ವಾದ, ತೆರೆಗಳು, ಕುಂಟ ಕುಂಟ ಕುರುವತ್ತಿ, ಬೆವರಲ್ಲೆ ಬೆಳಕು, ಗೌರವರತ್ನ ಕೌರವ, ಚಾಮಣ್ಣನ ಚಿರೋಟಿ, ಅಗ್ನಿಮರ್ಧನ, ಕತ್ತಲೆ ದಾರಿ ದೂರ, ಸುಯೋಧನ ಮುಂತಾದ ನಾಟಕಗಳು ಮತ್ತು ಬೀದಿ ನಾಟಕಗಳನ್ನು ಪ್ರಯೋಗಿಸುವ ಮುಖಾಂತರ ಬಿಂಕ ಬಿನ್ನಾಣರು ರಂಗ ತಂಡವು ಇಲ್ಲಿಯವರೆಗೂ ಹಲವಾರು ಯಶಸ್ಸಿನ ಪ್ರದರ್ಶನಗಳನ್ನು ನೀಡಿವೆ.
ಆರಂಭದಲ್ಲೇ ಭಾಸನ ನಾಟಕಗಳನ್ನು ಪ್ರಯೋಗ ಮಾಡಿ ಗುರ್ತಿಸಿಕೊಂಡ ತಂಡವು ಆರಂಭದಲ್ಲೇ 50 ಜನರನ್ನೊಳಗೊಂಡ ನಟನೆಯಲ್ಲಿ, ರಂಗಸಜ್ಜಿಕೆಯಲ್ಲಿ, ಪ್ರಸಾದನದಲ್ಲಿ, ನಿರ್ದೇಶನದಲ್ಲಿ ಆಸಕ್ತಿ ಇರುವ ಎಲ್ಲಾ ವಿಭಾಗದಲ್ಲೂ ಸಕ್ರಿಯವಾಗಿರುವಂತೆ ತಮ್ಮನ್ನು ತೊಡಗಿಸಿಕೊಂಡಿವೆ.
ರಂಗಭೂಮಿಯ ಅಗಾಧ ಶಕ್ತಿ ಎಂದರೆ ಸಾಯೋ ಆಟವನ್ನು ನಕ್ಕು ನಗಿಸುತ್ತ ಉಣಬಡಿಸಿಬಿಡುವುದು. ಪಿಸುಗುಡುವ ಗುಟ್ಟನ್ನು ದನಿಯೇರಿಸಿ ನುಡಿವುದು, ಮಂಥರೆಯ ಕುರೂಪದೊಳಗೆ ಚೆಲುವನ್ನು ತೋರಿಬಿಡುವುದು. ಭವ್ಯ ಸಾಮ್ರಾಜ್ಯದ ವೈಭವವನ್ನು ಬರಿಯ ಒಂದು ಕಂಬದಲ್ಲಿ ಕಟ್ಟಿ ಬಿಡುವುದು. ಹಸಿವಿನ ಆಕ್ರಂದನವನ್ನು, ಪ್ರೇಮದ ತೊಳಲಾಟವನ್ನು, ಕಾಮವೆಂಬ ಸುಂದರ ಕೊಳಕುತನವನ್ನು, ನಗುವಿನೊಳಗಿನ ನೋವನ್ನು, ಮುಗ್ಧ ಕಂಗಳೊಳಗಿನ ಕ್ರೌರ್ಯವನ್ನು ಗಹನತೆಯೊಳಗಿನ ಮೌನವನ್ನು ಶಾಂತವಾಗಿ ತೆರೆದಿಟ್ಟು ಬಿಡುತ್ತದೆ. ಕಳ್ಳನ ವೇಷ ಹಾಕುತ್ತದೆ. ಪೊಲೀಸನನ್ನು ಗದರಿಸುತ್ತದೆ. ಅನ್ಯಾಯವನ್ನು ಪ್ರಶ್ನಿಸುತ್ತದೆ. ದೈರ್ಯವನ್ನು ಎದೆಗಿಳಖಿಸಿಬಿಡುತ್ತದೆ. ಕಂಗಳಲ್ಲಿ ಅತ್ಮಾಭಿಮಾನದ ಸೆಲೆಯುಕ್ಕಿಸಿ ವಿಶಾಲ ಜಗತ್ತನ್ನು ಮುಷ್ಠಿಯೊಳಗಿಟ್ಟು ಬಿಡುವ ರಂಗಭೂಮಿ ಸದಾ ನನ್ನ ಕಾರ್ಯಕ್ಷೇತ್ರ ಎನ್ನುತ್ತಾರೆ ಶಿವು ಹೊನ್ನಿಗನಹಳ್ಳಿ.