ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂದು ದುನಿಯಾ ವಿಜಯ್ ಹೇಳಿದ್ದಾರೆ
ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಧರ್ಮಸ್ಥಳದ ಅಪ್ರಾಪ್ತ ಬಾಲಕಿ ಕುಮಾರಿ ಸೌಜನ್ಯ ಅವರ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಬೆಂಬಲ ವ್ಯಕ್ತಪಡಿಸಿದ್ದು, ‘ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ’ ಎಂದು ಮಂಗಳವಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಬಳಿ 2012ರ ಅಕ್ಟೋಬರ್ 9ರಂದು 17 ವರ್ಷದ ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಕುರಿತು 11 ವರ್ಷಗಳ ಕಾಲ ದೀರ್ಘ ತನಿಖೆ ನಡೆಸಿದ ಸಿ.ಬಿ.ಐನ ವಿಶೇಷ ನ್ಯಾಯಾಲಯವು ಆರೋಪಿ ಎಂದು ಗುರುತಿಸಲಾಗಿದ್ದ ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿತ್ತು. ಜೊತೆಗೆ ಪ್ರಕರಣದ ತನಿಖೆಯು ಲೋಪ-ದೋಷಗಳಿಂದ ಕೂಡಿದ್ದು, ಆದ್ದರಿಂದ ಪ್ರಕರಣವು ಮುಂದುವರಿದ ತನಿಖೆಗೆ ಅರ್ಹವಾಗಿದೆ ಎಂದು ಹೇಳಿತ್ತು.
ಇದನ್ನೂ ಓದಿ: ಸೌಜನ್ಯ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿ : ಮುಖ್ಯಮಂತ್ರಿಗೆ ನಿಯೋಗ ಮನವಿ
ನ್ಯಾಯಾಲಯದ ಈ ತೀರ್ಪಿನ ನಂತರ ಸೌಜನ್ಯ ಪರವಾಗಿ ಮತ್ತೆ ಹೋರಾಟ ಭುಗಿಲೆದ್ದಿದ್ದು ಪ್ರಕರಣವನ್ನು ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಆರಂಭದಲ್ಲಿ ಮೈಸೂರಿನಲ್ಲಿ ನಡೆದಿತ್ತು. ಅದರ ನಂತರ ಕಳೆದ ವಾರವಷ್ಟೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ನಡೆದಿತ್ತು. ಅಷ್ಟೆ ಅಲ್ಲದೆ, ಶಿವಮೊಗ್ಗದಲ್ಲೂ ಹೋರಾಟ ನಡೆಯಲಿದೆ. ಜೊತೆಗೆ ಆಗಸ್ಟ್ 21ರಂದು ಧರ್ಮಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಟ ದುನಿಯಾ ವಿಜಯ್, “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
“ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು” ಎಂಬ ಬುದ್ಧ ಹೇಳಿದ್ದಾರೆ ಎಂಬ ಮಾತನ್ನು ನಟ ವಿಜಯ್ ಟ್ವೀಟ್ ಅಲ್ಲಿ ಹಂಚಿಕೊಂಡಿದ್ದು, #Justiceforsoujanya (ಸೌಜನ್ಯಾಗೆ ನ್ಯಾಯ ಸಿಗಲಿ) ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಇದನ್ನೂ ಓದಿ: ನನ್ನ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ
ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.
ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ#Justiceforsoujanya pic.twitter.com/wlxF84dHY4
— Duniya Vijay (@OfficialViji) August 1, 2023
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ್ದ ಸೌಜನ್ಯ ಅವರ ತಾಯಿ ಕುಸುಮಾವತಿ, ಸೌಜನ್ಯ ಕಾಣೆಯಾದ ದಿನ ವೀರೇಂದ್ರ ಹೆಗಡೆ ಅವರ ಸಹೋದರ ಹರ್ಷೇಂದ್ರ ಹೆಗಡೆ ಅವರ ಸ್ನೇಹಿತ ಮಲ್ಲಿಕ್ ಜೈನ್ ಅನ್ನು ನನ್ನ ತಂಗಿ ನೋಡಿದ್ದಾರೆ. ಅಂದಿನಿಂದಲೆ ಕೊಲೆ ಆರೋಪಿ ಅವರೆ ಎಂದು ನಾವು ಹೇಳುತ್ತಲೆ ಬಂದಿದ್ದೇವೆ. ವಿರೇಂದ್ರ ಹೆಗಡೆ ಅವರ ತಮ್ಮ ಹರ್ಷೇಂದ್ರ ಹೆಗಡೆ ಬಳಿ ತೆರಳಿದಾಗ ರಾಜಕಾರಣಿಯೊಬ್ಬರು ನೀಡಿದ ಹಣವನ್ನು ಇಟ್ಟುಕೊಂಡು ಸುಮ್ಮನಿರಿ ಉಳಿದ ಮಕ್ಕಳನ್ನು ಚೆನ್ನಾಗಿ ಸಾಕಿ ಎಂದು ಹೇಳಿ, ನನ್ನ ತಮ್ಮನಿಗೆ ಕೂಡಾ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದರು.
ವಿಡಿಯೊ ನೋಡಿ: ನನ್ನ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ Janashakthi Media