ದುಷ್ಕರ್ಮಿಗಳಿಂದ ದಲಿತ ನಾಯಕ-ಮಾಜಿ ಶಾಸಕ ಡಾ.ಬಿ.ಎಂ. ತಿಪ್ಪೇಸ್ವಾಮಿ ಸಮಾಧಿ ನಾಶ

ದಾವಣಗೆರೆ: ವಿದ್ಯುತ್‌ನಗರದಲ್ಲಿರುವ ದಶಕಗಳ ಹಿಂದೆ ಜನಸಾಮಾನ್ಯರ ವೈದ್ಯರು ಎಂದೇ ಪ್ರಸಿದ್ಧರಾಗಿದ್ದ ಡಾ.ಬಿ.ಎಂ. ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದ ನಾಲ್ವರು ಸಮಾಧಿಗಳನ್ನು ಭಾನುವಾರ ಅಪರಿಚಿತ ತಂಡವೊಂದು ದಾಳಿ ಮಾಡಿ ಸಮಾಧಿಗಳನ್ನು ಒಡೆದು ಹಾಕಿರುವ ಘಟನೆ ನಡೆದಿದೆ.

ಭಾನುವಾರ(ನವೆಂಬರ್‌ 20) ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಯಾವ ಮುನ್ಸೂಚನೆ ನೀಡದೆ  ಗಣೇಶ ಹುಲ್ಲುಮನೆ ಮತ್ತು ಇತರರು ಜೆಸಿಬಿ ಯಂತ್ರಗಳನ್ನು ತಂದು ದಲಿತ ಮುಖಂಡರು, ಮಾಜಿ ಶಾಸಕರು ಆದ ದಿವಂಗತ ಡಾ. ಬಿ.ಎಂ. ತಿಪ್ಪೇಸ್ವಾಮಿ ಹಾಗೂ ಅವರ ಕುಟುಂಬದ ಮೂರು ಸದಸ್ಯರ ಸಮಾಧಿಗಳನ್ನು ಧ್ವಂಸ ಮಾಡಿರುವುದು ಕುಟುಂಬದ ಸದಸ್ಯರಲ್ಲಿ ಹಾಗೂ ಮಾದಿಗ ಸಮಾಜದಲ್ಲಿ ಆಘಾತ ಉಂಟು ಮಾಡಿದೆ ಎಂದು ತಿಪ್ಪೇಸ್ವಾಮಿ ಅವರ ಪುತ್ರಿ, ಲೇಖಕಿ ಬಿ.ಟಿ.ಜಾಹ್ನವಿ ಆತಂಕ ವ್ಯಕ್ತಪಡಿಸಿದ್ದಾರೆ.

‘1990ರಲ್ಲಿ ತಂದೆ ತಿಪ್ಪೇಸ್ವಾಮಿ ನಿಧನರಾಗಿದ್ದರು. ಅವರಿಗೆ ಸೇರಿದ ಜಾಗದಲ್ಲಿ ಸಮಾಧಿ ನಿರ್ಮಿಸಲಾಗಿತ್ತು. ಬಳಿಕ ಆ ಜಮೀನು ಅವರ ಮಗ, ನನ್ನ ಸಹೋದರ ಬಿ.ಟಿ. ಮಲ್ಲಿಕಾರ್ಜುನ ಅವರಿಗೆ ಸೇರಿತ್ತು. ಅವರು ಕೂಡ 2015ರಲ್ಲಿ ನಿಧನರಾಗಿದ್ದರಿಂದ ಅವರ ಪತ್ನಿ ಪುಷ್ಪಲತಾ, ಮಕ್ಕಳಾದ ರಾಹುಲ್‌, ನಕುಲ್‌ಗೆ ಜಂಟಿ ಖಾತೆ ಮಾಡಿ ನೀಡಲಾಗಿತ್ತು. ಇದೇ ಜಾಗದಲ್ಲಿ ತಾಯಿ ಯಲ್ಲಮ್ಮ ತಿಪ್ಪೇಸ್ವಾಮಿ, ಸಹೋದರರಾದ ಬಿ.ಟಿ. ಮೋಹನ್‌, ಬಿ.ಟಿ. ಮಲ್ಲಿಕಾರ್ಜುನ ಅವರ ಸಮಾಧಿಯೂ ಇತ್ತು. ಎಲ್ಲವನ್ನೂ ಹಾಳು ಮಾಡಿದ್ದಾರೆ’ ಎಂದು ಬಿ.ಟಿ. ಜಾಹ್ನವಿ ತಿಳಿಸಿದ್ದಾರೆ.

ಮಾದಿಗ ಸಮಾಜದಲ್ಲಿ ಜನಿಸಿದ ಡಾ. ಬಿ.ಎಂ. ತಿಪ್ಪೇಸ್ವಾಮಿ ತಮ್ಮ ಸ್ವಂತ ಶ್ರಮದಿಂದ ಉನ್ನತ ಶಿಕ್ಷಣ ಪಡೆದು ವೈದ್ಯಕೀಯ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದರು. ಅಲ್ಲದೆ, 1985ರಲ್ಲಿ ಭರಮಸಾಗರದ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ತಿಪ್ಪೇಸ್ವಾಮಿ, ಎಸ್ಸಿ-ಎಸ್ಟಿ ಕಮಿಷನ್ ಅಧ್ಯಕ್ಷರಾಗಿ ಜನಾಂಗದ ಏಳಿಗೆಗಾಗಿ ಶ್ರಮಪಟ್ಟಿದ್ದಾರೆ. ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ್ದಾರೆ. ಅಂತಹ ವ್ಯಕ್ತಿಯ ಸಮಾಧಿ ಧ್ವಂಸಗೊಳಿಸಿರುವುದು ವಿಷಾಧನೀಯ ಎಂದು ಬಿ.ಟಿ ಜಾಹ್ನವಿ ತಿಳಿಸಿದ್ದಾರೆ.

ಸಮಾಧಿ ಇರುವ ಜಾಗವನ್ನು ಪೂಜ್ಯಸ್ಥಾನವಾಗಿ ಭಾವಿಸಿ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಅಲ್ಲಿ ಬೇರ‍್ಯಾವುದೇ  ವೈಯಕ್ತಿಕ ಉದ್ದೇಶಕ್ಕೆ ಬಳಸದೇ ನಮಗೆ ಅನುಕೂಲವಾದ ಕಾಲಕ್ಕೆ ಡಾ.ತಿಪ್ಪೇಸ್ವಾಮಿಯವರ ಸ್ಮಾರಕವನ್ನು ಸ್ಥಾಪಿಸಿ ಅಲ್ಲಿ ನಮ್ಮ ಸಮಾಜದ ಏಳಿಗೆ ಮತ್ತು ಕಲ್ಯಾಣಕ್ಕಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿತ್ತು ಎಂದು ಬಿ.ಟಿ ಜಾಹ್ನವಿಯವರು ತಿಳಿಸಿದ್ದಾರೆ.

ಮಂಜೂರಾದ ಭೂಮಿ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದು, ಅಂತಿಮವಾಗಿ ಉಚ್ಚ ನ್ಯಾಯಾಲಯ ನಮ್ಮ ಪರವಾಗಿಯೇ ತೀರ್ಪು ನೀಡಿದೆ. ಹೀಗಿರುವಾಗ ಕಾನೂನು ಬಾಹಿರವಾಗಿ ಗಣೇಶ ಹುಲ್ಲುಮನೆ ಮತ್ತು ಇತರರು “ಈ ಜಾಗ ನಮ್ಮದು, ಇಲ್ಲಿರುವ ಸಮಾಧಿ ಯಾವುದೋ, ಯಾರದೋ ನಮಗೆ ತಿಳಿದಿಲ್ಲ ಅದು ಯಾರದ್ದೇ ಆಗಿರಲಿ ಆ ಸಮಾಧಿಯನ್ನ ನಾವು ಒಡೆದುಹಾಕಿದೆವು” ಎಂದು ಹೇಳೀ ಹಲ್ಲೆಗೆ ಮುಂದಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಬಿ.ಟಿ ಜಾಹ್ನವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭೂಮಾಪಿಯದ ಕೈವಾಡ : ಇದು ತೀರ ನೋವಿನ ಸಂಗತಿ ಮಾತ್ರವಲ್ಲ…. ದೌರ್ಜನ್ಯದ ಪರವಾವಧಿ ಹಾಗೂ ಇದರ ಹಿಂದೆ ದಾವಣಗೆರೆ ಭೂಮಾಪಿಯದ ಕೈವಾಡ ಇದೆ ಎಂದು ಸಿಐಟಿಯು ರಾಜ್ಯಕಾರ್ಯದರ್ಶಿ ಕೆ. ಮಹಾಂತೇಶ್‌ ಆರೋಪಿಸಿದ್ದಾರೆ.

ಈ ಕುರಿತು ಫೆಸ್ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ದಾವಣಗೆರೆಯಲ್ಲಿ ಖಾಲಿ ಇರುವ ಸೈಟ್ ಗಳನ್ನು ಹುಡುಕಿ ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ‌ ಮಾಡುವ ವ್ಯವಸ್ಥಿತ ಜಾಲ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಇದಕ್ಕೆ ಪಾಲಿಕೆ‌ ಅಧಿಕಾರಿಗಳು ಹಾಗೂ ಸಿಬ್ಬಂಧಿ ಶಾಮೀಲಾಗಿದ್ದಾರೆ‌ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.ಇತಿಹಾಸ‌ ಗೊತ್ತಿಲ್ಲದವ ಇತಿಹಾಸ ಹಾಳು‌ಮಾಡುತ್ತಾನೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಡಾ.ಬಿ.ಎಂ ತಿಪ್ಪೇಸ್ವಾಮಿ ಕರ್ನಾಟಕ ‌ಕಂಡ‌ ಅತ್ಯಂತ ಪ್ರಾಮಾಣಿಕ ವೈದ್ಯರು ಮಾಜಿ ಶಾಸಕರು ಸಾವಿರಾರು ಬಡವರಿಗೆ ಶಿಕ್ಷಣ ನೀಡಿದ‌‌ ಮಹಾತ್ಮ ಗಾಂಧಿ ಸ್ಮಾರಕ ಶಾಲೆಯ ಸಂಸ್ಥಾಪಕರು ಇಂತಹ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ಹೆಸರನ್ನು ‌ನಾಶಪಡಿಸುವ ವ್ಯವಸ್ಥಿತ ಪಿತೂರಿಯ ಭಾಗವಾಗಿ ಈ‌ ದಾಳಿ ನಡೆಸಿದೆ

ಈ‌ ದಾಳಿಯನ್ನು ಎಲ್ಲ ಜನಪರ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕು ಮತ್ತು ಜಿಲ್ಲಾಡಳಿತ ನಾಶಗೊಂಡ ಡಾ.ಬಿ.ಎಂ ತಿಪ್ಪೇಸ್ವಾಮಿ ಮತ್ತು ಅವರ‌ ಕುಟುಂಬದ ಸ್ಮಾರಕಗಳನ್ನು ಪುನರುಜ್ಜೀವನ ಗೊಳಿಸಲು ಅಗತ್ಯ ಕ್ರಮವಹಿಸಬೇ ಹಾಗೂ ಈ ಎಲ್ಲ ಈ ರೀತಿ ಅಮಾಯಕ ನಾಗರಿಕರ ಆಸ್ತಿ ನಾಶಪಡಿಸುವ ಮತ್ತು ಮನಸ್ಸಿಗೆ ಘಾಸಿ ಉಂಟು‌ಮಾಡುವ ವ್ಯಕ್ತಿಗಳು ಮತ್ತು ಶಕ್ತಿಗಳ ವಿರುದ್ದ ಕಠಿಣವಾದ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *