ದುಡಿಯುವ ಜನರ ಬೇಡಿಕೆ ಈಡೇರಿಕೆಗಾಗಿ ಫೆಬ್ರವರಿ 23-24 ರಂದು ಅಖಿಲ ಭಾರತ ಮುಷ್ಕರ

ಕೇಂದ್ರದ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭವನ್ನು ಉಪಯೋಗಿಸಿಕೊಂಡು ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಯಾವುದೇ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ವಿರೋಧಿಯಾಗಿ ರೂಪಿಸಿತು. ಇದರ ವಿರುದ್ಧ ಪ್ರಬಲವಾದ ಚಳುವಳಿ ನಡೆಯುತ್ತಿವೆ.

ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿಗಾಗಿ ಸಂವಿಧಾನದ ಪ್ರಜಾಪ್ರಭುತ್ವೀಯ ಮೌಲ್ಯಗಳ ಉಳಿವಿಗಾಗಿ ಹಾಗೂ ಜನತೆಯ ಹಕ್ಕುಗಳ ಸಂರಕ್ಷಣೆಗಾಗಿ ಫೆಬ್ರವರಿ 23 ಮತ್ತು 24ರಂದು ಎರಡು ದಿನ ಅಖಿಲ ಭಾರತ ಮುಷ್ಕರ ನಡೆಯುತ್ತಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಪ್ರಕಟಣೆ ನೀಡಿದೆ.

ಕೋವಿಡ್-19 ಸಾಂಕ್ರಾಮಿಕದ ಮೊದಲೆರಡು ಅಲೆಗಳ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ವಿಧಿಸಿದ ಲಾಕ್‌ಡೌನ್‌ಗಳು ದುಡಿಯುವ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು. ಎರಡು ಅಲೆಗಳ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ನೀಡಿದ ಪರಿಹಾರ ಪ್ಯಾಕೇಜುಗಳು ಬಡಜನರ ಬದುಕಿಗೆ ಆಸರೆಯಾಗಲಿಲ್ಲ. ಬದಲಾಗಿ ಕಾರ್ಪೊರೇಟ್ ಬಂಡವಾಳಗಾರರ, ಶ್ರೀಮಂತರ ಜೋಬು ತುಂಬಿಸಿದವು. ಪ್ರಸ್ತುತ ಕೋವಿಡ್-19ನ 3ನೇ ಅಲೆ ರಾಜ್ಯದಲ್ಲಿಅದರಲ್ಲೂ ಬೆಂಗಳೂರಿನಲ್ಲಿ ವ್ಯಾಪಕವಾಗಿ ವಿಸ್ತರಣೆಯಾಗುತ್ತಿದೆ. ಈ ಸಂದರ್ಭದಲ್ಲಿ ದುಡಿಯುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲ್ಪಟ್ಟಿದೆ.

ಕೇಂದ್ರದ ಮೋದಿ ಸರ್ಕಾರ ‘ನವ ಉದಾರೀಕರಣ ನೀತಿ’ಗಳನ್ನು ಅಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಮತ್ತಿತರ ಕ್ಷೇತ್ರಗಳಿಗೆ ನಿರಂತರ ಬಜೆಟ್‌ನಲ್ಲಿ ಹಣಕಾಸಿನ ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿದೆ.

ಕೇಂದ್ರ ಸರ್ಕಾರದ ಜನ ವಿರೋಧಿ ತೆರಿಗೆ ನೀತಿ, ದಿನ ಬಳಕೆಯ ಸರಕು ಮತ್ತು ಸೇವೆಗಳ ಮೇಲಿನ ಬಾರೀ ಪ್ರಮಾಣದ ಪರೋಕ್ಷ ಜಿ.ಎಸ್.ಟಿ. ಯಂತಹ ಕ್ರಮಗಳಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳು ನಿರಂತರ ಹೆಚ್ಚಳಗೊಳ್ಳುತ್ತಲೇ ಇದೆ. ಇವೆಲ್ಲವೂಗಳಿಂದಾಗಿ ಜನ ಸಾಮಾನ್ಯರ, ದುಡಿಯುವ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಸಿಐಟಿಯು ಸಂಘಟನೆ ವಿವರಿಸಿದೆ.

