ದುಡಿಯುವವರ ಮಹಾಧರಣಿ| ಸಂಘ ಪರಿವಾರದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ – ದೇವನೂರ ಮಹಾದೇವ

ಬೆಂಗಳೂರು:ಸಂಘ ಪರಿವಾರದ ಹಿಂದುತ್ವದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯ ಪಟ್ಟರು.

ಎಸ್‌ಕೆಎಂ ಜೆಸಿಟಿಯು ಜಂಟಿಯಾಗಿ ಕರೆ ನೀಡಿರುವ “ರಾಜಭವನ್ ಚಲೋ”
ಜನವಿರೋಧಿ ಮತ್ತು ಕಾರ್ಪೋರೇಟ್ ನೀತಿಗಳ ವಿರುದ್ದ ದುಡಿಯುವ ಜನರ ಮಹಾಧರಣಿಯ
“ಆನ್ಲೈನ್ ಬಹಿರಂಗ ಸಭೆ”ಯ ಅತಿಥಿಗಳಾಗಿ ಮಾತಾಡಿದರು. ಸಾಹಿತಿಗಳಾದ ರೆಹಮತ್ ತರೀಕೆರೆ, ಕೆ. ನೀಲಾ ಮಹಾಧರಣಿಯನ್ನು ಬೆಂಬಲಿಸಿ ಮಾತನಾಡಿದರು. ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪುರುಷೋತ್ತಮ ಬಿಳಿಮಲೆ, ಸೇರಿದಂತೆ ಸಹಸ್ರಾರು ಸಂಖ್ಯೆಯ ಸಾಹಿತಿಗಳು, ಲೇಖಕರು, ಕವಿಗಳು, ಕಲಾವಿದರು, ಚಿಂತಕರು ಮಹಾಧರಣಿಯನ್ನು ಬೆಂಬಲಿಸಿದ್ದಾರೆ.

ದೇವನೂರ ಮಹಾದೇವ ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.

ಸ್ನೇಹಿತರೇ,

ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ- ಯುವಜನ, ಮಹಿಳಾ ಸಂಘಟನೆಗಳ/ಸಮನ್ವಯ ಸಮಿತಿಯಾದ ’ಸಂಯುಕ್ತ ಹೋರಾಟ- ಕರ್ನಾಟಕ’ವು ರಾಷ್ಟ್ರಮಟ್ಟದ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಗೆ ಓಗೊಟ್ಟು ’72 ಗಂಟೆಗಳ ಮಹಾಧರಣಿ’ಯಲ್ಲಿ ಜೊತೆಗೂಡುತ್ತಿದೆ. ಹೋರಾಟದ ಎಲ್ಲಾ ಸಂಘಟನೆಗಳು ವಿಶಾಲವಾಗುತ್ತ ಹೀಗೆ ಜೊತೆಗೂಡುವುದೇ ಭಾರತದ ಉಳಿವಿಗೆ ಇರುವ ಏಕೈಕ ಮಾರ್ಗ ಅನಿಸುತ್ತಿದೆ.

ನಾನೀಗ ರೈತ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ- ಯುವಜನರ ಬವಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಈ ಸಂಘಟನೆಗಳ ನಾಯಕರುಗಳಿಗೆ ಕಾರ್ಯಕರ್ತರಿಗೆ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಈ ಸಂಘಟನೆಗಳು ಪ್ರತಿನಿಧಿಸುವ ಜನಸ್ತೋಮಕ್ಕೆ ನನಗಿಂತಲೂ ನಿಕಟವಾಗಿ ಅವರಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರಗಳು ಚೆನ್ನಾಗಿ ಗೊತ್ತು. ಯಾಕೆಂದರೆ ಅವರು ಅದರಲ್ಲೇ ಬೆಂದು ನೊಂದು ದಿನನಿತ್ಯ ಬೇಯುತ್ತಿದ್ದಾರೆ.

ಈಗ ನನ್ನ ಚಿಂತೆ ಅಥವಾ ಚಿಂತನೆ ಏನಪ್ಪ ಅಂದರೆ ಇಂದು ಭಾರತದ ಕೇಂದ್ರ ಸರ್ಕಾರವು ಧರ್ಮ- ಧರ್ಮಗಳ ನಡುವೆ, ಬಡವ- ಬಲ್ಲಿದರ ನಡುವೆ, ಜಾತಿ- ಜಾತಿಗಳ ನಡುವೆ ಕಂದಕ ತೋಡುತ್ತಿದೆ. ಇದು ಭಾರತವನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿರುವೆ.

ಹೌದು, ಇಂದು ಚಾತುರ್ವರ್ಣ ಹಿಂದುತ್ವವು, ’ವಿಶಾಲ ಹಿಂದೂ ಸಮುದಾಯ’, ಇತರ ಧರ್ಮಗಳು, ಪಂಥಗಳು ನಂಬಿಕೆಗಳ ಮೇಲೆ ಯುದ್ಧ ಸಾರಿದೆ. 10% ಇರುವ ಮೇಲ್ಜಾತಿ, ಮೇಲ್ವರ್ಗವ ರಕ್ಷಿಸುತ್ತ ಉಳಿದ 90% ಜನಸ್ತೋಮವನ್ನು ತುಳಿಯುತ್ತಿದೆ. ಬಡವರ ಹೊಟ್ಟೆಗೆ ಹೊಡೆದು ಉಳ್ಳವರ ಬಾಯಿಗೆ ಹಾಕುತ್ತಿದೆ. ಈ ರೀತಿ ರಾಜ್ಯಭಾರ ನಡೆಯುತ್ತಿರುವುದರಿಂದಲೇ, ಕೃಷಿ, ಕಾರ್ಮಿಕ, ಅರಣ್ಯ, ಶಿಕ್ಷಣ ಕಾಯ್ದೆಗಳನ್ನು ವಿಕಾರವಾಗಿ ತಿರುಚಿಬಿಟ್ಟಿತು. ಸಾರ್ವಜನಿಕ ಸಂಪತ್ತನ್ನು ಕಾರ್ಪೋರೇಟ್ ಬಾಯಿಗೆ ಹಾಕುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ಅರೆಜೀವ ಮಾಡಿ ಬಿಸಾಕಿದೆ.
ಇದೆಲ್ಲದರ ಫಲವಾಗಿ ಕೃಷಿಕರು ಇದ್ದಬದ್ಧ ಭೂಮಿಯನ್ನು ಕಳೆದುಕೊಂಡು ಹೊಟ್ಟೆಯಾಪ್ತಿಗೆ ನಗರಗಳ ಬೀದಿಗೆ ಬೀಳುತ್ತಿದ್ದಾರೆ. ಮಾನವ ಸಂಪತ್ತಾಗಬೇಕಿದ್ದ ಯುವಜನತೆಯು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಕಾರ್ಮಿಕರ ರಕ್ಷಣೆಗಿದ್ದ ಕಾನೂನುಗಳೂ ಕಣ್ಮರೆಯಾಗುತ್ತಿವೆ. ಇನ್ನು ದಲಿತರು ಆದಿವಾಸಿಗಳು ಮಹಿಳೆಯರು ಹೊಸ ಹೊಸ ಶೋಷಣೆಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ.

