ದುರಗಮುರಗಿ ಗುತ್ತೆವ್ವ ಈಗ ಗ್ರಾಪಂ ಅಧ್ಯಕ್ಷೆ

ಹಾವೇರಿ : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಗ್ರಾಮದ ಹೊರವಲಯದ ಗುಡಿಸಲಿನಲ್ಲಿ ವಾಸಿಸುವ ಗ್ರಾಮ ಪಂಚಾಯ್ತಿ ಸದಸ್ಯೆ ಗುತ್ತೆವ್ವ ದುರಗಮುರಗಿ ಗ್ರಾಪಂ ಅಧ್ಯಕ್ಷೆಯಾಗಲಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ, ಆ ಸಮುದಾಯಕ್ಕೆ ಸೇರಿದ ಮಹಿಳೆ ಇವರೊಬ್ಬರೇ ಆಗಿದ್ದಾರೆ. ಕಾಗಿನೆಲೆ ಗ್ರಾಮ ಪಂಚಾಯ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 4 ನೇ ವಾರ್ಡ್‌ಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಗುತ್ತೆವ್ವ 218 ಮತಗಳನ್ನು ಪಡೆದಿದ್ದರು. ತಮ್ಮ ಸಮೀಪದ ಸ್ಪರ್ಧಿಯನ್ನು 52 ಮತಗಳಿಂದ ಸೋಲಿಸಿದ್ದರು. ಗೆಲುವು ಸಾಧಿಸಿದಾಗ ಸಾಕಷ್ಟು ಜನ ಇವರಿಗೆ ಶುಭಾಶಯಗಳನ್ನು ಗೈದಿದ್ದರು. ಈಗ ಅಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಅಲೆಮಾರಿ ಜನಾಂಗದ ಮಹಿಳೆ ಈ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ.

ದುರುಗಮುರಗಿಗಳು ಸಾಮಾಜಿಕವಾಗಿ ತೀರಾ ಹಿಂದುಳಿದವರಾಗಿದ್ದಾರೆ. ಬುರು ಬುರು ವಾದ್ಯವನ್ನು
ಬಾರಿಸುತ್ತಾ, ದೇವರ ಫೋಟೊವನ್ನು ಇಟ್ಟು ಕೊಂಡು ಮೈಗೆಲ್ಲ ಚಾಟಿಯಿಂದ ಹೊಡೆದುಕೊಳ್ಳುತ್ತಾ ಊರೆಲ್ಲ ಸುತ್ತಿ ದಿನದ ಅನ್ನಸಂಪಾದಿಸುತ್ತಾರೆ. ಸೂಜಿ, ಪಿನ್ನು, ಹೇರ್‌ಪಿನ್‌, ದಾರ ಮಾರಿಕೊಂಡು ಜೀವನ ಸಾಗಿಸುತ್ತಿರುವ ಜನಾಂಗ ಇವರದ್ದಾಗಿದೆ.

ಅಲೆಮಾರಿ ಜನಾಂಗದಲ್ಲಿ ಅಕ್ಷರಸ್ತರಿಗಿಂತ ಅನಕ್ಷರಸ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗೀಗ ಸ್ತ್ರೀ ಪುರುಷರೀರ್ವರೂ ಶಿಕ್ಷಣಕ್ಕೆ ಆಧ್ಯತೆಯನ್ನು ನೀಡುತ್ತಿರುವ ಕಾರಣ ಹಲವಾರು ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿವೆ. ಆಧುನಿಕತೆಯಲ್ಲಿ ಹೊಸದನ್ನು ಮೈಗೂಡಿಸಿಕೊಂಡು ಮುಂದೆ ಸಾಗುವುದು ಬಹಳಕಷ್ಟ. ಅವರಷ್ಟಕ್ಕೆ ಅವರೆ ಬದಲಾವಣೆಗೆ ಕ್ರಾಂತಿ ಹಾಡುತ್ತಿದ್ದಾರೆ. ಸರಕಾರ ಅವರಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಫಲವಾಗುತ್ತಿದೆ. ಈಗಲೂ ಸ್ವಂತ ಮನೆ ಇಲ್ಲದೆ ಪರದಾಡುವ ಸ್ಥಿತಿ ಇವರದ್ದಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಇನ್ನಷ್ಟು ಬಲಗೊಳ್ಳಲು ಸರಕಾರ ಯೋಜನೆ ರೂಪಿಸಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *