ದುಸ್ಥಿತಿಯೆಂದು ದೇಶದ ಸಾರ್ವಜನಿಕ ಆಸ್ತಿಯ ಮಾರಾಟ ಯೋಜನೆ ಎನ್‌ಎಂಪಿ : ಪ್ರೊ. ಎಂ ಚಂದ್ರ ಪೂಜಾರಿ

 ಎನ್‌ಎಂಪಿ ಕುರಿತು ಆರ್ಥಿಕ ತಜ್ಞ  ಪ್ರೊ. ಎಂ ಚಂದ್ರ ಪೂಜಾರಿಯವರ ಜೊತೆ ಜನಶಕ್ತಿ ಮೀಡಿಯಾ ನಡೆಸಿದ ಸಂದರ್ಶನ

ಹೊಸ ಆದಾಯದ ಮೂಲವನ್ನು ಹುಡುಕುವ ಸಲುವಾಗಿ ಕೇಂದ್ರ ಸರಕಾರ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ (ಎನ್‌ಎಂಪಿ) ಜಾರಿಮಾಡಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 6 ಲಕ್ಷ ಕೋಟಿ ಹಣ ಸಂಗ್ರಹಿಸುವ ಯೋಜನೆ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, “ಕುತ್ತು ತಪ್ಪಿಸಿದ ಆಸ್ತಿಗಳ ನಾಣ್ಯೀಕರಣ” ಎಂಬ ಭಾಷಿಕ ಮಾತುಗಳ ವೇಷತೊಡಿಸಿ, ಭಾರತದ ಸಾರ್ವಜನಿಕ ವಲಯವನ್ನು ಮಾರಾಟ ಮಾಡುವ ತನ್ನ ಯೋಜನೆಯನ್ನು ಪ್ರಕಟಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಎನ್‌ಎಂಪಿ ಯೋಜನೆಯ ಹೆಸರಿನೋಳಗೆನಿದೆ ರಸ್ತೆಗಳನ್ನು ಮಾರಾಟ ಮಾಡುವುದಕ್ಕೆ ಬಂದರುಗಳು, ವಿಮಾನ-ರೈಲ್ವೆ ನಿಲ್ದಾಣಗಳ, ರೈಲ್ವೆ ಹಳಿಗಳ, ದೂರಸಂಪರ್ಕ ಟವರ್, ಆಪ್ಟಿಕಲ್ ಫೈಬರ್ ಕೇಬಲ್, ಇಂಟರ್ನೆಟ್ ಸೇರಿದಂತೆ ಗೋದಾಮ ಮತ್ತು ಕ್ರೀಡಾಂಗಣಗಳವರೆಗೆ ಎಲ್ಲ ಆಸ್ತಿಗಳ ನಗದೀಕರಣ ಮಾಡಲಾಗುತ್ತಿದೆ.

ಇದರಿಂದಾಗಿ ಹೊಸ ಮೂಲಸೌಕರ್ಯಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಿ ಕೇಂದ್ರ ಸರಕಾರ ಈ ಯೋಜನೆಯ ಬಗ್ಗೆ ತನ್ನ ನಿಲುವನ್ನು ಸಮರ್ಥಿಸುತ್ತಿದೆ. ಕೇಂದ್ರ ಸರಕಾರ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಹೂಡಿಕೆ ಮಾಡುವ ಮೂಲಕ, ಆಸ್ತಿಗಳನ್ನು ಅವರಿಗೆ ಹಸ್ತಾಂತರ ಮಾಡುವ ಯೋಜನೆಯೇ ಎಮ್.ಎನ್.ಪಿ. ಯೋಜನೆ ಎಂದು ವಿರೋಧಪಕ್ಷಗಳು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದೆ. ಹಾಗಾಗಿ ಈ ಆಸ್ತಿಗಳ ನಗದೀಕರಣ ಎಂದರೆ ಏನು? ಇದನ್ನು ಯಾಕೆ ತರಲಾಗುತ್ತಿದೆ? ಬೇರೆ ಆದಾಯದ ಮೂಲಗಳು ಇರಲಿಲ್ಲವೇ? ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ದೇಶದ ಆಸ್ತಿಗಳನ್ನು ಮಾರಾಟ ಮಾಡುವುದು ಸರಿಯೇ? ಇದು ದೇಶದ ಆದಾಯವೋ ಅಥವಾ ಆಸ್ತಿಗಳ ಮಾರಾಟವೋ? ಎಂಬುದರ ಬಗ್ಗೆ ಆರ್ಥಿಕ ತಜ್ಞರಾದ ಪ್ರೊ. ಎಂ ಚಂದ್ರ ಪೂಜಾರಿ ಅವರೊಂದಿಗೆ ಒಂದು ಸಂವಾದ.

ಸಂದರ್ಶಕರು: ನಗದೀಕರಣದ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ ಏನು?

ಪ್ರೊ. ಎಂ ಚಂದ್ರ ಪೂಜಾರಿ: ಎನ್‌ಎಂಪಿಯು ದೇಶದ ಆರ್ಥಿಕ ಸ್ಥಿತಿ ಎಷ್ಟು ಕೆಟ್ಟು ಹೋಗಿದೆ ಎಂಬುದು ಹೇಳುತ್ತದೆ. ಮೂಲಸೌಕರ್ಯಗಳನ್ನು ಸೃಷ್ಟಿಮಾಡಲು ಕೇಂದ್ರ ಸರಕಾರದ ಸ್ವಾಧೀನ ಸಂಪನ್ಮೂಲ ಇಲ್ಲದಿರುವುದಕ್ಕೆ ಸರಕಾರ ಈ ಕ್ರಮಕೈಗೊಂಡಿದೆ. ಹೀಗಾಗಿ ಸ್ವತಂತ್ರ ಸಿಕ್ಕು 75 ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಒಂದುರೀತಿಯ ದಿವಾಳಿತನವನ್ನು ನೋಡುತ್ತಿದ್ದೇವೆ. ಸರಕಾರದ ಸ್ವಾಧೀನ ಸಂಪನ್ಮೂಲದ ಕೊರತೆ ಎಷ್ಟರಮಟ್ಟಿಗೆ ಇದೆಯೆಂದರೆ ಸಣ್ಣಪುಟ್ಟ ಆಸ್ತಿಯನ್ನು ಸೃಷ್ಟಿ ಮಾಡಲು ಆಗುತ್ತಿಲ್ಲ. ಇದು ತುಂಬಾ ಕೆಟ್ಟ ಪರಿಸ್ಥಿತಿ ಎಂದು ನನಗನಿಸುತ್ತದೆ. ಸಂಗ್ರಹಿಸಿದ ಮೊತ್ತವನ್ನು ಹೊಸ ಆಸ್ತಿಯನ್ನು ಸೃಷ್ಟಿ ಮಾಡಲಿಕ್ಕೆ ಬಳಸುತ್ತೇವೆ ಎನ್ನುವ ಸರಕಾರದ ಉದ್ದೇಶ ತುಂಬಾ ಸಂಕೀರ್ಣವಾಗಿದೆ. ಇಡೀ ಯೋಜನೆಯ ಮೊದಲ ಉದ್ದೇಶ ಎಂದರೆ ಜನರಿಗೆ ಒಳ್ಳೆಯ ಗುಣಮಟ್ಟದ ಮೂಲಸೌಕರ್ಯವನ್ನು ಒದಗಿಸುವುದು. ಎರಡನೆಯ ಉದ್ದೇಶ ಎಂದರೆ ಖಾಸಗಿ ಬಂಡವಾಳವನ್ನು ಮೂಲಸೌಕರ್ಯಗಳ ಸೃಷ್ಟಿ ಕಡೆಗೆ ಬಳಸುವುದು. ಮೂರನೆಯ ಉದ್ದೇಶವು ಉದ್ಯೋಗದ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಹೇಳುತ್ತದೆ. ನಾಲ್ಕನೆಯ ಉದ್ದೇಶವು ಈಗ ಸರಕಾರದ ಅಧೀನದಲ್ಲಿರುವ ಆಸ್ತಿಗಳು ಸರಿಯಾಗಿ ಬಳಕೆಯಾಗುತ್ತಿಲ್ಲ ಮತ್ತು ಗಳಿಸಬೇಕಾದ ಆದಾಯವನ್ನು ಕಳಿಸುತ್ತಿಲ್ಲ. ಹಾಗಾಗಿ ಅವುಗಳನ್ನು ಖಾಸಗಿಯವರಿಗೆ ನೀಡುವ ಮೂಲಕ ಆದಾಯ ಹೆಚ್ಚಿಸಬಹುದು.ಅದಕ್ಕಾಗಿ ಈ ಯೋಜನೆ ತರಲಾಗಿದೆ ಎಂದು ಸರಕಾರ.

ಸರಕಾರ ಹೇಳುವ ಪ್ರತಿ ಉದ್ದೇಶವನ್ನು ವಿಮರ್ಶೆ ಮಾಡಿದರೆ ಇದು ಹೇಳಿದಷ್ಟು ಸರಳವಾಗಿಲ್ಲ, ತುಂಬ ಸಂಕೀರ್ಣವಾಗಿದೆ ಎಂದೆನಿಸುತ್ತದೆ. ಅವರ ಮೊದಲ ಉದ್ದೇಶವನ್ನು ನೋಡಿದರೆ ಒಮ್ಮೆ ಖಾಸಗಿಯವರಿಗೆ ಆಸ್ತಿ ಹೋದರೆ ಅದು ಕೈಗೆಟುಕುವುದಿಲ್ಲ. . ಜನಸಾಮಾನ್ಯರಿಗೆ ಅದು ಸಿಗುವುದಿಲ್ಲ. ಕೇವಲ ಹಣ ಇದ್ದವರಿಗೆ ಮಾತ್ರ ಸಿಗುತ್ತದೆ. ಹಾಗಾದರೆ ಉದ್ದೇಶದಲ್ಲಿ ನ ಜನಸಾಮಾನ್ಯರು ಎಂದರೆ ಯಾರು? ನಿಜವಾದ ಸಾಮಾನ್ಯ ಜನರೋ ಅಥವಾ ಹಣ ಇರುವವರೊ? ಎರಡನೆಯದು, ಖಾಸಗಿಯವರು ಸರಕಾರಿ ಆಸ್ತಿಗಳನ್ನು ಮೇಲಿನ ಹೂಡಿಕೆಯ ಬಗ್ಗೆ ನನಗೆ ದೊಡ್ಡ ಅನುಮಾನವಿದೆ. ನಮ್ಮ ಭಾರತದ ಖಾಸಗಿ ಬಂಡವಾಳದ ಇತಿಹಾಸ ನೋಡಿದರೆ, ಅವರು 10% ಬಂಡವಾಳ ಹೂಡಿದರೆ ಇನ್ನುಳಿದ 90% ಬಂಡವಾಳ ನಮ್ಮ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂದಿರುತ್ತದೆ. ಅವರೇನು ತಮ್ಮ ಸಂಪೂರ್ಣ ಬಂಡವಾಳ ಹೂಡುವುದಿಲ್ಲ, ಮತ್ತೆ ಮತ್ತೆ ನಮ್ಮ ಸಾರ್ವಜನಿಕ ಬ್ಯಾಂಕುಗಳ ಮೇಲೆ ಅವಲಂಬಿತರಾಗುತ್ತಾರೆ.

ಮೂರನೆಯದಾಗಿ ಉದ್ಯೋಗದಲ್ಲಿ ಭಾರಿ ಕುಸಿತ ಖಚಿತವಾಗಿ ಆಗುತ್ತದೆ. ಖಾಸಗಿಯವರ ಅಫಿಶಿಯಲ್ ಮ್ಯಾನೇಜ್ಮೆಂಟ್ ಅಂದರೆ ವೆಚ್ಚವನ್ನು ಕಡಿಮೆ ಮಾಡುವುದು. ವೆಚ್ಚವನ್ನು ಕಡಿಮೆಮಾಡುವ ಮೊದಲ ಹೆಜ್ಜೆ ಎಂದರೆ ಅವರಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದು. ಇದರಿಂದ ನಿರ್ವಹಣೆ ವೆಚ್ಚವನ್ನು ಸಹ ಅವರು ಕಡಿಮೆ ಮಾಡಬಹುದು. ಇದೆಲ್ಲ ದನ್ನ ನೋಡಿದರೆ ಹೊಸ ಉದ್ಯೋಗ ಖಂಡಿತವಾಗಿಯೂ ಸೃಷ್ಟಿಯಾಗುವುದಿಲ್ಲ. ಇರುವ ಕೆಲಸಗಳು ಕೈತಪ್ಪಿ ಹೋಗುತ್ತವೆ. ಆರ್ಥಿಕ ಬೆಳವಣಿಗೆಯಲ್ಲಿ ಭಾಗಿಯಾಗಬೇಕೆಂದು ಮೂಲಸೌಕರ್ಯಗಳು ಬೇಕು ಮತ್ತು  ಪ್ರತಿಯೊಬ್ಬರಿಗೂ ಅದನ್ನು ಬಳಸಿಕೊಂಡು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಶಕ್ತಿ ಬೇಕಾಗುತ್ತದೆ. ಆ ಶಕ್ತಿ ಬರುವುದು ಯಾವಾಗ ಎಂದರೆ ಅವರಲ್ಲಿ ಸ್ವಲ್ಪ ಹಣಕಾಸು ಇದ್ದಾಗ ಮಾತ್ರ. ಈಗಿನ ಸರಕಾರದ ಯಾವುದೇ ಕ್ರಮಗಳು ತಳ ಸ್ಥರ ಜನರ ಸ್ವಾಧಿನ ಸಂಪನ್ಮೂಲಗಳ ಬಗ್ಗೆ ಇಲ್ಲ. ಪ್ರತಿಯೊಂದೂ ದೊಡ್ಡ ಉದ್ದಿಮೆಗಳಿಗೆ, ಬಂಡವಾಳಶಾಹಿಗಳಿಗೆ ಸಂಪನ್ಮೂಲಗಳನ್ನು ಕೊಡುವುದೇ ಆಗಿದೆ. ಅಲ್ಲಿಯೇ ಕೆಲಸ ಸೃಷ್ಟಿಯಾಗಬೇಕು, ಹೂಡಿಕೆ ಮಾಡಬೇಕು, ಅದರಲ್ಲಿಯೇ ದುಡಿದು ಗಳಿಸಬೇಕು ಹಾಗಾದರೆ ಮಾತ್ರ ಸ್ವಾಧೀನ ಸಂಪನ್ಮೂಲ ಬರುವುದು. ಹಾಗಾಗಿ ಆರ್ಥಿಕ ಬೆಳವಣಿಗೆ ಆಗುವುದು ಕಷ್ಟವೇ.

ಕೊನೇಯದು, unlocking values. ನನ್ನ ಮೂಲ ಪ್ರಶ್ನೆ ಎಂದರೆ, ಆಸ್ತಿಗಳು ಸರಕಾರದ ಸ್ವಾಧೀನದಲ್ಲಿದ್ದ ಗಳಿಸುವುದಿಲ್ಲ- ಖಾಸಗಿಯವರ ಕೈಯಲ್ಲಿ ಹೋದಾಗ ಗಳಿಸುತ್ತವೆ ಎಂದರೆ ಏನರ್ಥ !?. ಆದ ಮಾನವ ಸಂಪನ್ಮೂಲ, ಅದೇ ಹೆಸರು, ಅದೇ ಪ್ರಾಕೃತಿಕ ಸಂಪನ್ಮೂಲಗಳ ಬಳಕೆಯಿಂದ ವ್ಯವಹಾರ ಮಾಡುವಾಗ ಕೇವಲ ಖಾಸಗಿಯವರ ಕೈಯಲ್ಲಿ ಲಾಭವಾಗುತ್ತದೆ ಸರಕಾರದಿಂದ ಯಾಕೆ ಆಗಲ್ಲ.? ಹಾಗಿದ್ದರೆ ಇದಕ್ಕೆ ಹೊಣೆ ಯಾರು?

ನೀತಿಗಳನ್ನು ರಚನೆ ಮಾಡುವವರ ಮೇಲೆ ಇದರ ಹೊಣೆ ಜಾಸ್ತಿ ಇರುತ್ತದೆ ಹೊರತು ಅವುಗಳನ್ನು ಜಾರಿಗೊಳಿಸುವವರ ಮೇಲೆ ಇರುವುದಿಲ್ಲ. ನಮ್ಮ ಎಂಪಿ, ಎಂಎಲ್ಎ ಗಳೇ ನೀತಿಗಳನ್ನು ತರುವುದರಿಂದ ಅವರೇ ಇದಕ್ಕೆ ಹೊಣೆಗಾರರು. ಉದ್ಯೋಗ, ಶಿಕ್ಷಣ, ಆರ್ಥಿಕತೆಯ ನಿರ್ವಹಣೆ ಎಲ್ಲವೂ ಅವರೇ ಮಾಡಬೇಕಾಗುತ್ತದೆ. ಇದನ್ನು ಮಾಡುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂದರೆ  ಅದಕ್ಕೆ ಅವರೇ ಜವಾಬ್ದಾರರು. ನಾನು ಯಾವುದೇ ನಿರ್ದಿಷ್ಟ ಪಕ್ಷದ ಬಗ್ಗೆ ಮಾತಾಡುತ್ತಿಲ್ಲ. 90ರ ನಂತರದ ಆಡಳಿತದ ಬಗ್ಗೆ ಹೇಳುತ್ತಿದ್ದೇನೆ. ಸರಕಾರದ ಕೈಯಲ್ಲಿ ಜನರು ಒಂದು ರೀತಿಯ ಪ್ರಯೋಗದ ಪಶು ಗಳಾಗುತ್ತಿದ್ದಾರೆ. ಬ್ಯಾಂಕುಗಳ ಏಕೀಕರಣ, ರಾಷ್ಟ್ರೀಕರಣ, ಡಿಮೋನಿಟೈಸೇಶನ್ ಹೀಗೆ ಅನೇಕ ಹೊಸ ನೀತಿಗಳಿಗೆ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ. ತರುತ್ತಿರುವ ಹೊಸ ನೀತಿಗಳು ಜನರ ಹಿತದಲ್ಲಿ ಕಾರ್ಯನಿರ್ವಹಿಸದಿದ್ದರೆ ಅವುಗಳಿಗಾಗಿ ಅಧಿಕಾರಿಗಳು, ಜನನಾಯಕರು, ಸರಕಾರವೇ ಹೊಣೆಆಗುತ್ತದೆ.

ಸಂದರ್ಶಕರು: ಅನೇಕ ಜನರ ಪ್ರಕಾರ ಕೇಂದ್ರ ಸರಕಾರ ತಂದ ರಾಷ್ಟ್ರೀಯ ನಗದೀಕರಣ ಯೋಜನೆಯು ಸರಿಯಾದದ್ದು ಅಲ್ಲ. ದೇಶದ ಆಸ್ತಿ ಮಾರಾಟ ಸರಿ ಅಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ವಿರೋಧ ಮಾಡುವವರಿಗೆ ನಗದೀಕರಣ ಎಂದರೆ ಏನು ಅಂತಲೇ ಗೊತ್ತಿಲ್ಲ – ಎಂದು ಕೇಂದ್ರ ಸರಕಾರ ತನ್ನ ಯೋಜನೆಯ ಬಗ್ಗೆ ಸಮರ್ಥಿಸಿಕೊಳ್ಳುತ್ತಿದೆ. ಹಾಗಾದರೆ ಆರ್ಥಿಕ ಪರಿಭಾಷೆಯಲ್ಲಿ ನೋಡುವುದಾದರೆ ನಗದೀಕರಣ ಎಂದರೆ ಏನು?

ಪ್ರೊ. ಎಂ ಚಂದ್ರ ಪೂಜಾರಿ: ಸರಕಾರ ಇದು ಖಾಸಗೀಕರಣ ಅಲ್ಲ ಎಂದು ಹೇಳುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಖಾಸಗಿ ಯವರಿಗೆ ಮಾರಾಟ ಮಾಡುವುದು ಖಾಸಗೀಕರಣ ಆಗುತ್ತದೆ. ಹಾಗಾಗಿ ನಾವಿಲ್ಲಿ ಮಾರಾಟ ಮಾಡುತ್ತಿಲ್ಲ ಅದನ್ನು ಲೀಜ್ ಗೆ ಕೊಡುತ್ತಿದ್ದೇವೆ. ರಸ್ತೆ, ರೈಲ್ವೆ, ಅನಿಲ ಪೈಪ್ಲೈನ್, ಟೆಲಿಕಾಂ, ವಿಮಾನ ನಿಲ್ದಾಣಗಳು, ಸ್ಟೇಡಿಯಂಗಳು ಹೀಗೆ ಅನೇಕ ಸಾರ್ವಜನಿಕ ಆಸ್ತಿಯನ್ನು  (ಎಷ್ಟು ವರ್ಷಗಳಿಗೆ ಎಂದು ನಿರ್ದಿಷ್ಟವಾಗಿ ಗೊತ್ತಿಲ್ಲ) ಲೀಜ್ ಗೆ ಕೊಡಲಾಗುತ್ತಿದೆ. ಲೀಸ್ ಗೆ ಕೊಡುವಾಗ ಕೆಲವೊಂದು ಶರತ್ತುಗಳು ಇರುತ್ತವೆ ಮತ್ತೆ ಅದಕ್ಕೆ ಹಣವನ್ನು ಸಹ ನಿಗದಿ ಮಾಡಲಾಗಿದೆ. ರಸ್ತೆಗೆ 1.6 ಲಕ್ಷ ಕೋಟಿ, ರೈಲ್ವೆ ಗೆ 1.5 ಲಕ್ಷ ಕೋಟಿ ಹೀಗೇ ಒಟ್ಟು ಆರು ಲಕ್ಷ ಕೋಟಿ ಯಷ್ಟು ಹಣ ಲೀಜ್ ಗೆ ನಿಗದಿಮಾಡಲಾಗಿದೆ. ಈ ಮೊತ್ತವನ್ನು ಖಾಸಗೀಯವರಿಂದ ಗಳಿಸಲಾಗುತ್ತದೆ. ಖಾಸಗೀಯವರು ಅದರಿಂದ ಬರುವ ಅದಾಯ ಪಡೆಯಬಹುದು ಮತ್ತೆ ಅದರ ನಿರ್ವಹಣೆ ಕೆಲವೊಂದು ಬಾರಿ ಅಭಿವೃದ್ಧಿಯ ಹಕ್ಕನ್ನೂ ಅವರಿಗೆ ಕೊಟ್ಟಿರುತ್ತಾರೆ. ಇದನ್ನು ನಾವು ಟೋಲ್ ಗೇಟ್ ಗಳಲ್ಲಿ ಕಾಣಬಹುದು. ಈಗಾಗಲೇ ಅವುಗಳನ್ನು ಖಾಸಗಿಯವರಿಗೆ ನೀಡಲಾಗಿದೆ.

ಸರಕಾರದ ಪರವಾಗಿ ಅವರು ಹಣ ಪಡೆಯುತ್ತಾರೆ. ಮುಂದುವರೆದ ಭಾಗವಾಗಿ ಅಲ್ಲಿನ ನಿರ್ವಹಣೆಯ ಜೊತೆಗೆ ಅಭಿವೃದ್ಧಿಯ ಹಕ್ಕನ್ನು ಅವರಿಗೆ ನೀಡಬಹುದು. ಯಾವ ಯಾವ ವಿಭಾಗಗಳಿಗೆ ಯಾವ ರೀತಿಯ ಹಕ್ಕುಗಳನ್ನು ನೀಡುತ್ತಾರೆ ಎಂಬುದು ಇನ್ನೂ ಖಚಿತ ವಿಲ್ಲ. ಒಟ್ಟಾರೆಯಾಗಿ ಸರಕಾರ ಪದೇ ಪದೇ ಹೇಳುತ್ತಿರುವುದು ನಾವು ಮಾರಾಟ ಮಾಡುತ್ತಿಲ್ಲ , ಲೀಜ್ ಗೆ ಕೊಡುತ್ತಿದ್ದೇವೆ. ಲೀಜ್ ನಂತರ ಮತ್ತೆ ಸರಕಾರದ ಸ್ವಾಧೀನಕ್ಕೆ ಬಂದಾಗ ಹೇಗೆ ಕಾರ್ಯನಿರ್ವಹಿಸುವುದು ಎನ್ನುವ ಬಗ್ಗೆ ಯಾವುದೇ ಚರ್ಚೆ ಇಲ್ಲ.

ಸಂದರ್ಶಕರು : ನಮಗೆ ಯಕೆ ಈ ಸ್ಥಿತಿ ಬಂತು? ನಗದೀಕರಣ ಯೋಜನೆ ತರುವಷ್ಟು ನಮ್ಮ ಆರ್ಥಿಕ ಸ್ಥಿತಿ ಕೆಟ್ಟುಹೋಗಿದೆಯೇ?

