ಬೆಂಗಳೂರು: ‘ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಪಡೆಯುವ ಮೂಲಕ ಭ್ರಷ್ಟಾಚಾರದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಕೋಮುಗಲಭೆಗಳ ಮೂಲಕ ಬೊಮ್ಮಾಯಿ ಅವರು ಅಡಗಿ ಕುಳಿತುಕೊಳ್ಳುತ್ತಿರುವುದೇಕೆ? ಬೊಮ್ಮಾಯಿ ಅವರು ಹಾಗೂ ಬಿಜೆಪಿಯ ಗೂಂಡಾಗಳು ಅಲ್ಪಸಂಖ್ಯಾತರ ವಿರುದ್ಧ ನಿತ್ಯ ದಾಳಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ 40% ಕಮಿಷನ್ ಸರ್ಕಾರದ ವಿರುದ್ಧ ರಾಜ್ಯದ 50 ಸಾವಿರ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಸಚಿವರ ಮೇಲೆ 40% ಕಮಿಷನ್ ಪಡೆದ ಆರೋಪಗಳು ಕೇಳಿಬಂದಿದೆ. ಮುಖ್ಯಮಂತ್ರಿಗಳು ದುರ್ಬಲವಾಗಿದ್ದು, ಸಚಿವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ. ಬಿಜೆಪಿ ಸದಸ್ಯರೇ ಸಚಿವರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದು, ಈ ಆರೋಪವನ್ನು ಕಾಂಗ್ರೆಸ್ ಪಕ್ಷದ ಸದಸ್ಯರಾಗಲಿ, ಗುತ್ತಿಗೆದಾರರ ಸಂಘದವರಾಗಲಿ ಈ ಆರೋಪ ಮಾಡಿಲ್ಲ ಎಂದರು.
ಬೊಮ್ಮಾಯಿ ಅವರು, ಬಿಜಪಿ ಹಾಗೂ ಬಜರಂಗದಳದವರು, ಪಿಎಫ್‌ಐ, ಸಿಎಫ್‌ಐ ಹಾಗೂ ಎಸ್‌ಡಿಪಿಐ ಜತೆ ಸೇರಿಕೊಂಡು ರಾಜ್ಯದಲ್ಲಿ ದಿನನಿತ್ಯ ಬಿಗುವಿನ ವಾತಾವರಣ ಸೃಷ್ಟಿಸುತ್ತಿದೆ. ಆದರೆ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ಸ್ಪಷ್ಟ ಉತ್ತರ ನೀಡಿಲ್ಲ.
ಇನ್ನು ಸಚಿವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಪರಿಣಾಮ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಭಯಭೀತವಾಗಿರುವ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪತ್ರ ಬರೆದಿದ್ದಾನೆ. ಇದು ಬೊಮ್ಮಾಯಿ ಅವರು ಭ್ರಷ್ಟಾಚಾರವನ್ನು ನಿಯಂತ್ರಿಸುತ್ತಿದ್ದಾರೆಯೇ ಅಥವಾ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆಯೇ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ಈ 40% ಸರ್ಕಾರ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿ ತನ್ನ ವೈಫಲ್ಯಗಳನ್ನು, ದುರಾಡಳಿತವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ, ಈ ಸರ್ಕಾರ ತೊಲಗಲೇಬೇಕು ಎಂದು ಆಗ್ರಹಿಸಿದರು.
ಈ ಸರ್ಕಾರದಲ್ಲಿ ಬಹುತೇಕ ಸಚಿವರು ಕಳಂಕಿತರು. ಕೆಲವರು ಜಾಮೀನಿನ ಮೇಲೆ ಹೊರಗಿದ್ದರೆ, ಮತ್ತೆ ಕೆಲವರು ಜಾಮೀನಿನ ನಿರೀಕ್ಷಣೆಯಲ್ಲಿದ್ದಾರೆ. ಅವರನ್ನು ವಜಾಗೊಳಿಸಬೇಕು. ಒಂದು ವೇಳೆ ವಜಾಗೊಳಿಸದಿದ್ದರೆ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಡಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು.