ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿರುವ 2021-2022ರ ಸಾಲಿನ ಬಜೆಟ್ ರಾಜ್ಯದ ದುಡಿಯುವ ಜನರನ್ನು ಕಡೆಗಣಿಸಿದೆ. ಕೊರೋನಾ ಸಂಕಷ್ಟ ಮತ್ತು ಲಾಕ್‌ಡೌನ್ ಸಂಕಷ್ಟಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಖಂಡಿಸಿದೆ.
ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂರವರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಸಿಐಟಿಯು ಸಂಘಟನೆಯು ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ರಾಜ್ಯದ ದುಡಿಯುವ ಜನರು ತಮ್ಮ ಜೀವನಾಧಾರವನ್ನು ಕಳೆದುಕೊಂಡು ಈಗಲೂ ಸಹ ಪೂರ್ಣ ಪ್ರಮಾಣದಲ್ಲಿ ಪುನಶ್ಚೇತನಗೊಳ್ಳದೆ ನಲುಗಿದ್ದಾರೆ. ಅವರಿಗೆ ಯಾವುದೇ ರೀತಿಯ ಪರಿಹಾರ ನೀಡದೇ ಕ್ರೂರತೆ ವಹಿಸಿರುವ ಬಿಜೆಪಿ ಸರಕಾರದ ರಾಜ್ಯ ಬಜೆಟ್ ಇದಾಗಿದೆ.
ರಾಜ್ಯದ ದುಡಿಯುವ ವಿವಿಧ ವಿಭಾಗದ ಕಾರ್ಮಿಕರು ರಾಜ್ಯ ಸರ್ಕಾರದ ಮುಂದಿರಿಸಿದ್ದ 32 ಅಂಶದ ಬೇಡಿಕೆಗಳನ್ನು ಪರಿಗಣಿಸಿ ನೀಡಲು ಇದ್ದ ಅವಕಾಶವನ್ನು ತಿರಸ್ಕರಿಸಿದೆ.
ರಾಜ್ಯದ 2 ಲಕ್ಷ 46 ಸಾವಿರ 207 ಕೋಟಿ ರೂ.ಗಳ ಬಜೆಟ್‌ನಲ್ಲಿ ಆರ್ಥಿಕ ಅಭಿವೃದ್ದಿಗೆ ಉತ್ತೇಜನಕ್ಕೆ ಎಂದು ಮೀಸಲಿಟ್ಟಿರುವ 58,529 ಕೋಟಿ ರೂ.ಗಳ ಅನುದಾನವನ್ನು ಹೇಗೆ ಯಾರಿಗೆ ನೀಡಲಾಗುತ್ತದೆ ಅದರ ಮೂಲಗಳೇನು ? ಎಂಬುದರ ಯಾವುದೇ ವಿವರವನ್ನು ಮುಖ್ಯಮಂತ್ರಿಗಳು ನೀಡದೇ ಸದರಿ ಅನುದಾನವನ್ನು ಕನ್ನಡಿಯೊಳಗಿನ ಗಂಟಾಗಿರಿಸಿದ್ದಾರೆ.
ಕುಂಠಿತಗೊಂಡಿರುವ ಆರ್ಥಿಕ ಅಭಿವೃದ್ದಿಯನ್ನು ಪುನಶ್ಚೇತನಗೊಳ್ಳಲು ದುಡಿಯುವ ಜನರಿಗೆ ಹಣ ಒದಗಿಸಿಕೊಳ್ಳುವ ಶಕ್ತಿಯನ್ನು ಉತ್ತೇಜಿಸುವುದು ಇಂದಿನ ತುರ್ತಾಗಿದೆ. ಅದಕ್ಕಾಗಿ ರಾಷ್ಟ್ರ ಹಾಗೂ ರಾಜ್ಯದ ರೈತ – ಕಾರ್ಮಿಕ – ಸಂಘಟನೆಗಳು ಆದಾಯ ತೆರಿಗೆಯಿಂದ ಹೊರಗಿರುವ ಕೃಷಿ ಕುಟುಂಬಕ್ಕೆ 7500 ರೂ. ನೇರ ನಗದು ವರ್ಗಾವಣೆಯನ್ನು 6 ತಿಂಗಳ ಕಾಲ ಮಾಡಬೇಕೆಂದು ಹಾಗೂ ತಲಾ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಬೇಕೆಂದು ಒತ್ತಾಯಿಸುತ್ತಿವೆ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು 200 ರೂ. ದಿಂದ ರೂ.700 ಗಳಿಗೆ ಹೆಚ್ಚಿಸಿ ದಿನಗೂಲಿ ನಿಗದಿಗೊಳಿಸಿ ನಗರ ಪ್ರದೇಶಗಳಿಗೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿವೆ. ಆದರೆ ರಾಜ್ಯ ಬಿಜೆಪಿ ಸರ್ಕಾರವು ಈ ಯಾವುದರ ಬಗ್ಗೆಯೂ ಕಿಂಚಿತ್ತು ಗಮನ ಹರಿಸದೇ ಆರ್ಥಿಕ ಪುನಶ್ಚೇತನಕ್ಕೆ ಇದ್ದ ಅವಕಾಶವನ್ನು ಕಳೆದುಕೊಂಡಿದೆ.
ದುಡಿಯುವ ಜನರ ಜೀವನಾಧಾರ ಸೃಷ್ಟಿಗೆ ಮತ್ತು ಸಂರಕ್ಷಣೆಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಮಾತ್ರವಲ್ಲದೇ ಸ್ವ ಉದ್ಯೋಗಗಳಿಗಿದ್ದ ಅನುದಾನ ಕಡಿತಗೊಳಿಸುವ ಮೂಲಕ ನಿರುದ್ಯೋಗ ಹೆಚ್ಚಳಕ್ಕೆ ನಾಂದಿ ಮಾಡಿಕೊಟ್ಟಿದೆ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ವಲಯಕ್ಕೆ ಮೀಸಲಿರುವ 52519 ಕೋಟಿ ರೂ.ಗಳ ಅನುದಾನ ಬಳಕೆಯ ವಿವರವನ್ನು ನೀಡಿರುವುದಿಲ್ಲ ಸದರಿ ಅನುದಾನದಲ್ಲಿ ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ, ಮತ್ತು ಸರ್ಕಾರಿ ಇಲಾಖೆಗಳಲ್ಲಿ ಸ್ಥಳೀಯ ಆಡಳಿತದಲ್ಲಿ ಹೊರಗುತ್ತಿಗೆಯಾಗಿರುವ ವೇತನ ಹೆಚ್ಚಳಕ್ಕೆ ಬಳಸಬೇಕೆಂದು ಸಿಐಟಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸದರಿ ಅನುದಾನವನ್ನು ಪಂಚಾಯತ್ ನೌಕರರ ವೇತನಕ್ಕೆ ಅಗತ್ಯವಿರುವ ಹಣವನ್ನು ಮೀಸಲಿರಿಸಬೇಕೆಂದು ಆಗ್ರಹಿಸಿದೆ. ಬೆಲೆ ಏರಿಕೆಯ ಬವಣೆಯಿಂದ ಬಸವಳಿದಿರುವ ದುಡಿಯುವ ಜನರಿಗೆ ಪೆಟ್ರೋಲ್ – ಡಿಸೇಲ್‌ನ ಸುಂಕ ಕಡಿಮೆ ಗೊಳಿಸುವ ಕ್ರಮಗಳನ್ನು ಕೈಗೊಂಡು ಪರಿಹಾರ ನೀಡುವಲ್ಲಿ ಪರಿಹಾರ ನೀಡದೆ ವಂಚಿಸಿದ ರಾಜ್ಯ ಬಿಜೆಪಿ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿಗಾಗಿ ಜಾತಿವಾರು ನಿಗಮಗಳಾಗಿ ಹಣ ಮೀಸಲಿರಿಸಿ ದುಡಿಯುವ ಜನರನ್ನು ಜಾತಿವಾರು ವಿಭಜಕ ಕ್ರಮಕ್ಕೆ ಬಿಜೆಪಿ ಸರ್ಕಾರಕ್ಕೆ ಮುಂದಾಗಿದೆ ಎಂದು ಸಿಐಟಿಯು ಟೀಕಿಸಿದೆ.
ತೆರಿಗೆ ಹೆಚ್ಚಳ ಮಾಡಿಲ್ಲವೆಂಬ ಬಡಾಯಿಕೊಚ್ಚಿಕೊಳ್ಳುತ್ತಲೇ ಕರ ಸಮಾಧಾನ ಯೋಜನೆ 2021 ಜಾರಿಗೆ ಮುಂದಾಗಿ ಪ್ರಸಕ್ತ ಸಾಲಿನಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ 7,6473 ರೂ. ಕೋಟಿಗಳ ತೆರಿಗೆ ಸಂಗ್ರಹಣೆಯು ಗುರಿ ಹೊಂದಿ ಜಿಎಸ್‌ಟಿ ಪೂರ್ವದ ತೆರಿಗೆ ಹಂತಕ್ಕೆ ಸಂಗ್ರಹವನ್ನು ತಲುಪಿಸುವ ಗುರಿ ಹೊಂದಿರುವ ನಯ ವಂಚಕ ಬಜೆಟ್ ಆಗಿದೆ.