ಬೆಂಗಳೂರು: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಸುಗ್ರೀವಾಜ್ಞೆ ವಿರೋಧಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ಅಹೋರಾತ್ರಿ ಪ್ರತಿಭಟನೆ ನಗರದಲ್ಲಿ ಎರಡನೇ ದಿನವೂ ಮುಂದುವರಿದಿದೆ.
ಸ್ವಾತಂತ್ರ್ಯ ಉದ್ಯಾನದ ದೇವರಾಜ್ ಅರಸು ವೇದಿಕೆಯಲ್ಲಿ ಪರ್ಯಾಯ ಅಧಿವೇಶನಗಳು ಆರಂಭವಾಗಿದ್ದು, ಬಡವರ ಭೂಮಿ ಮತ್ತು ವಸತಿ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಅದರ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಬುಧವಾರ ವಿಧಾನ ಮಂಡಲದ ಅಧಿವೇಶನದಲ್ಲಿ ಭೂಸುಧಾರಣೆ ಮಸೂದೆಗೆ ೨ನೇ ತಿದ್ದುಪಡಿಯನ್ನು ಕಂದಾಯ ಸಚಿವ ಆರ್.ಅಶೋಕ್ ಮಂಡಿಸುತ್ತಿದ್ದಾರೆ. ಸದರಿ ತಿದ್ದುಪಡಿ ಸೇರಿ ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಎರಡನೇ ದಿನಕ್ಕೆ ಮುಂದುವರಿದಿದೆ.
ಸೋಮವಾರ ಬೃಹತ್ ಸಂಖ್ಯೆಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ರೈತರು ಮತ್ತು ಕಾರ್ಮಿಕರು, ಸರ್ಕಾರದ ವಿರುದ್ಧ ಆಕ್ರೋಶ ಮೊಳಗಿಸಿ, ಕಾಯ್ದೆಗಳಿಗೆ ತಂದಿರುವ ತಿದ್ದಪಡಿ ವಾಪಸ್ ಪಡೆಯುವ ತನಕ ಹೋರಾಟ ಅಚಲ ಎಂದು ಎಚ್ಚರಿಸಿದ್ದಾರೆ.
ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಅಶೋಕ್ ದಾವಲೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕಾರ್ಮಿಕ ಮುಂಖಡ ಮೈಕಲ್ ಬಿ. ಫರ್ನಾಂಡಿಸ್, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು, ಲಕ್ಷ್ಮೀನಾರಾಯಣ ನಾಗವಾರ, ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ, ಮಾರುತಿ ಮಾನ್ಪಡೆ ಸೇರಿ ನೂರಾರು ರೈತ ಮುಖಂಡರು ಬೀದಿಗಿಳಿದಿದ್ದಾರೆ.
ಸೆ. 25ರಂದು ಬಂದ್‌ಗೆ ಕರೆ: ರೈತ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಸೆ.25ರಂದು ಪಂಜಾಬ್ ಮತ್ತು ಹರಿಯಾಣದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.
ಕರ್ನಾಟಕದಲ್ಲೂ ಅದೇ ದಿನ ಬಂದ್ ನಡೆಸುವ ಬಗ್ಗೆ ಎಲ್ಲಾ ಸಂಘಟನೆಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.