ಇಲ್ಲಿಗೆ ತಂದಿದ್ದಾರೆ- ಮನ್ ಕಿ ಬಾತ್‌ನ ನಮ್ಮ ಪ್ರಧಾನಿಗಳು. ಇವರು ತಮ್ಮ ಪರಮಾಪ್ತ ಅದಾನಿ, ಅಂಬಾನಿ ಮುಂತಾದ ಶತಕೋಟಿ ಮೇಲೆ ಕುಳಿತಿರುವ ಕುಟುಂಬಗಳಿಗೆ ಎಷ್ಟೆಷ್ಟು ಲಕ್ಷ ಲಕ್ಷ ಕೋಟಿ ರೈಟ್ ಆಫ್ ಎಂದರೆ ಹೆಚ್ಚು ಕಮ್ಮಿ ಸಾಲ ಮನ್ನ ತೆರಿಗೆ ಮತ್ತಿತರ ರಿಯಾಯಿತಿಗಳನ್ನು ನೀಡಿದರು ಎಂಬುದನ್ನು ಒಂದು ಸಲ ನೋಡಿ ಸಾಕು. ಮೋದಿಯವರ ಮನಸ್ಸು ಏನು ಎಂದು ಅರ್ಥವಾಗುತ್ತದೆ.

ಇನ್ನೊಂದು ಕಡೆ- ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್‌ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಮಾದಿಗ ದಂಡೋರ ನಾಯಕ ಕೃಷ್ಣ ಮಾದಿಗ ಅವರು ಆಯೋಜಿಸಿದ್ದ ಬೃಹತ್‌ ಸಭೆಗೆ ಪ್ರಧಾನಿಯೂ ಬಂದರು. ಕೃಷ್ಣ ಮಾದಿಗ ಅವರು ಕಳೆದ 30 ವರ್ಷಗಳಿಂದ ಹೋರಾಡುತ್ತಿರುವ ಒಳಮೀಸಲಾತಿ ವೇದನೆಗೆ ಕಣ್ಣೀರಿಟ್ಟರು. ಮೋದಿಯವರು ಕೃಷ್ಣ ಅವರನ್ನು ಆಲಂಗಿಸಿ, ಸಂತೈಸಿ ಒಳಮೀಸಲಾತಿಗೆ ’ವರದಿ’ ತಯಾರಿಸುವಂತೆ ’ಆದೇಶ’ ನೀಡಿ ನಿರ್ಗಮಿಸಿದರು. ಇದು ಅವರ ಮನ್‌ ಕಿ ಬಾತ್‌. ಹೀಗೆ 30 ವರ್ಷಗಳ ತಳಸಮುದಾಯದ ಹೋರಾಟಕ್ಕೆ ’ವರದಿ’ಗೆ ಆಜ್ಞೆ ಮಾಡಿದ ಮೋದಿಯವರು ಇನ್ನೊಂದು ಕಡೆ, ಮೇಲ್ಜಾತಿಯವರಿಗೆ 3 ದಿನಗಳಲ್ಲೇ EWS ಮೀಸಲಾತಿ ನೀಡಿಬಿಟ್ಟರು. ಇದು ಮೋದಿಯವರ ಮನಸ್ಸಿನ ಮರ್ಮ.

ಹೀಗಿದೆ ನಮ್ಮ ಪ್ರಧಾನಿಗಳ ನಡೆ ಮತ್ತು ನುಡಿ. ಎಲ್ಲವೂ ಹೀಗೆ ಹೀಗೆ. ಒಳಗೊಂದು ಹೊರಗೊಂದು. ಹೀಗೆ ಎಷ್ಟು ದಿನ ಪ್ರಧಾನಿಯವರ ಮಾತುಗಳನ್ನು ತಿಂದು ಏಟು ಅನುಭವಿಸೋಣ? ಇವರದು ಮುನ್ನಡೆಯ ನುಡಿಗಳು; ಆದರೆ ಹಿನ್ನಡೆಯ ನಡೆಗಳು. ಇನ್ನೂ ಬೇಕೆ? ಈಗಾಗಲೇ ಅತಿಗೆ ಹೋಗಿದೆ, ಸಾಕು ಅನಿಸುತ್ತಿದೆ. ಸಂಘ ಪರಿವಾರದ ಹಿಂದುತ್ವದ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಬೇಕಿದೆ. ಈಗ 2024ರ ಚುನಾವಣೆ ನಮ್ಮ ಮುಂದಿದೆ. ಈಗಲಿಂದಲೇ ಜನಾಂದೋಲನಗಳು ಅರಳಿಮರದ ಕೆಳಗೆ, ಛಾವಡಿಯಲ್ಲಿ ಮಾತುಕತೆ ಆರಂಭಿಸಬೇಕಾಗಿದೆ. ಉಳಿಯಬೇಕು ಅಂದರೆ ಹಿಂದುತ್ವದ ಬಿಜೆಪಿ ಸೋಲಲೇಬೇಕಾಗಿದೆ.

