ದುಡಿಯುವ ಜನರ ಚಳುವಳಿಗೆ ಸಂಬಂಧಿಸಿದ ನಾಲ್ಕು ಪುಸ್ತಕಗಳು ಬಿಡುಗಡೆ ಗಂಗಾವತಿಯಲ್ಲಿ

ಜನವರಿ 2ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ    ಜುಲೈ ನಗರದ ಅಮರಜ್ಯೋತಿ ಕನ್ವೆನ್ಶನ್ ಹಾಲಿನಲ್ಲಿ  ದುಡಿಯುವ ಜನರ ಮತ್ತು ಕಮ್ಯುನಿಸ್ಟ್ ಚಳುವಳಿಗೆ ಸಂಬಂಧಿಸಿದ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿವೆ. ಆ ನಾಲ್ಕು ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ.

 

ಸಮಬಾಳಿನ ಸಂಘರ್ಷ :  ಕರ್ನಾಟಕದಲ್ಲಿ ಕಮ್ಯೂನಿಸ್ಟ್ ಚಳವಳಿಯ ಒಂದು ನೋಟ : – ಡಾ.ಕೆ.ಪ್ರಕಾಶ್ ( ಬೆಲೆ : ರೂ.430)

ಗೆಳೆಯ ಡಾ.ಕೆ.ಪ್ರಕಾಶ್ ಅವರ `ಸಮಬಾಳಿನ ಸಂಘರ್ಷ – ಕರ್ನಾಟಕದಲ್ಲಿ ಕಮ್ಯೂನಿಸ್ಟ್ ಚಳವಳಿಯ ಒಂದು ನೋಟ’ ಎಂಬ ಈ ಕೃತಿಯು ಚಾರಿತ್ರಿಕ ಅಗತ್ಯವೊಂದನ್ನು ಪೂರೈಸಿದೆ. ಕಮ್ಯೂನಿಸ್ಟರ ಬಗ್ಗೆ ಇದ್ದ ಕೆಲವು ಪೂರ್ವಾಗ್ರಹ ಅಥವಾ ಪೂರ್ವನಿಶ್ಚಿತ ಅಭಿಪ್ರಾಯಗಳಿಗೂ ಈ ಕೃತಿಯಲ್ಲಿ ಉತ್ತರವಿದೆ. ಆದರೆ

ಉತ್ತರಿಸುವುದೇ ಪ್ರಧಾನ ಭೂಮಿಕೆಯಾಗದೆ, ಆಯಾ ಅಭಿಪ್ರಾಯಗಳನ್ನು ಚಾರಿತ್ರಿಕ ಸಂದರ್ಭದ ಹಿನ್ನೆಲೆಯಲ್ಲಿಟ್ಟು ವಿವರಿಸುವ ವಿಧಾನದಿಂದ ಪ್ರಕಾಶ್ ಅವರು ತಮ್ಮ ಸಮಜಾಯಿಷಿಗಳಿಗೆ ಕ್ರಮಬದ್ಧತೆಯನ್ನು ತಂದಿರುವುದು ವಿಶೇಷವಾಗಿದೆ. ಜೊತೆಗೆ ಕೆಲವು ವಿಷಯಗಳಲ್ಲಿ ಕಮ್ಯೂನಿಸ್ಟರ ನಡೆ, ನಿಲುವುಗಳಲ್ಲಿರುವ ಕೊರತೆಗಳನ್ನು ಒಪ್ಪಿರುವುದು ವಿಶ್ಲೇಷಣಾತ್ಮಕ ಬರವಣಿಗೆಗೆ ಇರಬೇಕಾದ ಗುಣಮೌಲ್ಯವನ್ನು ಕಾಪಾಡಿದೆ. ಚಾರಿತ್ರಿಕ ಸಂಗತಿಗಳನ್ನು ಆಯಾ ಸಂದರ್ಭದ ವಿವಿಧ ನೆಲೆ-ನಿಲುವುಗಳ ಮೂಲಕ ವಿವರಿಸುವ ಮತ್ತು ವಿಶ್ಲೇಷಿಸುವ ರೀತಿಯಿಂದ ಪ್ರಕಾಶ್ ಅವರ ನಿರೂಪಣೆಗೆ ತನ್ನದೇ ಘನತೆ, ಗಾಂಭೀರ್ಯಗಳು ಲಭ್ಯವಾಗಿವೆ… ..ಅಧ್ಯಯನ, ಅಧಿಕೃತತೆ, ಸ್ಪಷ್ಟತೆ, ತಾತ್ವಿಕತೆ ಮತ್ತು ಕ್ರಮಬದ್ಧತೆಗಳನ್ನು ಒಟ್ಟುಗೂಡಿಸಿ ಈ ಕೃತಿಯನ್ನು ಕಟ್ಟಿಕೊಡಲಾಗಿದೆ.

