ಬೆಂಗಳೂರು : ಬೆಳ್ಳಂಬೆಳಗ್ಗೆಯೇ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೇ ‘ದುಷ್ಟ ಶಕ್ತಿ ಎದುರು ಸತ್ಯದ ಜಯ. ಸರ್ಕಾರವನ್ನ ಅಸ್ಥಿರಗೊಳಿಸಲು ವಾಮಮಾರ್ಗ, ಮೋಸದಿಂದ ಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ನಿಗ್ರಹಿಸಲಿ’ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾಹೀರಾತು ಪ್ರಕಟವಾಗಿದ್ದು, ದಸರಾ ಶುಭಾಶಯ ಕೋರುವ ಜಾಹೀರಾತು ನೆಪದಲ್ಲೇ ವಿರೋಧ ಪಕ್ಷಕ್ಕೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ. ದಸರಾ
ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ, ಇದು ಸರ್ಕಾರದ ಅಸ್ಥಿರಗೊಳಿಸಲು ಬಿಜೆಪಿಯಿಂದ ಷಡ್ಯಂತ್ರ ಅಂತಾ ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ದಸರಾಗೆ ಶುಭಾಶಯ ಕೋರುವ ಸರ್ಕಾರದ ಜಾಹೀರಾತಿನ ಮೂಲಕ ಬಿಜೆಪಿ ಹಾಗೂ ಜೆಡಿಎಸ್ಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ವಾಮಮಾರ್ಗದಿಂದ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುವುದಿಲ್ಲ ಎಂದು ದೋಸ್ತಿ ನಾಯಕರಿಗೆ ಜಾಹೀರಾತು ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ತಿರುಗೇಟು ನೀಡಿದೆ.
ಕಾಂಗ್ರೆಸ್ ಉಲ್ಲೇಖಿಸಿದ ವಿನಾಶಕಾರಿ ಶಕ್ತಿಗಳು ಯಾವುವು!?
ಪ್ರತಿಪದ: ಕೋಮುಗಲಭೆ-ಶಾಂತಿ ಸೌಹಾರ್ದತೆಯಿಂದ ನಿಗ್ರಹ.
ದ್ವಿತೀಯ: ಸಾಮಾಜಿಕ ಪಿಡುಗು-ವೈಜ್ಞಾನಿಕ ಅರಿವಿನಿಂದ ನಿವಾರಣೆ.
ತೃತೀಯ: ಶಾಂತಿಭಂಗ-ಸಾಮರಸ್ಯ ಕದಡುವವರ ನಿರ್ಮೂಲನೆ.
ಚತುರ್ಥಿ: ದುಷ್ಕೃತ್ಯ-ಕಠಿಣ ಶಿಕ್ಷೆ.
ಪಂಚಮಿ: ವಿಧ್ವಂಸಕತೆ-ಧೈರ್ಯ & ಶೌರ್ಯದಿಂದ ದಮನ.
ಷಷ್ಠಿ: ಅಶಾಂತಿ-ಕಾನೂನು ಸುವ್ಯವಸ್ಥೆಯಿಂದ ನಿವಾರಣೆ.
ಸಪ್ತಮಿ: ಪ್ರಚೋದನೆ-ಪ್ರೇರೇಪಿಸುವವರ ನಿರ್ಮೂಲನೆ.
ಅಷ್ಟಮಿ: ಸುಳ್ಳು ವದಂತಿ-ಮೂಲದಿಂದಲೇ ನಾಶ.
ನವಮಿ: ಅಪಪ್ರಚಾರ ಮಾಡುವವರ ಮೇಲೆ ಕ್ರಮ.
ಇವಿಷ್ಟು ವಿಚಾರಗಳನ್ನು ಕಾಂಗ್ರೆಸ್ ಪಕ್ಷ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಉಲ್ಲೇಖಿಸಿದೆ.
ಕಾಂಗ್ರೆಸ್ ಜಾಹೀರಾತಿನ ಬಗ್ಗೆ ಆಕ್ರೋಶ ಹೊರಹಾಕಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ರಾಜ್ಯವನ್ನು ಮೋಸದಿಂದ ಸ್ಥಿರಗೊಳಿಸಲು ಸರ್ಕಾರ ಹೊರಟಿದೆ. ಸ್ಥಿರಗೊಳಿಸುವುದು, ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ, ಚಾಮುಂಡಿ ತಾಯಿ ಕೈಯಲ್ಲಿ ಇದೆ ಎಂದು ಕಿಡಿಕಾರಿದ್ದಾರೆ.
ದುಷ್ಟಶಕ್ತಿಗಳು ಯಾರು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಹಣವನ್ನು ಇಂಥಾ ಜಾಹೀರಾತಿಗೆ ಖರ್ಚು ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ಪ್ರತಿಕ್ರಿಯೆ
ನೀವು ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ಜಾಹೀರಾತಿಗೆ ಬಿಜೆಪಿ ಟಾಂಗ್ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ನವರಾತ್ರಿ ಎಂಬುದಕ್ಕೆ ಹಿಂದೂ ಧರ್ಮದಲ್ಲಿ ಪೌರಾಣಿಕ ಮಹತ್ವವಿದೆ. ದುರ್ಗೆಯ ನವ ಅವತಾರಗಳನ್ನು ಆರಾಧಿಸುವ ಈ ಹಬ್ಬವನ್ನು ಭ್ರಷ್ಟ ಮುಖ್ಯಮಂತ್ರಿ, ಮುಡಾ ಹಗರಣದ ಎ1 ಆರೋಪಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿರುವುದು ಅಕ್ಷಮ್ಯ ಎಂದು ಕಿಡಿಕಾರಿದೆ.
ಆರೋಪಿ ಸಿದ್ದರಾಮಯ್ಯ ಅವರೇ, ಈ ರೀತಿ ಜಾಹೀರಾತು ನೀಡುವುದರಿಂದ ನೀವು ಮಾಡಿರುವ ಪಾಪಕರ್ಮ, ಭ್ರಷ್ಟಾಚಾರಗಳು ಪರಿಹಾರವಾಗುವುದಿಲ್ಲ. ರಾಮ ಸತ್ಯನೇ, ಆದರೆ ಸಿದ್ದರಾಮಯ್ಯ ಬ್ರಹ್ಮಾಂಡ ಸುಳ್ಳು. ಶ್ರೀರಾಮ ಸತ್ಯ ಅನ್ವೇಷಣೆಗಾಗಿ ಸೀತೆಯಿಂದ ದೂರವಾಗಿ ಸತ್ಯಶೋಧನೆ ನಡೆಸಿದ್ದ. ಅದೇ ಮಾರ್ಗದಲ್ಲಿ ನೀವು ನಡೆಯುವುದಾದರೆ ಸಿಎಂ ಪದವಿಗೆ ರಾಜೀನಾಮೆ ಸಲ್ಲಿಸಿ ಸತ್ಯಶೋಧನೆಗೆ ಅವಕಾಶ ನೀಡಿ ಎಂದು ಹೇಳಿದೆ.
ದಸರಾ ಹಬ್ಬ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ರಾಜ್ಯವನ್ನು ವಾಮಮಾರ್ಗ ಮತ್ತು ಮೋಸದಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ದುಷ್ಟಶಕ್ತಿಗಳನ್ನು ನಿಗ್ರಹಿಸಿ, ನಾಡವಾಸಿಗಳಿಗೆ ಸುಖ-ಶಾಂತಿಯನ್ನು ಕರುಣಿಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದರು.
ಇದನ್ನು ನೋಡಿ : ವಿಜಯೇಂದ್ರ ವಿರುದ್ಧದ ಪ್ರಕರಣ ಈಡಿ ಕಣ್ಣಿಗೆ ಕಾಣುತ್ತಿಲ್ಲವೇ?: ಪ್ರಿಯಾಂಕ್ ಖರ್ಗೆJanashakthi Media