ದೇಶದಲ್ಲಿ ರೈತ ಸಂಘಟನೆಗಳು ಮತ್ತು ಅವುಗಳ ಜಂಟಿ ವೇದಿಕೆ ಕಾರ್ಮಿಕ, ಮತ್ತಿತರ ಸಂಘಟನೆಗಳ ಬೆಂಬಲದೊಂದಿಗೆ ರೈತ ವಿರೋಧಿ ಮೂರು ಕೃಷಿ ಕಾನೂನುಗಳು, ವಿದ್ಯುತ್(ತಿದ್ದುಪಡಿ) ಮಸೂದೆಯನ್ನು ರದ್ದುಪಡಿಸಬೇಕು ಹಾಗೂ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ನಡೆಸಿದ ಒಂದು ವರ್ಷ ಸುದೀರ್ಘ ಐತಿಹಾಸಿಕ ಹೋರಾಟ ಮತ್ತು ದೇಶಾದ್ಯಂತ ಏಕಕಾಲದಲ್ಲಿ ನಡೆದ ಜಂಟಿ ಪ್ರತಿಭಟನೆಗಳಿಂದಾಗಿ ಕೇಂದ್ರದ ಮೋದಿ ಸರ್ಕಾರ ರೈತರ ಕ್ಷಮೆ ಯಾಚಿಸಿ ಪಾರ್ಲಿಮೆಂಟಿನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆದಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ಇಂತಹ ಕಾಯ್ದೆಗಳನ್ನು ವಾಪಸ್ಸು ಪಡೆಯಲು ಬಂಡತನವನ್ನು ಪ್ರದರ್ಶಿಸುತ್ತಿದೆ.

ಅಲ್ಲದೆ ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳಾದ ರೈಲ್ವೆ, ವಿಮಾನಯಾನ, ವಿದ್ಯುತ್, ಕಲ್ಲಿದ್ದಲು, ಬ್ಯಾಂಕ್, ವಿಮಾಕ್ಷೇತ್ರ, ದೂರಸಂಪರ್ಕ, ಮೂಲಸೌಕರ್ಯ, ಹೆದ್ದಾರಿಗಳು, ರಕ್ಷಣಾ ಸಾಮಾಗ್ರಿ ಉತ್ಪಾದನಾ ಕೈಗಾರಿಕೆ ಹಾಗೂ ಮತ್ತಿತರ ಸಾರ್ವಜನಿಕ ಉದ್ದಿಮೆಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಂಪತ್ತು ನಗದೀಕರಣ ಯೋಜನೆಯನ್ನು ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಬಹುತೇಕ ಸರ್ಕಾರಿ ಇಲಾಖೆಗಳು ಮತ್ತು ಆಡಳಿತದಲ್ಲಿ ಭಾರೀ ಪ್ರಮಾಣದ ಗುತ್ತಿಗೀಕರಣ ಮತ್ತು ಕೆಲಸದ ಹೊರಗುತ್ತಿಗೆಯ ಮೂಲಕ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಯೋಜಿಸಲಾಗುತ್ತಿದೆ.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಬದಲಾಗಿ ಅಲ್ಪಸ್ವಲ್ಪ ಇರುವ ಕಾನೂನುಗಳನ್ನು ಬದಲಾಯಿಸಿ ಅವರ ಕಲ್ಯಾಣಕ್ಕೆ ಇರುವ ಮಂಡಳಿಗಳನ್ನು ದುರ್ಬಲಗೊಳಿಸಿ ಇರುವ ಸೌಲಭ್ಯಗಳನ್ನು ಮೊಟಕುಗೊಳಿಸಲು ಮುಂದಾಗಿದೆ. ಇವೆಲ್ಲಗಳನ್ನು ಮರೆಮಾಚಲು ಆಳುವ ವರ್ಗಗಳು ಜನರಲ್ಲಿ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಹೆಸರಿನಲ್ಲಿ ಮತೀಯ ದ್ವೇಷಗಳನ್ನು ಬೆಳೆಸಿ ದುಡಿಯುವ ಜನರ ಐಕ್ಯತೆಯನ್ನು ಮುರಿಯಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿವೆ.

ಭಾರತವನ್ನು ಜಾಗತಿಕ ಹಸಿವು ಸೂಚ್ಯಾಂಕದಲ್ಲಿ 101ನೇ ಸ್ಥಾನಕ್ಕೆ ಇಳಿಸಿದೆ. ಬಡಜನರ ಆರ್ಥಿಕ ಪುನಶ್ಚೇತನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ತೆರಿಗೆ ಕಡಿತ ಮಾಡಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ ರೂ.10,000 ನೇರ ನಗದು ವರ್ಗಾವಣೆ, ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಬೇಕೆಂಬ ಬೇಡಿಕೆಗಳು ಈ ಬಾರಿಯ ಮುಷ್ಕರದ ಪ್ರಮುಖ ಬೇಡಿಕೆಗಯಾಗಿದೆ.

ಮುಷ್ಕರ ಪ್ರಮುಖ ಬೇಡಿಕೆಗಳು

  1. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರೀಯ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡಬೇಕು.
  2. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ ರೂ.10,000 ನೇರ ನಗದು ವರ್ಗಾವಣೆ ಮಾಡಬೇಕು ಹಾಗೂ ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಬೇಕು.
  3. ಕಾರ್ಪೊರೇಟ್ ಬಂಡವಾಳಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕು.
  4. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಜೊತೆಗೆ ವಿದ್ಯುತ್ (ತಿದ್ದುಪಡಿ) ಮಸೂದೆಯನ್ನು ವಾಪಸ್ಸು ಪಡೆಯಬೇಕು. ಶಾಸನಬದ್ಧ ಬೆಂಬಲ ಬೆಲೆ ಕಾಯ್ದೆ ರೂಪಿಸಬೇಕು. ರಾಜ್ಯ ಸರ್ಕಾರ ಸಹ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು.
  5. ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು.
  6. ಅಸಂಘಟಿತ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸಬೇಕು. ಕೋವಿಡ್ ಲಾಕ್‌ಡೌನ್ ಸಂಕಷ್ಟಕ್ಕೆ ಒಳಗಾದ ಅಸಂಘಟಿತರಿಗೆ ಪರಿಹಾರ ಒದಗಿಸಬೇಕು.
  7. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ನೀಡಬೇಕು.
  8. ಕೋವಿಡ್‌ ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ವಿಮಾ ಸೌಲಭ್ಯ ಒದಗಿಸಬೇಕು.
  9. ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಂ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡಬೇಕು.
  10. ರಾಷ್ಟ್ರೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಶ್ರೀಮಂತರಿಗೆ ಆಸ್ತಿ ತೆರಿಗೆ ಇತ್ಯಾದಿಗಳನ್ನು ವಿಧಿಸುವ ಮೂಲಕ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರೆ ನಿರ್ಣಾಯಕ ಸಾರ್ವಜನಿಕ ಸೇವೆಗಳಿಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು.
  11. ಸಂಘ ಮಾನ್ಯತೆ, ಗುತ್ತಿಗೆ ಮುಂತಾದ ಖಾಯಂಯೇತ್ತರರ ಖಾಯಂಗೆ, ಅಸಂಘಟಿತರಿಗೆ ಭವಿಷ್ಯ ನಿಧಿಗೆ ಶಾಸನ ರೂಪಿಸಬೇಕು.
  12. ಅಸಂಘಟಿತ ಮತ್ತು ಸಾರಿಗೆ ಕ್ಷೇತ್ರದ ಕಾರ್ಮಿಕ ಕಲ್ಯಾಣ ಮಂಡಳಿ – ಕೆಎಲ್‌ಸಿ ಸ್ಥಾಪನೆ, ಎನ್.ಇ.ಪಿ.ಯನ್ನು ಕೈಬಿಡಿ, ಖಾತರಿ ಪಿಂಚಣಿ ಅನ್ನು ನೀಡಿ. ಮತ್ತು ಐಸಿಡಿಎಸ್‌ನ್ನು ಸಂರಕ್ಷಿಸಿ, ಕನಿಷ್ಠ ವೇತನವನ್ನು ನಿಗದಿ ಮಾಡಬೇಕು.

ಮೇಲಿನ ಬೇಡಿಕೆಗಳಿಗಾಗಿ ಮುಷ್ಕರ ನಡೆಯುತ್ತಿದ್ದು, ಅದರ ಭಾಗವಾಗಿ ರಾಜ್ಯದಲ್ಲಿ ಪ್ರಚಾರಾಂದೋಲನಗಳು, ಸಭೆ, ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಎಲ್ಲೆಡೆ ಪ್ರಚಾರವನ್ನು ಹಮ್ಮಿಕೊಂಡಿದ್ದೇವೆ ಎಂದು ಸಿಐಟಿಯು ಸಂಘಟನೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *