ಎಸ್.ವೈ.ಗುರುಶಾಂತ್
ಮಹಿಷಾಸುರ ಮತ್ತು ಮಹಿಷ ದಸರಾ ಕುರಿತಾದಂತೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ಶಾಂತಿಯುತವಾದ ಆಚರಣೆಯನ್ನು ನಡೆಸಲು ಖಂಡಿತಕ್ಕೂ ಹಕ್ಕಿದೆ. ಆದರೆ ಸಂಘ ಪರಿವಾರ ಇದನ್ನು ನಡೆಸಲೇ ಕೂಡದು, ಅದನ್ನು ನಿರ್ಬಂಧಿಸಬೇಕು ಎನ್ನುವ ಆಕ್ರಮಣಕಾರಿ ವರ್ತನೆ ತೋರಿಸಿದ್ದು ಖಂಡನೀಯ. ಬೇಕಿದ್ದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಒಂದು ಶಾಂತಿಯುತ ಕಾರ್ಯಕ್ರಮವನ್ನು ನಡೆಸಿ ಪ್ರತಿಕ್ರಿಸಬಹುದಾಗಿತ್ತು.
ದಸರಾ ಹಬ್ಬ ಮುಗಿದಿದೆ. ಬರಗಾಲದ ನಡುವಿನಲ್ಲೂ ಅತ್ಯಂತ ಸಂಭ್ರಮದಿಂದ ಮೈಸೂರು ದಸರಾ ಸಮಾರೋಪಗೊಂಡಿದೆ!
ದಸರಾದ ಪ್ರಯುಕ್ತ ಹಲವು ಕಾರ್ಯಕ್ರಮಗಳು ಎಂದಿನಂತೆ ನಡೆದವು. ಆದರೆ, ವಿಶೇಷವಾಗಿ ಗಮನ ಸೆಳೆದದ್ದು ಮಹಿಷ ದಸರಾ, ಚಾಮುಂಡಿ ದಸರಾಗಳ ಆಚರಣೆ. ದಲಿತರ, ದಮನಿತರ ಪ್ರತಿನಿಧಿಯಾಗಿ ಮಹಿಷಾಸುರನನ್ನು ಸಾಂಕೇತೀಕರಿಸಿ ಹಲವಾರು ದಲಿತ ಸಂಘಟನೆಗಳು ಮತ್ತು ಪ್ರಗತಿಪರರು, ಚಿಂತಕರು ಮಹಿಷ ದಸರಾವನ್ನು ಆಚಸಿದರು. ಇದಕ್ಕೆ ವಿರುದ್ಧವಾಗಿ ಚಾಮುಂಡಿ ದಸರಾವನ್ನು ಸಂಘ ಪರಿವಾರ ನಡೆಸಿತು. ಚಾಮುಂಡಿಯ ಬಗೆಗೆ ಮತ್ತು ಮಹಿಷಾಸುರನ ಬಗೆಗೆ ಹಲವಾರು ಕಥೆಗಳು, ವಿಭಿನ್ನ ವಿಚಾರಗಳು ಇವೆ, ಇರುವುದು ಸಹಜ. ಯಾರಾದರೂ ತಮ್ಮದೇ ಅಭಿಪ್ರಾಯವನ್ನು ಇರಿಸಿಕೊಳ್ಳಲು, ವ್ಯಕ್ತಪಡಿಸಲು ಪೂರ್ಣ ಅವಕಾಶ ಮತ್ತು ಹಕ್ಕು ಇದೆ. ಮಹಿಷಾಸುರನು ಮಹಿಷ ಮಂಡಲವನ್ನು ಆಳಿದನು, ಮಹಿಷೂರು ನಿಂದ ಮೈಸೂರು ಹೆಸರು ಬಂದಿದೆ ಇತ್ಯಾದಿ ಅಭಿಪ್ರಾಯಗಳಿವೆ, ಅನೇಕ ವ್ಯಾಖ್ಯಾನಗಳಿವೆ. ಮತ್ತು ಇದನ್ನು ಒಪ್ಪದ, ಅಲ್ಲೆಗಳೆಯುವ, ವಿಭಿನ್ನ ವಿಷಯ, ಮೂಲ ಚೂಲಗಳನ್ನು ಪ್ರತಿಪಾದಿಸುವ ಹಲವು ಪ್ರಗತಿಪರ ಸಂಶೋದಕರೂ ಇದ್ದಾರೆ.
