ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23ನೇ ಸಾಲಿನ ಆಯ್ಯವ್ಯಯವು ರಾಜ್ಯದ ಸಮಗ್ರ ಅಭಿವೃದ್ದಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಮತ್ತು ದುಡಿಯುವ ಜನರ ಹಿತವನ್ನು ನಿರ್ಲಕ್ಷ್ಯ ಮಾಡಿದ ಬಜೆಟ್ ಆಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ಟೀಕಿಸಿದೆ.
ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು, ರಾಜ್ಯದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸುವ ಪೂರ್ವದಲ್ಲೇ ಗೈಡೆನ್ಸ್ ವ್ಯಾಲೂ ಪ್ರಕಟಣೆಗಳನ್ನು ಹೊರಡಿಸಿ ಅಪಾರ ಪ್ರಮಾಣದ ಆಸ್ತಿಗಳ ನೋಂದಣಿ ಶುಲ್ಕಗಳನ್ನು ಹೆಚ್ಚು ಮಾಡಿಕೊಂಡಿದೆ. ಮಾತ್ರವಲ್ಲ, ಸರಕು ಸೇವಾ ತೆರಿಗೆಯನ್ನು(ಜಿಎಸ್‌ಟಿ) ಕೂಡ ಹೆಚ್ಚು ಮಾಡಿಕೊಳ್ಳಲು ಸಾಕಷ್ಟು ಕಸರತ್ತುಗಳನ್ನು ನಡೆಸಿದೆ. ಅದರ ಭಾಗವಾಗಿ ಕಳೆದ ಬಾರಿ 76 ಸಾವಿರ ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡಿತ್ತಾದರೂ ಅದನ್ನು ಸಂಪೂರ್ಣ ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಪಾರ ಪ್ರಮಾಣದ ಕೊರತೆ ಹಾಗೂ ಜನತೆಯ ಮೇಲೆ ಸಾಲದ ಹೊರೆ ಹೇರಿದ ಬಜೆಟ್ ಆಗಿದೆ. ವಾಸ್ತವವಾಗಿ ರಾಜ್ಯ ಸರ್ಕಾರದ ಈ ಬಜೆಟ್ ಎಲ್ಲ ಮಿತಿಗಳನ್ನು ಮೀರಿ ಭವಿಷ್ಯದಲ್ಲಿ ಕರ್ನಾಟಕದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಭರವಸೆಯನ್ನು ನೀಡಬೇಕಿತ್ತು ಎಂದು ತಿಳಿಸಿದ್ದಾರೆ.
ಕೊರೊನಾ ಕಾಲಘಟ್ಟದಲ್ಲಿ ಇಳಿಕೆ ಕಂಡಿರುವ ಮತ್ತು ಪ್ರಸ್ರುತ ಶೇ 25-26 ರ ಆಸುಪಾಸಿನಲ್ಲಿರುವ ರಾಜ್ಯದ ಆರ್ಥಿಕತೆ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಈ ಬಜೆಟ್‌ನಲ್ಲಿ ಪ್ರಕಟಿಸಿ ಶ್ರಮಿಕ ವರ್ಗಕ್ಕೆ ಶಕ್ತಿ ಹೆಚ್ಚಿಸುವ ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಈ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮಗಳು ರಾಜ್ಯ ಬಜೆಟ್‌ನಲ್ಲಿ ಕಾಣುತ್ತಿಲ್ಲ. ಬದಲಾಗಿ ರಾಜ್ಯ ಆರ್ಥಿಕತೆ ಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಅಪಾಯಗಳು ಸ್ಪಷ್ಟವಾಗಿ ಗೋಚರಿಸಿವೆ. ಇದು ರಾಷ್ರೀಯ ಸ್ವಯಂ ಸೇವಕ ಸಂಘದ ಸ್ಪಷ್ಟ ನಿರ್ದೇಶನದಲ್ಲಿ ಕೇಂದ್ರ ಸರ್ಕಾರದ ಕಾರ್ಪೊರೇಟ್ ಪ್ರೇರಿತ ಹಾಗೂ ಇಡೀ ರಾಜ್ಯವನ್ನು ಸಮಗ್ರತೆಯನ್ನು ಮರೆತು ಕೇವಲ ಬೆಂಗಳೂರನ್ನು ಕೇಂದ್ರೀಕರಿಸಿದ ಬಜೆಟ್ ಎನ್ನುವುದು ಸಿಐಟಿಯು ಸ್ಪಷ್ಟ ಅಭಿಪ್ರಾಯ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಹಮಾಲಿ, ಮನೆಗೆಲಸ, ಆಟೋ, ಟ್ಯಾಕ್ಸಿ, ಬೀದಿಬದಿ ವ್ಯಾಪಾರಿಗಳು ಮೊದಲಾದ 11 ವಿಭಾಗದ ಅಸಂಘಟಿತ ಕಾರ್ಮಿಕರ ಕಲ್ಯಾಣ ಸೌಲಭ್ಯಗಳಿಗಾಗಿ ಬಜೆಟ್‌ನಲ್ಲಿ ಸರಕಾರ ಕನಿಷ್ಟ 1000 ಕೋಟಿ ಮೀಸಲಿಡಬೇಕೆಂಬ ನಮ್ಮ ಬೇಡಿಕೆಗೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿಗಳು ಯಾವುದೇ ಸ್ಪಂದನೆ ನೀಡದೇ ದಿನದ ಕೂಲಿಯನ್ನೆ ನಂಬಿ ಬದುಕುತ್ತಿರುವ ಯಾವುದೇ ಸಾಮಾಜಿಕ ಭದ್ರತೆಗೆ ಒಳಪಡದ ಶ್ರಮಜೀವಿಗಳಿಗೆ ಅನ್ಯಾಯವೆಸಗಿದ್ದಾರೆ. ಬಜೆಟ್‌ನಲ್ಲಿ ಕೋವಿಡ್ 2ನೇ ಅಲೆಯ ಲಾಕಡೌನ್ ಹಿನ್ನಲೆಯಲ್ಲಿ ಘೋಷಿಸಿದ ರೂ. 2000 ಪರಿಹಾರ 11 ಲಕ್ಷ ಅಸಂಘಟಿತ ಕಾರ್ಮಿಕರಿಗೆ 238 ಕೋಟಿ ವಿತರಿಸಲಾಗಿದೆ ಎಂದು ಹೇಳಿದ್ದಾರೆ. ಆದರೇ ಪರಿಹಾರಕ್ಕಾಗಿ ಅರ್ಜಿ ಹಾಕಿದ ಇನ್ನೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರ ಬಂದಿಲ್ಲ.
ಇನ್ನೂ ಅತ್ಯಂತ ಹಾಸ್ಯಸ್ಪದ ಮತ್ತು ನಾಚಿಕೆಗೇಡಿನ ಸಂಗತಿ ಎಂದರೆ, ಮುಖ್ಯಮಂತ್ರಿಗಳು ಮಂಡಿಸಿದ 2022-23 ಸಾಲಿನಲ್ಲಿ ಬಜೆಟ್‌ನಲ್ಲಿ 2.30 ಲಕ್ಷ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಅಂದಾಜು 2,610 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಆದರೆ ವಾಸ್ತವವಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ವಾರ್ಷಿಕವಾಗಿ ಸಂಗ್ರಹವಾಗುವ ಸೆಸ್ ನಿಧಿಯಿಂದ ಈ ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗುತ್ತಿದೆ. ಈ ಕಲ್ಯಾಣ ಕಾರ್ಯಕ್ರಮಗಳನ್ನೇ ರಾಜ್ಯ ಸರ್ಕಾರ ತನ್ನ ಕಾರ್ಯಕ್ರಮಗಳೆಂದು ಘೋಷಿಸಿಕೊಂಡು ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಕಾರ್ಮಿಕ ಸಚಿವರು ಈ ಸತ್ಯವನ್ನು ಮರೆಮಾಚಿ ರಾಜ್ಯದ ಜನತೆಗೆ ಮತ್ತು ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ತಪ್ಪು ಸಂದೇಶ ನೀಡಿ ಹಿಂದೆ ಕಲ್ಯಾಣ ಮಂಡಳಿ ಹಣದಲ್ಲಿ ರಾಜಕೀಯ ನಡೆಸಿದೆ ಎಂದು ಸಿಐಟಿಯು ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತರಿಗೆ ಬಜೆಟ್ ನಲ್ಲಿ ಸ್ವಲ್ಪ ಪ್ರಮಾಣದ ಆರ್ಥಿಕ ನೆರವು ಘೋಷಿಸಿದ್ದರೂ ಅವರುಗಳನ್ನು ರಾಜ್ಯ ಸರ್ಕಾರ ಅಡಿಯಲ್ಲಿ ನೌಕರರೆಂದು ಘೋಷಿಸಿ ಕನಿಷ್ಟ ವೇತನ ವ್ಯಾಪ್ತಿಗೆ ತರಬೇಕು ಮತ್ತು ಸಾಮಾಜಿಕ ಭ್ರದ್ರತೆ ನೀಡಬೇಕೆನ್ನುವ ಬೇಡಿಕೆಯನ್ನು ಪರಿಗಣಿಸದಿರುವುದು. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಇರುವ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಿಗೆ, ಪಂಚಾಯಿತಿಗಳಿಗೆ ವರ್ಗಾಹಿಸುವ ಅಪಾಯಕಾರಿ ನಡೆಗಳು ಹಾಗೂ ನೌಕರರು ಮಂಡಿಸಿದ್ದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಬಜೆಟ್ ನಿರಾಕರಿಸಿದೆ.
ರಾಜ್ಯದಲ್ಲಿ ಕೊರೊನೋತ್ತರ ಕಾಲದಲ್ಲಿ ಲಕ್ಷಾಂತರ ಕಾರ್ಮಿಕರು, ಜನ ಸಾಮಾನ್ಯರು ನಿರುದ್ಯೋಗಿಗಳಾಗಿದ್ದಾರೆ. ಕೃಷಿ ಕೈಗಾರಿಕಾ ರಂಗಗಳು ತೀವ್ರ ಬಿಕ್ಕಟ್ಟಿಗೆ ಒಳಗಾಗಿವೆ, ಲಕ್ಷಾಂತರ ಯುವಜನರು ಮುನ್ಸಿಪಲ್, ಆರೋಗ್ಯ ಗ್ರಾಮ ಪಂಚಾಯ್ತಿಗಳು ಮೊದಲಾದ ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿಗಳಾಗಿ, ಗುತ್ತಿಗೆ ಹೊರಗುತ್ತಿಗೆ ಆಧಾರದ ಕೆಲಸಗಳನ್ನು ಮಾಡುತ್ತಾ ಅಭದ್ರತೆ ಜೀವನಕ್ಕೆ ದೂಡಲ್ಪಟ್ಟಿದ್ದಾರೆ. ರಾಜ್ಯದ ಮೂಲಭೂತ ಕರ್ತವ್ಯಗಳನ್ನು ಜಾರಿಗೊಳಿಸುವ ಇಂತಹ ವಿಭಾಗಗಳಿಗೆ ಯಾವುದೇ ವೇತನ ಪರಿಷ್ಕರಣೆ ಮತ್ತು ಸೇವೆ ಖಾಯಂಮಾತಿಯ ಪ್ರಸ್ತಾಪ ಬಜೆಟ್‌ನಲ್ಲಿ ಇಲ್ಲವಾಗಿವೆ.
ಹೀಗಾಗಿ ಮುಖ್ಯಮಂತ್ರಿಗಳ ಈ ಬಜೆಟ್ ಜನಪರವೂ ಅಲ್ಲದ ಮತ್ತು ಪಸ್ತುತ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾದ ಕೇವಲ ಹಾಲಿ ಜಾರಿಯಲ್ಲಿರುವ ಕಾರ್ಯಕ್ರಮಗಳನ್ನು ಒಳಗೊಂಡ ಮತ್ತು ಮುಂದಿನ ಚುನಾವಣೆಗಳ ಮೇಲೆ ಕಣ್ಣಿಟ್ಟು ರೂಪಿಸಿರುವ ಪ್ರಚಾರದ ಆಯ್ಯವ್ಯಯವಾಗಿದೆ ಎನ್ನುವುದು ಸಿಐಟಿಯು ಅಭಿಪ್ರಾಯಪಟ್ಟಿದೆ.
ರಾಜ್ಯ ಸರ್ಕಾರದ ಈ ಜನವಿರೋಧಿ ಬಜೆಟ್ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿರುವ ಮಾರ್ಚ್ 28 ಹಾಗೂ 29 ರ ಸಾರ್ವತ್ರಿಕ ಮುಷ್ಕರಕ್ಕೆ ರಾಜ್ಯದ ಶ್ರಮಿಕ ವರ್ಗ ಅಣಿಯಾಗಬೇಕೆಂದು ಸಿಐಟಿಯು ಕರೆ ನೀಡಿದೆ.