ಪ್ರೊ. ಎಂ ಚಂದ್ರ ಪೂಜಾರಿ: ಇದಕ್ಕೆ ತುಂಬಾ ಸರಳ ಉತ್ತರ ಎಂದರೆ ಸರಕಾರದ ಸ್ವಾಧೀನದಲ್ಲಿ ದುಡ್ಡಿಲ್ಲ ಎಂದು. ಆದರೆ ಇಲ್ಲಿ ಪ್ರಶ್ನೆ ಉದ್ಭವವಾಗುವುದು ಯಾಕೆ ದುಡ್ಡಿಲ್ಲ ಎಂಬುದು. ಯಾಕೆ ದುಡ್ಡಿಲ್ಲ ಎಂಬುದಕ್ಕೆ ಆರ್ಥಿಕ ಬೆಳವಣಿಗೆ ಇಲ್ಲ ಎಂಬುದು ಉತ್ತರವಾಗಿ ಕಾಣುತ್ತಿದೆ. ಆದರೆ ಯಾಕೆ ಆರ್ಥಿಕ ಬೆಳವಣಿಗೆ ಆಗುತ್ತಿಲ್ಲ ಎಂಬುದೇ ಇಲ್ಲಿ ಬಹುಮುಖ್ಯವಾದ ಪ್ರಶ್ನೆ. ಸರಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯದಿಂದ ಬೆಳವಣಿಗೆ ಆಗುತ್ತಿಲ್ಲ. ಮೂಲಸೌಕರ್ಯಕ್ಕೂ, ಸಂಪನ್ಮೂಲ ಇಲ್ಲದಂತೆ ಸೃಷ್ಟಿಯಾಗುವುದಕ್ಕೆ ಸರಕಾರದ ಕೆಟ್ಟ ಆರ್ಥಿಕ ನೀತಿಗಳು ಕಾರಣ. ಅವುಗಳು ಏನೆಂದು ನಾವು ಒಮ್ಮೆ ನೋಡಬೇಕಾಗುತ್ತದೆ. 2016 ರಲ್ಲಿ ನಮ್ಮ ಭಾರತದ ಜಿಡಿಪಿ 8.26 ಇತ್ತು. ಅದೇ 2016ರಲ್ಲಿ ಕೇಂದ್ರ ಸರ್ಕಾರವು ಡಿಮಾನಿಟೈಸೇಷನ್ ಅನ್ನು ತಂದಿತು. ಆ ಸಂದರ್ಭದಲ್ಲಿ ಆರ್ಥಿಕ ತಜ್ಞರು ಡಿಮೋನಿಟೈಸೇಶನ್ ನಿಂದ ಜಿಡಿಪಿಯಲ್ಲಿ 1%ರಿಂದ 2% ಇಳಿಕೆ ಕಾಣಬಹುದು ಎಂದು  ಹೇಳಿದ್ದರು. 2017ರಲ್ಲಿ ಜಿಡಿಪಿಯು 8.26 ರಿಂದ 7ಕ್ಕೆ ಇಳಿಯಿತು. ನಮ್ಮ ಇಷ್ಟು ದೊಡ್ಡ ದೇಶದಲ್ಲಿ ಸಾಕಷ್ಟು ವಿವಿಧ ಉದ್ದಿಮೆಗಳು ಇರುವಂತಹ ದೇಶದಲ್ಲಿ GST ನಿಂದ ದೊಡ್ಡ ಹೊಡೆತ ಕಂಡಿತು. ಇದರ ಪರಿಣಾಮವಾಗಿಯೇ 2018ರಲ್ಲಿ ಜಿಎಸ್ಟಿ ಯು ಏಳರಿಂದ ಆರಕ್ಕೆ ಇಳಿಯಿತು. ಇಷ್ಟೊತ್ತಿಗಾಗಲೇ ನಮ್ಮ ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗಿತ್ತು. ಇನ್ನೂ 2020ರಲ್ಲಿ ಕೊರೋನಾ ಹಾವಳಿ ಶುರುವಾಯಿತು.

2020ರ ಮಾರ್ಚ್ 24ಕ್ಕೆ ಅಧಿಕೃತವಾಗಿ ಲಾಕ್ಡೌನ್ ಶುರುವಾಗಿತ್ತು. ಈ ಲಾಕ್‌ಡೌನ್ ಶುರುವಾಗುವ ಮುಂಚೆಯೇ ನಮ್ಮ ದೇಶದ ಜಿಡಿಪಿ ಯು ಮೂರಕ್ಕೆ ಇಳಿದಿತ್ತು. 2016ರ ಜಿಡಿಪಿಯನ್ನು ನೋಡಿದರೆ ಲಾಕ್ಡೌನ್ ಶುರುವಾಗುವ ಮುಂಚೆ ಭಾರತದ ಡಿಡಿಪಿಯು ಸುಮಾರು 5% ತಿಳಿದುಹೋಗಿತ್ತು. ಲಾಕ್ಡೌನ್ ಪ್ರಾರಂಭದಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಆರ್ಥಿಕ ಬೆಳವಣಿಗೆಯು -24 ಆಗಿತ್ತು. ಲಾಕ್ಡೌನ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಆರ್ಥಿಕ ಬೆಳವಣಿಗೆಯ ಬೇರೆ ರೀತಿಯ ಆಯಾಮವನ್ನು ನೋಡುತ್ತಿದ್ದೆವು. ಈ ಸಂದರ್ಭದಲ್ಲಿ ದೇಶದ ಸಂಪೂರ್ಣ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು ಇದರಿಂದಾಗಿ ಆರ್ಥಿಕ ಬೆಳವಣಿಗೆಯು -24 ತಿಳಿದಿತ್ತು. ಇಂತಹ ಸ್ಥಿತಿ ಬಂದದ್ದು ಯಾವುದೇ ನೈಸರ್ಗಿಕ ವಿಪತ್ತು ಅಥವಾ ದೇವರ ಕೋಪದಿಂದ ಅಲ್ಲ ಇದಾಗಿದ್ದು ಕೇವಲ ಮನುಷ್ಯ ನಿರ್ಮಿತ ಆರ್ಥಿಕ ನಿರ್ವಹಣೆಯ ವೈಫಲ್ಯದಿಂದ ಮಾತ್ರ. ಎಂತಹ ಸ್ಥಿತಿಗೆ ನಾವು ಬಂದು ನಿಂತಿದ್ದೇವೆ ಎಂದರೆ ಸ್ವಲ್ಪವೂ ಆರ್ಥಿಕ ಬೆಳವಣಿಗೆಯ ಏರುಮುಖ ಕಾಣುತ್ತಿಲ್ಲ. ಇಲ್ಲಿ ಇಲ್ಲಿ ಮತ್ತೆ ಮೂಲಸೌಕರ್ಯ ಇದ್ದರೆ ಮಾತ್ರ ಆರ್ಥಿಕ ಬೆಳವಣಿಗೆ ಆಗುತ್ತದೆ ಎಂದು ಹೇಳುತ್ತಿದ್ದಾರೆ.

ಲಾಕ್‌ಡೌನ್‌ ಪ್ರಥಮ ಮತ್ತು ಎರಡನೇ ಹಂತಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿರುವ ಅಂತಹ ಕೋಟಿಗಟ್ಟಲೆ ಜನ ತಮ್ಮ ಕೆಲಸಗಳನ್ನು ಕಳೆದುಕೊಂಡರು. ಲವ್ ನಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ ಸರಕಾರವು 26 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಸಾಮಾನ್ಯ ಜನರ ಆರ್ಥಿಕ ಸ್ಥಿತಿಯನ್ನು ಹೆಚ್ಚು ಮಾಡುವಂತೆ ನೇರವಾಗಿ ಜನರಿಗೆ ಕೆಲವು ಸಾವಿರ ಕೋಟಿ ಹಣ ಕೂಡ ಮುಟ್ಟಿಲ್ಲ. ಜನರ ಕೈಯಲ್ಲಿ ಹಣ ಇಲ್ಲದಿದ್ದರೆ ಆರ್ಥಿಕ ವ್ಯವಹಾರ ನಡೆಯುವುದಿಲ್ಲ, ಆರ್ಥಿಕ ವ್ಯವಹಾರ ನಡೆಯದಿದ್ದರೆ ಆರ್ಥಿಕತೆಯ ಬೆಳವಣಿಗೆ ಸಾಧ್ಯವಿಲ್ಲ. 2016ರ ನಂತರದ ಸಂದರ್ಭದಲ್ಲಿ ತಂದಂತಹ ಅನೇಕ ಯೋಜನೆಗಳು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಮಾಡುವತ್ತ ಕೆಲಸ ಮಾಡಲಿಲ್ಲ. ಹಂತ ಹಂತಕ್ಕೂ ಅದು ಹಿಂದಕ್ಕೆ ಹೋಯಿತು. ಹಾಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಹ ಮಾರುವ ಸ್ಥಿತಿ ಬಂದಿದೆ.

ಸಂದರ್ಶಕ: ಆರ್ಥಿಕ ಸ್ಥಿತಿ ಹೀಗಿರುವ ಸಂದರ್ಭದಲ್ಲಿಯೂ ಮೂಲಸೌಕರ್ಯಗಳನ್ನು ಜನರಿಗೆ ಕೊಡಲಿ ಬೇಕಿದೆ. ಹಾಗಾಗಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಅನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಇಂತಹ ನಗದೀಕರಣದ ಬದಲಿಗೆ, ದೇಶದ ಆಸ್ತಿಗಳನ್ನು ಲೀಜ್ ಗೆ ಹಾಕುವ ಬದಲು ಬೇರೆ ಯಾವುದಾದರೂ ಮರ್ಗಗಳು ಇದ್ದವಾ?

ಪ್ರೊ. ಎಂ ಚಂದ್ರ ಪೂಜಾರಿ: ನಮ್ಮ ದೇಶದ ಜಿಡಿಪಿ ಈಗಲೂ ಕಡಿಮೆ ಇದೆ. 2020 21ರ ಪ್ರಾರಂಭಿಕ ಹಂತದಲ್ಲಿ -24 ಜಿಡಿಪಿ ಏರಿಕೆ ಇದ್ದರೆ ಇತ್ತು ಅದರ ನಂತರ -20 ಏರಿಕೆಯಾಯಿತು. 2019ರ ಜಿಡಿಪಿಯ ಲೆಕ್ಕ ನೋಡಿದರೆ ಯಾವುದೇ ರೀತಿಯ ದೊಡ್ಡ ಮಟ್ಟದ ಏರಿಕೆ ಇಲ್ಲಿಲ್ಲ. ಹಾಗಾಗಿ ನಮ್ಮ ಭಾರತದ ಜಿಡಿಪಿ ಏರಿಕೆ ಈಗಲೂ ಕೆಟ್ಟದಾಗಿದೆ. ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಇದೆ, ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲ, ಆರ್ಬಿಐನ ಪ್ರಕಾರ ಗ್ರಾಹಕರ ವಿಶ್ವಾಸ ಸಂಪೂರ್ಣವಾಗಿ ಕುಸಿದು ಹೋಗಿದೆ. ಸ್ಟಾಕ್ ಎಕ್ಸ್ಚೇಂಜ್ ಮಾತ್ರ ಜೂಜಿನ ರೀತಿಯಲ್ಲಿ ನಡೆಯುತ್ತದೆ. ಇದಕ್ಕೂ ನಮ್ಮ ಆರ್ಥಿಕ ಬೆಳವಣಿಗೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇಂತಹ ಸಂದರ್ಭದಲ್ಲಿ ಮಾನಿಟೈಸೇಶನ್ ಅಥವಾ ಖಾಸಗೀಕರಣ  ಕೂಡ ಸರಕಾರಕ್ಕೆ ದೊಡ್ಡ ಮಟ್ಟಿನ ಹಣ ತಂದುಕೊಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಇಂತಹ ಸಂದರ್ಭದಲ್ಲಿ ಇವುಗಳನ್ನು ಬಿಟ್ಟು ಕನಿಷ್ಠ 2-3 ಬೇರೆ ಅವಕಾಶಗಳು ಇವೆ. ಕೆಲವೊಂದು ಅವಕಾಶಗಳು ಹೇಗಿದೆ ಎಂದರೆ, ಅವುಗಳನ್ನು  ವಿವರವಾಗಿ ಹೇಳಿದರೆ ಆಶ್ಚರ್ಯವಾಗಬಹುದು. ಆದರೆ ನಾವು ಆ ದಿಸೆಯಲ್ಲಿ ಯೋಚನೆ ಮಾಡಲು ತಯಾರಿಲ್ಲ.

ಇವತ್ತು ಇದ್ದಂತಹ ಆಸ್ತಿಗಳು ಸಹ ಬಡವರ ಮೇಲೆ ಪರೋಕ್ಷವಾಗಿ ಹಾಕಿದ ತೆರಿಗೆ ಯಿಂದಲೇ ಆದದ್ದು. ಬಡವರ ಮೇಲೆ ಹೀಗೆ ಪರೋಕ್ಷವಾಗಿ ತೆರಿಗೆ ಹಾಕುವ ಬದಲು ಬೇರೆ ಹಾದಿಗಳು ಇದೆ.  ಸಾರ್ವಜನಿಕ ಆಸ್ತಿಗಳನ್ನು ಮಾಡುವ ಬದಲು ಬಂಗಾರದ ಮನುಷ್ಯ ಮಾಡಬಹುದು. ಸಾಮಾನ್ಯ ಜನರಲ್ಲಿರುವ ಬಂಗಾರದ ಬಗ್ಗೆ ನಾನು ಮಾತಾಡುತ್ತಿಲ್ಲ, ಗುಡಿಗುಂಡಾರಗಳಲ್ಲಿ ಲೆಕ್ಕವಿಲ್ಲದೆ ಕೋಟಿಗಟ್ಟಲೆ ಬೆಲೆ ಇರುವ ಬಂಗಾರದ ಬಗ್ಗೆ ಮಾತಾಡುತ್ತಿದ್ದೇನೆ. ಬಂಗಾರವನ್ನು ನಾವು ಮಾಡಲೇಬೇಕೆಂದೇನಿಲ್ಲ ಅದರ ಬಾಂಡುಗಳನ್ನು ಮಾಡಿ ಅದರಿಂದ ನಾವು ಹಣಗಳನ್ನು ಪಡೆಯಬಹುದು. ಯಾಕೆ ಈ ರೀತಿ ಮಾಡಿ ಹಣ ಪಡೆಯಬಾರದು ಮತ್ತು ಅವುಗಳನ್ನು ಬಳಸಿಕೊಂಡು ಮೂಲಸೌಕರ್ಯಗಳ ಏಳಿಗೆಗಾಗಿ ಕೆಲಸ ಮಾಡಬಾರದು! ಇದು ಮೊದಲನೇ ದಾರಿ.

ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲ, ನಿರುದ್ಯೋಗ ಹೆಚ್ಚಾಗುತ್ತಿದೆ, ಬಡತನ ಹೆಚ್ಚಾಗುತ್ತಿದೆ ಎಂದು ಒಂದೆಡೆ ನಾವು ಹೇಳುತ್ತಿದ್ದೇವೆ. ಇದೆಲ್ಲದರ ಮಧ್ಯೆ ಕೋಟ್ಯಾಧಿಪತಿಗಳ ಆಸ್ತಿ ಹೆಚ್ಚಾಗಿದೆ. ಇದೇ ಮಾನವ ಸಂಪನ್ಮೂಲಗಳನ್ನು, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕೋಟ್ಯಾಧಿಪತಿಗಳ ಪ್ರತಿಶತ 35ರಷ್ಟು ಆಸ್ತಿ ಹೆಚ್ಚಾಗಿದೆ. ಸರಕಾರ ಇಂತಹ ಕೋಟ್ಯಾಧಿಪತಿ ಗಳಿಗೆ ಹೆಚ್ಚಿನ ತೆರಿಗೆ ಹಾಕಿ ಕೆಲವು ಕೋಟಿ ಹಣವನ್ನು ಗಳಿಸಬಹುದಲ್ಲವೇ? ಈ ಕೋಟ್ಯಾಧಿಪತಿಗಳ ಬಳಿ ಭಾರತದ ಒಂದು ವರ್ಷದ ಜಿಡಿಪಿಗೆ ಸಮ ಆಗುವಷ್ಟು ಆಸ್ತಿಯನ್ನು ಇವರು ಹೊಂದಿದ್ದಾರೆ. ಹಾಗಾಗಿ ಇವರಲ್ಲಿಂದ ಕೆಲವು ಲಕ್ಷ ಕೋಟಿ ಹಣ ತೆರಿಗೆಯ ಮೂಲಕ ಪಡೆಯಬಹುದು. ಇದು ಎರಡನೆಯ ದಾರಿ.

ಇನ್ನು ಮೂರನೆಯ ದಾರಿಯೆಂದರೆ ಡೆಡ್ ಮೋನೇಟೈಸೇಶನ್. ಅಂದರೆ ಸಾಲ ಪಡೆಯುವುದು. ಹೀಗೆ ಸಾಲ ಪಡೆಯುವುದರಿಂದ ಪ್ರತಿಯೊಬ್ಬರ ತಲೆಯ ಮೇಲೂ ಬರುತ್ತದೆ ಆದರೆ ಕನಿಷ್ಠಪಕ್ಷ ಹಣಕಾಸಿನ ವ್ಯವಹಾರವಾದರೂ ಶುರುವಾಗುತ್ತದೆ. ಹೀಗೆ ನಾನು ಈ ಮೂರು ಪರ್ಯಾಯವನ್ನು ಯೋಚಿಸಿದ್ದೇನೆ. ಇವುಗಳನ್ನು ಮಾಡುವ ಮೂಲಕ ನಾವು ಬೇರೆ ಹಾದಿಗಳನ್ನು ಹುಡುಕಬಹುದು ಎಂದು ನನಗನಿಸುತ್ತದೆ.

ಇದು ಯಾವು ನಮಗೆ ಸರಿ ಅನಿಸದಿದ್ದರೆ ಆಸ್ತಿಗಳನ್ನು ಲೀಜ್ ಕೊಡುವ ಬದಲು ಮಾರಾಟ ಮಾಡುವುದೇ ಒಳ್ಳೆಯದೆಂದು ನನಗನ್ನಿಸುತ್ತದೆ. ಈ ರೈಲ್ವೆ, ವಿಮಾನ ನಿಲ್ದಾಣ ಗಳನ್ನು ಲೀಜ್ ಗೆ ಕೊಡುವಾಗ ಯಾವ ಸ್ಥಿತಿಯಲ್ಲಿ ಇರುತ್ತವೆಯೋ ನಂತರ ನಮಗೆ ವಾಪಸ್ಸು ಕೊಡುವಾಗ ಸಂಪೂರ್ಣ ಸವಕಳಿ ಆಗಿದ್ದರೆ, ಲೀಜ್ ಗೆ ಕೊಟ್ಟು ಪಡೆದ ಹಣಕ್ಕಿಂತ ಅವುಗಳ ರಿಪೇರಿಗೆ ಹೆಚ್ಚಿನ ಹಣ ಸುಜರಿಯುವ ಹಾಗಾದರೆ, ಅವುಗಳನ್ನು ಮಾರುವುದೇ ಒಳಿತಲ್ಲವೇ!.

ಸಂದರ್ಶಕ : ಹಿಂದೆ ಕೇಂದ್ರ ಸರ್ಕಾರವು ಡಿಮಾನಿಟೈಸೇಷನ್,  ಜಿಎಸ್ಟಿ ಇಂತಹ ಅನೇಕ ಯೋಜನೆಗಳನ್ನು ತಂದಾಗವಾವುಗಳ ಬಗ್ಗೆ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳಲು ಆಗಿಲ್ಲ. ಅವರ ಮೂಲ ಉದ್ದೇಶ ಜಾರಿಯಾಗಲಿಲ್ಲ. ನಗದೀಕರಣ ದಲ್ಲಿ ಏನಾದರೂ ಅಂತಹದ್ದು ಕಾಣಿಸುತ್ತಾ?

ಪ್ರೊ. ಎಂ ಚಂದ್ರ ಪೂಜಾರಿ: ಸರ್ಕಾರದ ದೊಡ್ಡ ಸಮಸ್ಯೆ ಎಂದರೆ ಇದು ತಜ್ಞರ ಮಾತು ಕೇಳುವುದಿಲ್ಳ ಮತ್ತು ವಿರೋಧ ಪಕ್ಷದವರನ್ನು ವಿಶ್ವಾಸದಲ್ಲಿ ತೆಗೆದುಕೊಳ್ಳುವುದಿಲ್ಲ. ಅವತ ನಿಯಮಗಳ ಬಗ್ಗೆ ಜನ ಚರ್ಚೆ ಮಾಡ್ತಾರೆ, ಬರೀತಾರೆ ಇಂತಹುಗಳನ್ನ ಅವರು ಸಹಿಸುವುದಿಲ್ಲ. ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಗೆದ್ದು ಕುರ್ಚಿ ಮೇಲೆ ಕೂತು ಸರ್ವಾಧಿಕಾರ ಮಾಡುವುದು ಪ್ರಜಾಪ್ರಭುತ್ವ ಅಲ್ಲ. ನಿಜವಾದ ಸಂಪೂರ್ಣ ಪ್ರಜಾಪ್ರಭುತ್ವ ಇರುವುದು ಚುನಾವಣೆಯ ನಂತರ. ಅಭಿವೃದ್ಧಿ ಮಟ್ಟ ಬೇರೆ ಬೇರೆ ಇರುವ ರಾಜ್ಯಗಳು, ಭಾಷೆ ಬೇರೆ, ಸಂಸ್ಕೃತಿಗಳು ಬೇರೆ ಇರುವಂತಹ ದೇಶದಲ್ಲಿ ನೀತಿಗಳನ್ನು ತರುವಾಗ ಹೆಚ್ಚಿನ ಪ್ರಜಾಪ್ರಭುತ್ವ ಗುಣ ಬೇಕಾಗುತ್ತದೆ. ಎಲ್ಲಾವರ್ಗದ ಏಳಿಗೆಯನ್ನು ಒಗ್ಗೂಡುಸುವ ಯೋಜನೆಯನ್ನು ತರಬೇಕೆಂದರೆ ಹೆಚ್ಚು ಹೆಚ್ಚು ಚರ್ಚೆ ಆಗಬೇಕು ಆದರೆ ಅದು  ನಡೆಯುವುದಿಲ್ಲ. ಡಿಮಾನಿಟೈಸೇಷನ್ ತರುವಾಗ ಸಂಸತ್ತಿನಲ್ಲಿ ಚರ್ಚೆ ಆಗಲಿಲ್ಲ. ಜಿಎಸ್ಟಿ ಬಗ್ಗೆ ಚರ್ಚೆ ನಡೆಯಿತು ಬೆಂಬಲವೂ ಸಿಕ್ಕಿತು. ಆದರೆ ಮತ್ತೆ ನಗದೀಕರಣ ದ ಬಗ್ಗೆ ಚರ್ಚೆ ನಡೆಯಲಿಲ್ಲ. ಇವರ ಕೆಲಸಗಳು ಸರ್ಜಿಕಲ್ ಸ್ಟ್ರೈಕ್‌ ರೀತಿಯಲ್ಲಿ ನಡೆಸುತ್ತಾರೆ. ಎಲ್ಲರಿಗೂ ಅಚ್ಚರಿ ಮೂಡಿಸಿ ಇಂದೇ ಏಳಿಗೆಯಾಯಿತು ಎನ್ನುವ ರೀತಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಯಾವುದೇ ಯೋಜನೆ ತರುವ ಮುನ್ನ ಚರ್ಚಿಸುವ ಗುಣ ಮತ್ತು ಸಂಸ್ಕೃತಿ ಇವರಲ್ಲಿ ಇಲ್ಲವೇ ಇಲ್ಲ. ಸರ್ವಾಧಿಕಾರಿಗಳ ರೀತಿಯಲ್ಲಿ ಯೋಜನೆಗಳನ್ನು ರೂಪಿಸುವುದು ಮತ್ತು ಅವುಗಳನ್ನು ಜಾರಿಗೊಳಿಸುವುದು. ಇದನ್ನು ಪುಷ್ಟೀಕರಿಸಲು ಅನೇಕ ಮಾಧ್ಯಮಗಳು ಸಹ ಅವರೊಂದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರು ಮಾಡುವ ಕೆಲಸಗಳು ಸರಿ ಎನ್ನುವಂತೆ ಅವರ ಪರ ವಾದಿಸಿ ಸುದ್ದಿಗಳಲ್ಲಿ ಹೇಳಲಾಗುತ್ತದೆ.

2015 ರಿಂದ ಶುರುವಾದ ಸಂಪೂರ್ಣ ಭಾರತದ ಖಾಸಗೀಕರಣ ನೀತಿಯನ್ನು ಶುರುಮಾಡಿದರು. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಖಾಸಗೀಕರಣ ಮಾಡಲು ಮುಂದಾದರೂ ಅದೂ ಆಗಲಿಲ್ಲ. ಕೆಲವು ಹಾರ್ಬರ್ ಗಳನ್ನು ಖಾಸಗೀಕರಣ ಮಾಡಲು ಮುಂದಾದರೂ ಅದೂ ಆಗಲಿಲ್ಲ. ಖಾಸಗೀಕರಣ ಮಾಡುವ ಮೂಲಕ ಕೆಲವು ಪ್ರತಿಶತ ಆರ್ಥಿಕ ಏಳಿಗೆ ಮಾಡುತ್ತೇವೆ ಎಂದು ಹೇಳಲಾಗಿತ್ತು, ಅದು ಕೂಡ ಸ್ವಲ್ಪವೂ ಆಗಿಲ್ಲ. ಇವರು ಯೋಜನೆ ರೂಪಿಸುವಾಗ ಲಕ್ಷ ಕೋಟಿ ಹಣದ ಬಗ್ಗೆ ಮಾತಾಡುತ್ತಾರೆ ಆಗುವುದು ಸಾವಿರ ಕೋಟಿ ಕೂಡ ಕಷ್ಟ. ಬೆಟ್ಟ ಕಡೆದು ಇಲಿ ತೆಗೆದಂತೆ ಆಗುತ್ತದೆ ಅವರ ಕೆಲಸ. ಹಾಗಾಗಿ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎನ್ನುವುದು ನೋಡಬೇಕು.

ಯಾವುದೇ ಖಾಸಗಿ ಅವರು ತಮ್ಮ ದುಡ್ಡನ್ನು ಹಾಕಬೇಕು ಎಂದರೆ, ಹಾಕಿದ ದುಡ್ಡು ವಾಪಸ್ಸು ಬರುತ್ತದೆ ಎಂದು ಅವರಿಗೂ ಸಹ ಭರವಸೆ ಬೇಕು. ದೇಶದ ಆರ್ಥಿಕ ಪರಿಸ್ಥಿತಿಯ ಇಂತಹ ಸಂದರ್ಭದಲ್ಲಿ ದೊಡ್ಡಮಟ್ಟದ ಖಾಸಗಿಯವರು ತಮ್ಮ ಹಣ ಹೂಡಲು ಮುಂದೆ ಬರುವುದು ಸಾಧ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ.

ಸಂದರ್ಶಕರು : ಈ ಎನ್ಎಂಪಿ ಯಾವ ಯಾವ ವಲಯಗಳ ಮೇಲೆ ಪ್ರಭಾವ ಬೀರಬಹುದು?

ಪ್ರೊ. ಎಂ ಚಂದ್ರ ಪೂಜಾರಿ: ಇದರ ಪ್ರಭಾವ ತುಂಬಾ ದೊಡ್ಡದಿದೆ. ಮೊದಲಿಗೆ ನೋಡಿದರೆ ಅತೀ ಹೆಚ್ಚು ಪ್ರಭಾವ ಬೀರುವುದು ಉದ್ಯೋಗಿಗಳ ಮೇಲೆ. ಸಾರ್ವಜನಿಕ ವಲಯದಲ್ಲಿ ಸುಮಾರು ಹತ್ತು ಲಕ್ಷ ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ, ಅವರೊಂದಿಗೂ ಇವರು ಚರ್ಚೆ ಮಾಡಲಿಲ್ಲ. ಖಾಸಗಿಯವರ ಕೈಗೆ ಸರಕಾರಿ ಆಸ್ತಿಗಳು ಹೋದಾಗ ಅಲ್ಲಿನ ಉದ್ಯೋಗ ಮಾಡುವವರ ಮೇಲಿನ ಹಕ್ಕನ್ನು ಅಂದರೆ ಹೊಸ ನೇಮಕಾತಿ ಮಾಡಿಕೊಳ್ಳುವುದು ಅಥವಾ ಇರುವವರನ್ನು ತೆಗೆದುಹಾಕುವುದು ಅಂತಹ ಹಕ್ಕನ್ನು ನಮಗೆ ನೀಡಬೇಕು ಎನ್ನುವ ನಿಯಮವನ್ನು ಖಾಸಗಿಯವರು ಖಂಡಿತವಾಗಿ ಕೇಳುತ್ತಾರೆ. ಖಾಸಗಿಯವರು ತಮ್ಮ ಲಾಭ ಹೆಚ್ಚಿಸಲು ವೆಚ್ಚವನ್ನು ಕಡಿಮೆ ಮಾಡುತ್ತಾರೆ. ಇದರಲ್ಲಿ ಬಹುದೊಡ್ಡ ಪಾಲು ಎಂದರೆ ಉದ್ಯೋಗದಲ್ಲಿರುವವರು ಸಂಖ್ಯೆ ಕಡಿಮೆ ಮಾಡುವುದು. 10 ಲಕ್ಷಕ್ಕಿಂತ ಹೆಚ್ಚು ಕೆಲಸ ಮಾಡುವ ಈ ಸಂದರ್ಭದಲ್ಲಿ ಖಾಸಗಿಯವರು ಸುಮಾರು ಅರ್ಧದಷ್ಟು ಜನರನ್ನು ವಾಪಸ್ಸು ಮನೆಗೆ ಕಳಿಸುವ ಊಹೆ ಇದೆ. ಸದ್ಯಕ್ಕೆ ಇದು ಸರಕಾರದ ಅಡಿಯಲ್ಲಿ ಇರುವುದರಿಂದ ಇಲ್ಲಿ ಮೀಸಲಾತಿ ಇದೆ. ಖಾಸಗಿಯವರ ಕೈಯಲ್ಲಿ ಹೋದ ನಂತರ ಮೀಸಲಾತಿಗೂ ಸಹ ದೊಡ್ಡ ಹೊಡೆತ ಬೀಳುತ್ತದೆ.

ಖಾಸಗೀಯವರ ಕೈಗೆ ಕೊಡುತ್ತಿರುವುದೇ ಲಾಭ ಹೆಚ್ಚು ಬರಲೆಂದು. ಎಲ್ಲಿ 100-150 ಲಾಭ ಬರುತ್ತಿತ್ತೋ ಸುಮಾರು 200 ನಮಗೆ ಲಾಭ ತರಲಿ ಎಂಬುದಲ್ಲೆ. ಇನ್ನೂ ಅವರು ಲಾಭ ಹೆಚ್ಚು ಮಾಡಲು ಖರ್ಚು ಕಮ್ಮಿ ಮಾಡುತ್ತರೆ. ಉದ್ಯೋಗಿಗಳ ಸಂಖ್ಯೆಯಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಖರ್ಚು ಕಡಿಮೆ ಮಾಡುತ್ತಾರೆ. ನಿರ್ವಹಣೆ ಕುಂಠಿತಗೊಂಡರೆ ಅದರ ಗುಣಮಟ್ಟ ಕೂಡ ಕಡಿಮೆಯಾಗುತ್ತದೆ. ಖಾಸಗಿಯವರು ತೆಗೆದುಕೊಂಡ ಸಂದರ್ಭದಲ್ಲಿ ಇರುವ ಆಸ್ತಿಯ ಸ್ಥಿತಿ ವಾಪಸ್ಸು ಸರಕಾರಕ್ಕೆ ಬರುವ ಸಂದರ್ಭದಲ್ಲಿ ಗುಣಮಟ್ಟ ಕಡಿಮೆಯಾಗುತ್ತದೆ. ಯಾವುದೇ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ನೀಡಿದ ತಕ್ಷಣ ಪ್ರಪ್ರಥಮವಾಗಿ ಆಗುವುದು ಅದರ ಬಳಸುವ ವೆಚ್ಚವನ್ನು ಹೆಚ್ಚು ಮಾಡಲಾಗುತ್ತದೆ. 4 ರಸ್ತೆಗಳ ಟೋಲ್ ನಲ್ಲಿ ನಾವು ಇದನ್ನು ನೋಡಿದ್ದೇವೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗಬೇಕಾದರೆ ಸರಿಸುಮಾರು 500-600  ರೂಪಾಯಿ ಟೋಲ್ ಕಟ್ಟಬೇಕಾಗುತ್ತದೆ. ಇದು ಸ್ವಲ್ಪ ಹಳೆಯ ಸುದ್ದಿ ಈಗ ಹೆಚ್ಚಾಗಿರಬಹುದು. ಕಾರನ್ನು ಖರೀದಿ ಮಾಡುವಾಗ ಸುಮಾರು 60ರಿಂದ 70 ಸಾವಿರ  ರೋಡ್ ಟ್ಯಾಕ್ಸ್ ಅನ್ನು ಕಟ್ಟುತ್ತೇವೆ ಮತ್ತೆ ಅದಕ್ಕೆ ಪೆಟ್ರೋಲ್ ಅಥವ ಡೀಸೆಲ್ ಹಾಕಿಸಿಕೊಳ್ಳುವ ಆಗಲೂ ನಾವು ಟ್ಯಾಕ್ಸ್ ಅನ್ನು ಕಟ್ಟುತ್ತೇವೆ. ರೋಡ್ತಾಕ್ಸ್ ಕಟ್ಟಿದ ಮೇಲೆಯೂ ನಾವು ಪುನಃ ಟೋಲ್ ನ್ನು ಕಟ್ಟಬೇಕಾಗುತ್ತದೆ. ಹೀಗೆ ಯಾವುದೇ ಖಾಸಗೀಯವರ ಕೈಗೆ ಸಿಕ್ಕ ಮೇಲೆ ಈ ಎಲ್ಲ ಖರ್ಚಿನ ಹೊಣೆ ಬೀಳುವುದು ಸಾಮಾನ್ಯ ಜನರ ಮೇಲೆಯೇ.

ಸುಮಾರು 27 ಸಾವಿರ ಕಿಲೋಮೀಟರ್ ನಷ್ಟು ರಸ್ತೆಯನ್ನು ಮೋನೇಟೈಸೇಶನ್ ಮಾಡಲಿಕ್ಕೆ ಹೊರಟಿದ್ದಾರೆ. ಇದರ ಪ್ರಪ್ರಥಮ ಕೆಲಸ ಅದರ ಬಳಕೆ ವೆಚ್ಚ ಏರಿಸುವುದು. ಹೀಗೆ ಏರಿಸುವುದರಿಂದ ಇದು ಎಲ್ಲಾ ಸಾಮಾನ್ಯ ಜನರ ಬಳಕೆಗೆ ಸಿಗುವುದಿಲ್ಲ.  ಕಷ್ಟಪಟ್ಟು ಸಿಕ್ಕರೂ ಅದು ತುಂಬಾ ಹೊರೆಯಾಗುತ್ತದೆ. ಖಾಸಗಿಯವರು ಲೀಜ್  ಗಾಗಿ ಕೊಡುವ  ಲಕ್ಷ ಕೋಟಿ ಹಣದಲ್ಲಿ ನಮ್ಮ ಸಾರ್ವಜನಿಕ ವಲಯದಿಂದಲೇ ಅತಿಹೆಚ್ಚು ಹಣ ಬರುತ್ತದೆ.  ಅವರು  ಹತ್ತರಿಂದ  ಹದಿನೈದು  ಪ್ರತಿಶತ ಹಣವನ್ನು  ಹಾಕುವುದಿಲ್ಲ. ಇಂತಹ ಅನೇಕ ಉದಾಹರಣೆಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು. 2011-12 ರ ನಂತರ ಹೀಗೇ ಪವರ್ ಉತ್ಪಾದನೆ, ರಸ್ತೆ ನಿರ್ಮಾಣಕ್ಕೆ ಅನೇಕ ವಿಷಯಗಳಿಗೆ ಹಲವಾರು ಕಂಪನಿಗಳಿಗೆ   ಈ ರೀತಿ ಕೊಟ್ಟ ಸಾಲಗಳು ಸಂಪೂರ್ಣವಾಗಿ ಹಿಂದಿರುಗಿ ಬಂದಿಲ್ಲ. ಆರ್.ಬಿ.ಐ ನ ಪ್ರಕಾರ ಸೆಪ್ಟೆಂಬರ್ 2021 ರ ತನಕ ಕಾರ್ಯನಿರ್ವಹಿಸದ ಆಸ್ತಿ 13% ಕ್ಕೆ ಏರಿದೆ. ನಾವು ಸುಮಾರು ನೂರು ರುಪಾಯಿ ಸಾಲ ಕೊಟ್ಟರೆ ಅದರಲ್ಲಿ ಕೇವಲ 87ರಷ್ಟು ಹಿಂದಕ್ಕೆ ಬರುತ್ತಿದೆ. ಈ ರೀತಿ ಸಾಲಕೊಡದೇ ಇರುವವರು ಎಂದು ಕೇವಲ ಮೋದಿ, ಮಲ್ಯ ಹೆಸರನ್ನ ನೋಡ್ತೇವೆ. ಆದರೆ ಅವರಿಗಿಂತ ದೊಡ್ಡ ದೊಡ್ಡ ಸಾಲಗಾರರು ಇದಾರೆ. ಅವರೆಲ್ಲರ ಮುಂದೆ ಮಲ್ಯ -ಮೋದಿ ಏನೂ ಅಲ್ಲ.

ಮೂಲಸೌಕರ್ಯ ಅಭಿವೃದ್ಧಿಗಾಗಿ ಭೂಷಣ್ ಸ್ಟೀಲ್ ಕಂಪನಿ ತೆಗೆದುಕೊಂಡ ಸಾಲ 55,022 ಕೋಟಿ. ಆದರೆ ಬ್ಯಾಂಕಿಗೆ ನಿಯಮಗಳ ಪ್ರಕಾರ ಇತ್ಯರ್ಥಗೊಂಡು ವಾಪಸ್ ಬಂದ ಹಣ 35,571 ಕೋಟಿ ಮಾತ್ರ. ಅಂದರೆ ಸುಮಾರು ಇಪ್ಪತ್ತು ಸಾವಿರ ಕೋಟಿ ಹಣ ಇಲ್ಲಿ ನಷ್ಟವಾಯಿತು. ಅದೇ ರೀತಿ ಇಸ್ಪಾಟ್ ಎನರ್ಜಿ ಕಂಪೆನಿ ಹನ್ನೊಂದು ಸಾವಿರ ಕೋಟಿ ಸಾಲ ಪಡೆದು ವಾಪಸ್ಸು ನೀಡಿದ್ದು ಕೇವಲ 2,800 ಕೋಟಿ ಮಾತ್ರ. ಇಸಾನ್ ಸ್ಟೀಲ್ 49 ಸಾವಿರ ಕೋಟಿ ಸಾಲ ಪಡೆದು 42ಸಾವಿರ ಕೋಟಿ ವಾಪಸ್ಸು ನೀಡಿತು. ಆಲೋಕ ಕಂಪನಿ 21,532 ಕೋಟಿ ಸಾಲ ಪಡೆದು ಕೇವಲ ಐದು ಸಾವಿರ ಕೋಟಿ ಹಿಂದಿರುಗಿಸಿತು. ಹೀಗೇ ಅರ್ಧದಷ್ಟು ಹಣ ಮತ್ತೆ ನಮ್ಮ ಸಾರ್ವಜನಿಕ ಬ್ಯಾಂಕುಗಳ ಮೆಲೇಯೆ ಬಂತು. ಇಂತಹ ಇತಿಹಾಸ ಇರುವ ಖಾಸಗಿ ವಲಯಗಳ ಈಗ ಹೇಗೆ ಹಿಂದಿರುಗಿಸುತ್ತವೆ ಎನ್ನುವುದು ಪ್ರಶ್ನೆ.

ಇಂತಹ ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಹೇಗೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ ಎನ್ನುವುದು ಅನುಮಾನ. ಮತ್ತೆ ಮತ್ತೆ ನಮ್ಮ ತೆರಿಗೆಯ ಹಣವೇ ಇಲ್ಲಿ ಉಪಯೋಗವಾಗುತ್ತದೆ ಬಿಟ್ಟರೆ ಕಂಪನಿಯ ಹಣವಲ್ಲ. ಇದು ಇಡೀ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ.

ಸಂದರ್ಶಕರು: ಒಟ್ಟಾರೆ ಸಂದರ್ಶನದ ಉದ್ದೇಶ ಎಂದರೆ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಅಥವಾ ಲೀಜ್ ಗೆ ಕೊಡುವುದು ಬೇಡ. ಅದರ ಬದಲಾಗಿ ಮೂಲಸೌಕರ್ಯ ಗಳನ್ನ ಕೊಡಲು ಬೇರೆ ಮಾರ್ಗಗಳು ಇದಾವೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಚನೆ ಮಾಡಬೇಕಿದೆ. ವಿರೋಧ ಪಕ್ಷಗಳು ಮತ್ತು ಆರ್ಥಿಕ ತಜ್ಞರು ನೀಡುವ ಸಲಹೆಗಳತ್ತ ಗಮನ ಹರಿಸಬೇಕು. ಹಿಂದಿನ ಸರಕಾರದ ಕೆಲಸಗಳ ಬಗ್ಗೆ ಮಾತನಾಡುವ ಬದಲು ಈಗಿರುವ ಸವಾಲುಗಳನ್ನು ಎದುರಿಸಿ ಹೇಗೆ ಕೆಲಸ ಮಾಡಬೇಕೆಂದು ಕೇಂದ್ರ ಸರ್ಕಾರ ಆಲೋಚನೆ ಮಾಡುವ ಮೂಲಕ ದೇಶದ ರಕ್ಷಣೆ ಆಗುತ್ತದೆ. ಇದೇ ದೇಶದ ಒಳಿತು.

ವಿಡಿಯೊ ಸಂದರ್ಶನ : ಗುರುರಾಜ ದೇಸಾಯಿ

ವಿಡಿಯೊ ಸಂದರ್ಶನವನ್ನು ಅಕ್ಷರ ರೂಪಕ್ಕಿಳಿಸಿದವರು : ಲವಿತ್ರಾ ವಸ್ತ್ರದ

ಸಂದರ್ಶನದ ಪೂರ್ಣ ವಿಡಿಯೊ ಈ ಕೆಳಗೆ ಇದೆ

 

Donate Janashakthi Media

Leave a Reply

Your email address will not be published. Required fields are marked *