ಮಹಿಷಾಸುರ ಮತ್ತು ಚಾಮುಂಡಿ ಕುರಿತಾದಂತೆ ಪೌರಾಣಿಕ ಕಥೆಗಳು, ನಂಬಿಕೆಗಳು ಇರುವಂತೆ ಹಲವಾರು ಸಂಶೋಧನಾತ್ಮಕವಾದ ವಿಶ್ಲೇಷಣೆಗಳು ಸಹ ಇವೆ. ಇದ್ಯಾವವು ಅಂತಿಮ ಎಂದೇನಲ್ಲ. ಯಾವುದೇ ಐತಿಹಾಸಿಕ ಸಂಗತಿಗಳ ಬಗ್ಗೆ ಅಥವಾ ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳ ಬಗೆಗೆ ಅದರ ಸತ್ಯಾಸತ್ಯಗಳನ್ನು ಅರಿಯಲು ನಿರಂತರ ಸಂಶೋಧನೆ, ಸಂವಾದಗಳು ಅಗತ್ಯ. ಆ ಕಾರಣಕ್ಕಾಗಿ ಸತತವಾದ ಮುಕ್ತವಾದ ಚರ್ಚೆ ಜೀವಂತ ಇರಲೇಬೇಕಾಗುತ್ತದೆ. ಅಂತಹ ಪರ-ವಿರೋಧವಾದ ಚರ್ಚೆಗಳು ಅನಗತ್ಯವಲ್ಲ, ಅಗತ್ಯವಾಗಿವೆ. ಆದರೆ ಅಂತಹ ಚರ್ಚೆಗಳೇ ಕೂಡದು ಎನ್ನುವುದು ಖಂಡಿತಕ್ಕೂ ಸರ್ವಾಧಿಕಾರತ್ವವಾಗಿದೆ.
ಮಹಿಷಾಸುರ ಮತ್ತು ಮಹಿಷ ದಸರಾ ಕುರಿತಾದಂತೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ಶಾಂತಿಯುತವಾದ ಆಚರಣೆಯನ್ನು ನಡೆಸಲು ಖಂಡಿತಕ್ಕೂ ಹಕ್ಕಿದೆ. ಆದರೆ ಸಂಘ ಪರಿವಾರ ಇದನ್ನು ನಡೆಸಲೇ ಕೂಡದು, ಅದನ್ನು ನಿರ್ಬಂಧಿಸಬೇಕು ಎನ್ನುವ ಆಕ್ರಮಣಕಾರಿ ವರ್ತನೆ ತೋರಿಸಿದ್ದು ಖಂಡನೀಯ. ಬೇಕಿದ್ದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಒಂದು ಶಾಂತಿಯುತ ಕಾರ್ಯಕ್ರಮವನ್ನು ನಡೆಸಿ ಪ್ರತಿಕ್ರಿಸಬಹುದಾಗಿತ್ತು.
ಆದರೆ ಫ್ಯಾಶಿಸ್ಟರಿಗೆ ಚಿಂತನೆ ಸಂಶೋಧನೆ ವಾಸ್ತವಗಳ ಅಗತ್ಯವೇ ಕಾಣುವುದಿಲ್ಲ. ಇಡೀ ಹಬ್ಬವನ್ನು ತನ್ನ ಮತೀಯವಾದೀ ಮತ್ತು ಜಾತಿವಾದಿ ರಾಜಕಾರಣಕ್ಕೆ ಬಳಸಲು, ಪ್ರಗತಿಪರರನ್ನು ಹೀಗೆಳೆಯಲು ಯಾವುದೇ ಹಿಂಜರಿಕೆ ಇಲ್ಲದೆ ಅದು ಪ್ರಯತ್ನಿಸಿತು.
ಇದನ್ನೂ ಓದಿ: Mahisha Dasara| ಪೊಲೀಸ್ ಭದ್ರತೆಯಲ್ಲಿ ಮಹಿಷ ದಸರಾ; ನಿಷೇದಾಜ್ಞೆ ಜಾರಿ
ದಸರಾ ಮುಗಿದ ಬಳಿಕವೂ ಬಿಜೆಪಿ ಅದನ್ನು ನಿಲ್ಲಿಸಲು ಇಚ್ಚಿಸುತ್ತಿಲ್ಲ. ಬದಲಾಗಿ ಮತ್ತಷ್ಟು ರಾಡಿ ಎಬ್ಬಿಸಲು ನೋಡುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮಹಿಷಾ ದಸರಾ ಆಚರಣೆಗೆ ಕಾನೂನು ಬದ್ಧವಾಗಿ ಅವಕಾಶ ಕಲ್ಪಿಸಿದ ಸರ್ಕಾರದ ಮೇಲೆ ಮತ್ತೆ ಗೂಬೆಕೂರಿಸಲು ಹೊರಟಿದ್ದಾರೆ. ಮಹಿಷಾ ದಸರಾ ಆಚರಣೆಗೆ ಸರ್ಕಾರವೇ ಕುಮ್ಮಕ್ಕು ಕೊಟ್ಟಿದೆ ಎಂದು ಹೇಳತೊಡಗಿದ್ದಾರೆ. ಈ ಕೇಂದ್ರ ಸಚಿವೆ ತನ್ನ ಖಾತೆ ಕರ್ತವ್ಯ, ಕೆಲಸಗಳನ್ನು ಮರೆತು ಬಿಟ್ಟು ಕರ್ನಾಟಕದಲ್ಲಿ ಇಂತಹ ರಾಡಿ ಎಬ್ಬಿಸುವ ಕೋಮುವಾದಿ ಆಕ್ರಮಣಕಾರಿ ಮಾತುಗಳನಾಡುವ, ಅದಕ್ಕೆ ಮತ್ತಷ್ಟು ತಿದಿಯೂವ ಕೆಲಸದಲ್ಲೇ ನಿರತರಾಗಿರುವುದನ್ನು ನೋಡುತ್ತಲೇ ಬಂದಿದ್ದೇವೆ. ಒಂದು ರೀತಿಯಲ್ಲಿ ಇಂಥ ಕೆಲಸಗಳಿಗಾಗಿಯೇ ಕೇಂದ್ರ ಸಚಿವರನ್ನಾಗಿಸಿ ಸರಕಾರಿ ದುಡ್ಡಿನಲ್ಲಿ ಸಂಘ ಪರಿವಾರದ ಸ್ವಯಂಸೇವಕೀಯ ಕೆಲಸ ಮಾಡಲು ನೇಮಿಸಿದಂತೆ ಕಾಣುತ್ತಿದೆ. ಖಾತೆ, ಕೆಲಸಗಳನ್ನು ಮರೆತು ಖ್ಯಾತೆ ತೆಗೆಯುತ್ತಾ ಓಡಾಡುವ ಇವರಿಗೆ ಜನ ಸೂಕ್ತ ಪಾಠ ಕಲಿಸುವ ಅಗತ್ಯವಿದೆ.
ಹಾಗೆ ಹೇಳಬೇಕಾದ ಮತ್ತೊಂದು ವಿಷಯ ಎಂದರೆ ಇಂತಹ ಮಹಿಷ ದಸರಾದಲ್ಲಿ ಭಾಗವಹಿಸಿದ್ದ ವಿಚಾರವಾದಿ ಸಾಹಿತಿ ಕೆ.ಎಸ್. ಭಗವಾನ್ ರವರು ಅನಗತ್ಯವಾಗಿ ಕುವೆಂಪು ಅವರ ಹೆಸರನ್ನು ಎಳೆದು ತಂದದ್ದು ಮತ್ತು ಒಕ್ಕಲಿಗರ ಕುರಿತು ಅವರು ಹೇಳಿದ್ದಾರೆ ಎನ್ನುವ ಹೇಳಿಕೆಯನ್ನು ಉದ್ಧರಿಸಿ ಮಾತನಾಡಿದ್ದು ಅತ್ಯಂತ ಅಕ್ಷೇಪಾರ್ಹ. ಸಮಯ, ಸಂದರ್ಭ ಮತ್ತು ಅಗತ್ಯಗಳನ್ನು ಲೆಕ್ಕಕ್ಕೆ ಇಡದಂತೆ ನಾಲಿಗೆಯನ್ನು ಮನಸೋ ಇಚ್ಛೆ ಹರಿಬಿಡುವುದರ ಮೂಲಕ ಸಂಘ ಪರಿವಾರ ಕಾದಿದ್ದ ಅವಕಾಶಕ್ಕೆ ಕಾಳು ಹಾಕಿದರು. ಈ ಪ್ರೊಫೆಸರ್ ರವರು ನಿಜಕ್ಕೂ ಏನನ್ನು ಬಯಸುತ್ತಿದ್ದಾರೆ?
ವಿಡಿಯೋ ನೋಡಿ: ‘ತುಘಲಕ್’ ನಾಟಕವನ್ನು ಕಟ್ಟಿ ಕೊಟ್ಟಿದ್ದರ ಹಿಂದೆ ರೋಚಕ ಕಥೆ ಇದೆ – ಡಾ. ಶ್ರೀಪಾಧ್ ಭಟ್ Janashakthi Media