– ಬರಗೂರು ರಾಮಚಂದ್ರಪ್ಪ

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಕಮ್ಯುನಿಸ್ಟ್ರ ಪಾತ್ರದ ಬಗ್ಗೆ ಇರುವ ವಿವಾದಗಳನ್ನು ಚರ್ಚಿಸುತ್ತಾ, ಕಮ್ಯುನಿಸ್ಟ್ ಚಳವಳಿ ಆ ಕಾಲಘಟ್ಟದಲ್ಲಿ ಫ್ಯಾಸಿಸಂ, ನಾಜಿ ಸರ್ಕಾರಗಳ ವಿರುದ್ಧ ನಡೆಯುತ್ತಿದ್ದ ಸೈದ್ಧಾಂತಿಕ ಹಾಗು ರಾಜತಾಂತ್ರಿಕ ದಾಳಿಗಳನ್ನು ವಿವರವಾಗಿ ದಾಖಲಿಸುವ ಯತ್ನವನ್ನು ಮಾಡಿದ್ದಾರೆ. ಹಾಗೆಯೇ ಕಮ್ಯುನಿಸ್ಟರು ಕ್ವಿಟ್ ಇಂಡಿಯಾ ಹೋರಾಟದ ಭಾಗವಾಗಿ ಪ್ರತಿಭಟನೆ ಮಾಡಿರುವ ಬಗ್ಗೆ ವಿವರಗಳನ್ನು ನೋಡಬಹುದಾಗಿದೆ. .. ..ಮೇಲ್ನೋಟಕ್ಕೆ ಡಾ.ಕೆ.ಪ್ರಕಾಶ್ ಅವರ ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿ ಕೃತಿಯು ಕಮ್ಯುನಿಸ್ಟ್ ಚಳವಳಿಯ ಬಗ್ಗೆ ಕೇಂದ್ರೀಕೃತವಾಗಿರುವುದು ಎಂದೆನಿಸಿದರೂ, ಇದು ವಸಾಹತು ಮತ್ತು ವಸಾಹತೋತ್ತರ ಚರಿತ್ರೆ ಬರವಣಿಗೆಯ ಕಥನವಾಗಿದೆ. ಈ ಕೃತಿಯು 20ನೇ ಶತಮಾನದ ಕರ್ನಾಟಕದ ಚರಿತ್ರೆಯನ್ನು ಅದರಲ್ಲಿಯೂ ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

– ಡಾ. ವಿಜಯ್ ಪೂಣಚ್ಚ ತಂಬಂಡ

 

 

ಅಖಿಲ ಭಾರತ ಕಿಸಾನ್ ಸಭಾ : ಒಂದು ಸಂಕ್ಷಿಪ್ತ ಚರಿತ್ರೆ – ಹನ್ನನ್ ಮೊಲ್ಹ ; ಕನ್ನಡಕ್ಕೆ : ವಾಸುದೇವ ಉಚ್ಚಿಲ (ಬೆಲೆ : ರೂ. 180)

“ಆರ್ಥಿಕ ಶೋಷಣೆಯಿಂದ ರೈತರ ಸಂಪೂರ್ಣ ವಿಮೋಚನೆ ಮತ್ತು ರೈತರಿಗೆ, ಕಾರ್ಮಿಕರಿಗೆ ಮತ್ತು ಇತರ ಶೋಷಿತ ಜನವಿಭಾಗಗಳಿಗೆ ಆರ್ಥಿಕ ಮತ್ತು ರಾಜಕೀಯ ಅಧಿಕಾರದ ಗಳಿಕೆ”ಯ ಗುರಿಯೊಂದಿಗೆ 1936ರಲ್ಲಿ ಹುಟ್ಟಿ ಬಂದು ವಸಾಹತುಶಾಹೀ-ವಿರೋಧಿ ಸ್ವಾತಂತ್ರ್ಯ ಹೋರಾಟವನ್ನು ಬಲಿಷ್ಟಗೊಳಿಸಿದ ಈ ಸಂಘಟನೆಯ ಇತಿಹಾಸ ಆಧುನಿಕ ಭಾರತದ ಪ್ರಜಾಪ್ರಭುತ್ವ ಚಳುವಳಿಯ ಇತಿಹಾಸದ ಒಂದು ಅಭಿನ್ನ ಅಂಗ. ಈ ಚರಿತ್ರೆಯ ಒಂದು ಪಕ್ಷಿನೋಟವನ್ನು ಕೊಡುವ, ಈಗ ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ರೈತರ ದೇಶವ್ಯಾಪಿ ಹೋರಾಟದ ನೇತೃತ್ವದಲ್ಲಿರುವ ಪ್ರಮುಖರಲ್ಲಿ ಒಬ್ಬರಾದ ಹನ್ನನ್ ಮೊಲ್ಲರವರ ಕಿರುಪುಸ್ತಕವಿದು.

 

ಎಐಕೆಎಸ್ ಇತರ ಸಂಘಟನೆಗಳೊಂದಿಗೆ ಕಳೆದ 4-5 ವರ್ಷಗಳಲ್ಲಿ ರೈತ ಚಳುವಳಿಯನ್ನು ತೀವ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಅವಧಿಯಲ್ಲಿ ರೈತ ಚಳುವಳಿಗಳ ನವೀನ ಸಂಯುಕ್ತ ಪ್ರವಾಹವೇ ಮೂಡಿ ಬಂದಿದೆ. ಈ ಹೋರಾಟಗಳ ಹೆಚ್ಚಳದಿಂದ, ಈ ಅವಧಿಯಲ್ಲಿ ಎಐಕೆಎಸ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಎಐಕೆಎಸ್ ನ ಸಂಘಟನಾ ಚಟುವಟಿಕೆಗಳು ಹಲವು ಪಟ್ಟು ಹೆಚ್ಚಾಗಿವೆ; ಚಳುವಳಿಯನ್ನು ಕಟ್ಟಬೇಕಾದ ಕೆಲಸಗಳು ಹೆಚ್ಚಾಗಿವೆ. ಐಕ್ಯತೆಯನ್ನು ದೃಢಪಡಿಸುವ, ಆ ಮೂಲಕ ರಾಷ್ಟೆçದ ಪ್ರಜಾಸತ್ತಾತ್ಮಕ ಆಂದೋಲನವನ್ನು ಬಲಪಡಿಸುವ ಕೆಲಸಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕೈಪಿಡಿಯಂತಿರುವ ಈ ಕಿರು ಪುಸ್ತಕವು ಕಿಸಾನ್ ಸಭಾದ ಚರಿತ್ರೆಯನ್ನು ಸಂಘಟನೆಯ ಒಳಗಿನವರಿಗೂ, ಹೊರಗಿನವರಿಗೂ ಕಲಿಯಲು ಮತ್ತು ಕಲಿಸಲು ನೆರವಾಗಬಲ್ಲದು.

ಸಾಮ್ರಾಜ್ಯಶಾಹಿಯ ಮೇಲೆ ರೈತರ ವಿಜಯ : ಪ್ರೊ. ಪ್ರಭಾತ್ ಪಟ್ನಾಯಕ್ ; ಅನುವಾದ: ಕೆ.ಎಂ.ನಾಗರಾಜ್ (ಬೆಲೆ : ರೂ. 75)

ರೈತರ ಆಂದೋಲನ ಮತ್ತು ಮೋದಿ ಸರ್ಕಾರದ ನಡುವಿನ ಸಮರವೂ ಸಹ ಒಂದು ಹೊಸ ಯುಗಕ್ಕೆ ನಾಂದಿ ಹಾಡುವ ಪರಂಪರೆಗೆ ಸೇರುತ್ತದೆ. ಹೆಚ್ಚು ಎದ್ದು ಕಾಣುವ ಮಟ್ಟದಲ್ಲಿ, ಚಳುವಳಿ-ನಿರತ ರೈತರು ಪ್ರದರ್ಶಿಸಿದ ಅಪ್ರತಿಮ ದೃಢನಿಶ್ಚಯದ ಎದುರಿನಲ್ಲಿ ಮೋದಿ ಸರ್ಕಾರವು ತಲೆಬಾಗಿತು ಎಂದು ಕಂಡುಬರುತ್ತದೆ.

ಮತ್ತೊಂದು ಮಟ್ಟದಲ್ಲಿ, ಇದನ್ನು ನವ-ಉದಾರವಾದ ನೀತಿಗಳಿಗೆ ಎದುರಾದ ಒಂದು ಹಿನ್ನಡೆ ಎಚಿದು ನೋಡಲಾಗಿದೆ. ಹಿನ್ನಡೆ ಏಕೆಂದರೆ, ನವ-ಉದಾರವಾದಿ ಕಾರ್ಯಸೂಚಿಯ ನಿರ್ಣಾಯಕ ಭಾಗವಾಗಿ ರೈತ ಕೃಷಿಯನ್ನು ಕಾಪೆçðರೇಟ್‌ಗಳಿಗೆ ಅಧೀನಗೊಳಿಸುವ ಮೂಲಕ ಕೃಷಿವಲಯದ ಮೇಲೆ ಕಾರ್ಪೊರೇಟ್‌ಗಳು ಪ್ರಾಬಲ್ಯ ಹೊಂದುವುದನ್ನು ಉತ್ತೇಜಿಸುವುದೇ ಕೃಷಿ ಕಾನೂನುಗಳ ಉದ್ದೇಶವಾಗಿತ್ತು. ಈ ಕಾನೂನುಗಳನ್ನು ರದ್ದುಗೊಳಿಸಿದ್ದರಿಂದಾಗಿ ಈ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಈ ಎರಡೂ ಮಟ್ಟಗಳ ಗ್ರಹಿಕೆಗಳು ಸಂಪೂರ್ಣವಾಗಿ ಸರಿಯಾಗಿವೆ. ಆದರೆ ಇವುಗಳಾಚೆಗೆ, ಮೂರನೆಯ ಮಟ್ಟದ ಒಂದು ಗ್ರಹಿಕೆಯೂ ಇದೆ. ರೈತರ ವಿಜಯವು ಹೆಚ್ಚಿನ ಮಹತ್ವ ಹೊಂದಿದ್ದರೂ ಅದರ ಬಗ್ಗೆ ಗಮನ ಹರಿದಿಲ್ಲ. ಇದು ಅತ್ಯಂತ ಮೂಲಭೂತ ಅರ್ಥದಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದೆ ಎಂಬುದಕ್ಕೆ ಸಂಬಂಧಿಸಿದೆ. ಈ ಕಾರಣದಿಂದಾಗಿಯೇ, ಪಾಶ್ಚ್ಯಾತ್ಯ ಮಾಧ್ಯಮಗಳು ರೈತರಿಗೆ ತಲೆಬಾಗಿದ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿವೆ. ಈ ಬಗ್ಗೆ ಆಶ್ಚರ್ಯಪಡಬೇಕಾದ್ದಿಲ್ಲ.

ಒಂದು ಇಡೀ ವರ್ಷ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಬಿಡಾರ ಹೂಡಿದ್ದರು. ಇಂತÀಹ ಒಂದು ಅದ್ಭುತ ಸಾಧನೆಯನ್ನು ಹೇಗೆ ರೈತರು ಸಾಧಿಸಿದರು ಎಂಬುದನ್ನು ಸಂಶೋಧಕರು ಭವಿಷ್ಯದಲ್ಲಿ ಬಯಲು ಮಾಡುವುದರಲ್ಲಿ ಸಂದೇಹವಿಲ್ಲ. ಇದು, ಸಂಭ್ರಮಿಸಬೇಕಾದ ಸಾಧನೆಯೇ, ಆಚರಿಸಬೇಕಾದ ಸಾಧನೆಯೇ.

 

ನವ-ಉದಾರವಾದಿ ನೀತಿಗಳು ಮತ್ತು ದುಡಿಯುವ ವರ್ಗಗಳು : ಎರಡು ಅಧ್ಯಯನಗಳು – ಡಾ. ಕೆ.ಹೇಮಲತಾ, ಪ್ರೊ. ವಿ.ಕೆ.ರಾಮಚಂದ್ರನ್ ಮತ್ತು ಇತರರು

ಅನುವಾದ: ಸಿ.ಆರ್.ಶಾನಭಾಗ, ಟಿ.ಯಶವಂತ (ಬೆಲೆ : ರೂ. 70)

ಈಗ, ಮೂರು ದಶಕಗಳ ಉದಾರೀಕರಣ ನೀತಿಗಳು ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ವ್ಯಾಪಕವಾಗಿ ಪ್ರಕಟವಾಗುತ್ತಿವೆ. ಡಾ.ಮನಮೋಹನ್ ಸಿಂಗ್ ಮುಂತಾದ ಉದಾರೀಕರಣಕಾರರು ಈ ನೀತಿಗಳನ್ನು ಶ್ಲಾಘಿಸುತ್ತಲೇ ಉದಾರೀಕರಣದ ಪ್ರಯೋಜನಗಳ ಹಂಚಿಕೆ ಅಸಮಾನವಾಗಿವೆ ಎಂದೂ ಗೋಳಾಡಿದ್ದಾರೆ. ಸ್ವತಃ ಈ ನೀತಿಗಳ ಶಿಲ್ಪಿ ಎಂದೇ ಕರೆಯಲಾದ ಮನಮೋಹನ ಸಿಂಗ್ “ಪ್ರತಿಯೊಬ್ಬ ಭಾರತೀಯನಿಗೂ ಒಂದು ಘನತೆಯ ಮತ್ತು ಆರೋಗ್ಯಕರ ಜೀವನ ಕಲ್ಪಿಸುವ ಬಗ್ಗೆ ಆದ್ಯತೆ ನೀಡಬೇಕು” ಎಂದು ಹೇಳಿದ್ದಾರೆ.

ಆದರೆ ಸ್ವತಃ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಅದನ್ನು ಏಕೆ ಕಾರ್ಯಗತಗೊಳಿಸಲಿಲ್ಲವೋ ಎಂದು ಆಶ್ವರ್ಯ ವ್ಯಕ್ತಪಡಿಸುತ್ತ ಅರ್ಥಶಾಸ್ತçಜ್ಞ ಪ್ರೊ.ಪ್ರಭಾತ್ ಪಟ್ನಾಯಕ್ “ಹೆಚ್ಚು ಬೆಳವಣಿಗೆಯನ್ನು ಸಾಧಿಸಿದ್ದ ಕಾಲದಲ್ಲೂ ದುಡಿಯುವ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ ನವ ಉದಾರವಾದವು ಬಿಕ್ಕಟ್ಟಿಗೆ ಹೊರಳುತ್ತಿರುವ ಸನ್ನಿವೇಶದಲ್ಲಿ ಅವರ ಮೇಲೆ ಹೇರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಯಂತಹ ಭಾರತೀಯ ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾದ ಒಂದು ಏರ್ಪಾಟನ್ನು ಆರಂಭಿಸಿದೆ” ಎನ್ನುತ್ತಾರೆ.

ಪ್ರಸಕ್ತ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಮತ್ತು ನಾಲ್ಕು ‘ಕಾರ್ಮಿಕ ಸಂಹಿತೆಗಳು’ ಎಂಬುದನ್ನು ತಂದಿರುವ ವಿಧಾನ ಮತ್ತು ಅದನ್ನು ಮುಂದೊತ್ತುತ್ತಿರುವ ರೀತಿ ಇದನ್ನು ಸಾಬೀತು ಪಡಿಸುತ್ತಿವೆ.

ಇಂತಹ ಸಂದರ್ಭದಲ್ಲಿ ದೇಶದ ಬಹುಪಾಲು ಜನಗಳು, ಮುಖ್ಯವಾಗಿ ದೇಶದ ಸಂಪತ್ತನ್ನು ಸೃಷ್ಟಿಸುವ ಉತ್ಪಾದಕ ಕ್ರಿಯೆಗಳಲ್ಲಿ, ಸೇವೆಗಳಲ್ಲಿ ತೊಡಗಿರುವ ರೈತರು, ಕಾರ್ಮಿಕರು ಮತ್ತು ನೌಕರರು ಏಕೆ ಈ ಸುಧಾರಣೆಗಳನ್ನು ಪ್ರತಿರೋಧಿಸುತ್ತಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೆ ‘ಸುಧಾರಣೆಗಳು’ ಎಂಬಂತೆ ಕಾಣುವ ಈ ಕ್ರಮಗಳು ನಿಜವಾಗಿಯೂ ಅವರ ಬದುಕಿನಲ್ಲಿ ತಂದಿರುವ ಬದಲಾವಣೆಗಳೇನು, ತಂದಿರುವ ಪರಿಣಾಮಗಳೇನು ಎಂಬುದರ ಮೂರ್ತ ಅಧ್ಯಯನಗಳು ಇನ್ನಷ್ಟು ಮಹತ್ವ ಪಡೆಯುತ್ತವೆ. ಈ ಪುಸ್ತಕದಲ್ಲಿ ಇಂತಹ ಎರಡು ಮೂರ್ತ ಅಧ್ಯಯನಗಳ ವರದಿಗಳು ಇವೆ.

ಪುಸ್ತಕಗಳ ಖರೀದಿಗೆ ಸಂಪರ್ಕಿಸಿ:

ಪುಸ್ತಕಪ್ರೀತಿ, 37/ಎ, 4ನೆಯ ಕ್ರಾಸ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು 560086

ಇಮೈಲ್ : [email protected]; ಫೋನ್ : 9036082005, 080-23494488

 

Donate Janashakthi Media

Leave a Reply

Your email address will not be published. Required fields are marked *