ಕೊನೆಯದಾಗಿ, ನಮ್ಮ ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತನ್ನ ಹಿಂದಿನ ಬಿಜೆಪಿ ಸರ್ಕಾರದ ಜನವಿರೋಧಿ ಕೃಷಿ ಕಾಯ್ದೆ ಮುಂತಾದವುಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಂತು ನನಗೆ ಅರ್ಥವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ಕಡೆ ಕಣ್ಣೆತ್ತಿ ನೋಡಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈಗ ಬಿಜೆಪಿಗೆ ಹೇಳುತ್ತಿರುವ ಮಾತನ್ನೇ ಕಾಂಗ್ರೆಸ್ ಸರ್ಕಾರಕ್ಕೆ ಹೇಳಬೇಕಾಗಿ ಬರುತ್ತದೆ.

ಹಾಗೇ ಹೋರಾಟದ ಗೆಳೆಯರಿಗೆ ಒಂದು ಕಿವಿಮಾತು- ಭಾರತದ ಸುಪ್ತ ಮನಸ್ಸಲ್ಲಿ ನೆಲೆಸಿರುವ ಗಾಂಧಿ, ಅಂಬೇಡ್ಕರರನ್ನು ಮತ್ತು ಸಂವಿಧಾನವನ್ನು ಚಾತುರ್ವರ್ಣ ಹಿಂದುತ್ವದ ನೂರೆಂಟು ಸಂಘಟನೆಗಳು ಹಾಗೂ ಬಿಜೆಪಿ ಸರ್ಕಾರ ದಿನನಿತ್ಯ ಕತ್ತರಿಸುತ್ತ ನಿರ್ನಾಮ ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದವು. ಆದರೂ CAA ಅಂದರೆ ಪೌರತ್ವ ಕಾಯ್ದೆ ಬದಲಾವಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಭುಗಿಲೆದ್ದ ಹೋರಾಟಗಳಲ್ಲಿ ಈ ಗಾಂಧಿ ಅಂಬೇಡ್ಕರ್‌ ಸಂವಿಧಾನ ಈ ಮೂವರು ಜೀವಂತವಾಗಿರುವಂತೆ ಎಲ್ಲಾ ಪ್ರತಿಭಟನಾ ಸಭೆಗಳಲ್ಲೂ ಪ್ರತ್ಯಕ್ಷರಾದರು. ಕತ್ತರಿಸಿದರೂ ಮತ್ತಷ್ಟು ಚಿಗುರುವ ಬೃಹತ್ ವೃಕ್ಷಗಳಂತೆ! ಈ ಸೋಜಿಗವು ಚಾತುರ್ವರ್ಣದ ಹಿಂದುತ್ವದ ನೂರಾರು ಸಂಘಟನೆಗಳು ಮತ್ತು ಸರ್ಕಾರವನ್ನು ಬೆಚ್ಚುವಂತೆ ಮಾಡಿತು. ಭಾರತದ ಎಲ್ಲಾ ಜನಾಂದೋಲನಗಳು ಈ ಮೂರು ಶಕ್ತಿಗಳನ್ನು ಗಮನಿಸಿ ಮುನ್ನಡೆಯಬೇಕು ಅನಿಸುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *