– ಬದುಕಲು ಬೇಕಾದಷ್ಟು ಭೂಮಿ, ಗೌರವಯುತ ವಸತಿ ನಮ್ಮ ಜನ್ಮ ಸಿದ್ಧ ಹಕ್ಕು ಸೇರಿ 6 ನಿರ್ಣಯಗಳು
ಬೆಂಗಳೂರು: ರಾಜ್ಯ ಸರ್ಕಾರ ತಂದಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟವು ಬೆಂಗಳೂರಿನ ಫ್ರೀಡಂ ಪಾರ್ಕಿನ ದೇವರಾಜ ಅರಸು ವೇದಿಕೆ ಎದುರು ನಡೆಯುತ್ತಿದ್ದು, ಮೂರನೇ ದಿನಕ್ಕೆ ಮುಂದುವರಿದಿದೆ.
ಸೋಮವಾರದಿಂದ ಆರಂಭವಾಗಿರುವ ರೈತ, ಕಾರ್ಮಿಕ, ದಲಿತರ ಐಕ್ಯ ಹೋರಾಟಕ್ಕೆ ಮಂಗಳವಾರ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಚಿವರಾದ ಡಿ.ಆರ್.ಪಾಟೀಲ್, ಬೀ.ಆರ್.ಪಾಟೀಲ್ ಭೇಟಿ ನೀಡಿ ತಮ್ಮ ಬೆಂಬಲ ಘೋಷಿಸಿದರು. ಜೊತೆಗೆ ಸದನದಲ್ಲಿ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರೈತರ ಪ್ರತಿಭಟನೆ ನ್ಯಾಯಯುತವಾಗಿದ್ದು, ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಪ್ರಕಟಿಸಿದರು.
ಇದೇ ವೇಳೆ ಹೋರಾಟ ವೇದಿಕೆಯಲ್ಲಿ ಭೂಮಿ ವಸತಿ ಹಕ್ಕು ವಂಚಿತರು ಇಂದು ’ಬದುಕಲು ಬೇಕಾದಷ್ಟು ಭೂಮಿ, ಗೌರವದಿಂದ ಬಾಳುವಂತಹ ವಸತಿ ನಮ್ಮ ಜನ್ಮ ಸಿದ್ಧ ಹಕ್ಕು’ ಎಂದು ಘೋಷಿಸಿದ್ದು, ತಮ್ಮ ಆರು ನಿರ್ಣಯಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
1. ಯಾವುದೇ ಕಾರಣಕ್ಕೂ ಬಡಜನರನ್ನು (ಕನಿಷ್ಠ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡದೆ) ಅವರ ಭೂಮಿಯಿಂದಾಗಲೀ, ಮನೆಗಳಿಂದಾಗಲಿ ಒಕ್ಕಲೆಬ್ಬಿಸಬಾರದು.
2. ಫಾರಂ 50, 57, 94ಸಿ, 94ಸಿಸಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ನವೆಂಬರ್ ಅಧಿವೇಶನದೊಳಗಾಗಿ ಇತ್ಯರ್ಥಗೊಳಿಸಿ ಬಡಜನರಿಗೆ ಹಕ್ಕುಪತ್ರ ನೀಡಬೇಕು.
3. ಒಟ್ಟು ಸರ್ಕಾರಿ ಭೂಮಿಯ ಆಡಿಟಿಂಗ್ ನಡೆಸಬೇಕು. ಲಭ್ಯವಿರುವ ಭೂಮಿಯನ್ನು ನಿವೇಶನಕ್ಕಾಗಿ ಮತ್ತು ಉಳುಮೆಗಾಗಿ ಕೂಡಲೇ ವಿತರಣೆ ಮಾಡಬೇಕು.
4. ರೈತ ವಿರೋಧಿ, ದಲಿತ ವಿರೋಧಿ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು. ಅಂತಹ ಕಾಯ್ದೆಯ ತಿದ್ದುಪಡಿಯ ಎಲ್ಲಾ ಪ್ರಸ್ತಾಪಗಳನ್ನು ಕೈಬಿಡಬೇಕು.
5. ಭೂಮಿಯು ಉಳುವವರಿಗೆ ಮತ್ತು ವಾಸಿಸುವವರಿಗೆ ಸೇರಿದ್ದು, ಭೂಗಳ್ಳರಿಗಲ್ಲ, ಕಂಪನಿಗಳಿಗಲ್ಲ.
6. ಕೊರೊನಾದಿಂದ ತತ್ತರಿಸುವ ರೈತರ ಮತ್ತು ಕಾರ್ಮಿಕರ ನೆರವಿಗೆ ಸರ್ಕಾರ ಸಮಗ್ರ ಪ್ಯಾಕೇಜ್ ಘೋಷಿಸಬೇಕು.
ಬುಧವಾರ ರಾಜ್ಯ ಸರ್ಕಾರ ತರಲಿರುವ ಜನವಿರೋಧಿ ಭೂ ಸುಧಾರಣ ಕಾಯ್ದೆ ತಿದ್ದುಪಡಿ ಹಾಗು ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಬಗ್ಗೆ ನಾವು ದುಂಡುಮೇಜಿನ ಚರ್ಚೆ ಮಾಡಲಾಗುತ್ತದೆ. ದುಂಡುಮೇಜಿನ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಫ ಹಾಗು ಹಸಿರುಸೇನೆ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ವಹಿಸಲಿದ್ದಾರೆ.
ಕೃಷಿ ಆರ್ಥಿಕ ತಜ್ಞರಾದ ಪ್ರಕಾಶ್ ಕಮ್ಮರಡಿ ರೈತ ವಿರೋಧೀ ಸುಗ್ರೀವಾಜ್ಞೆಗಳ ಕುರಿತು ಪ್ರಸ್ತಾವನೆ ಮಾಡಲಿದ್ದಾರೆ.ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸುಗ್ರೀವಾಜ್ಞೆಗಳ ವಿಡಿಯೋ ಸಂದೇಶ ನೀಡಲಿದ್ದಾರೆ. ನಮ್ಮೂರ ಭುಮಿ, ನಮಗಿರಲಿ” ವೇದಿಕೆಯ ವಿ.ಗಾಯತ್ರಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತು ವಿಷಯ ಮಂಡಿಸಲಿದ್ದಾರೆ. ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಕುರಿತು ಕರ್ನಾಟಕ ಪ್ರಾಂತ ರೈತ ಸಂಫದ ಟಿ.ಯಶವಂತ್ ಮತ್ತು ಕೇಂದ್ರದ ಕೃಷಿ ಮಸೂದೆಗಳ ಕುರಿತು ಚಿಂತಕ ಶಿವಸುಂದರ್ ವಿಷಯ ಮಂಡಿಸಲಿದ್ದಾರೆ.