ಕುಂದಾಪುರ: ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಾತಿಯ ನೆಪದಲ್ಲಿ ಪೋಷಕರಿಗೆ ದೊಡ್ಡ ರೀತಿಯಲ್ಲಿ ಹಿಂಸೆ ಕೊಡುತ್ತಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಡೊನೇಷನ್ ಹಣ ಕೊಡದಿದ್ದರೆ ಆನ್ಲೈನ್ ತರಗತಿಯನ್ನು ಸ್ಥಗಿತ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಸಂವಿಧಾನ ನಮಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಆದರೆ ಸಂವಿಧಾನಕ್ಕೆ ವಿರುದ್ದವಾಗಿ ಸರ್ಕಾರದ ಆಶಯಗಳಿಗೆ, ಶಿಕ್ಷಣ ಇಲಾಖೆಯ ಸುತ್ತೋಲೆಗಳಿಗೆ ವಿರುದ್ದವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿರುವುದು ದುರಂತ ಎಂದು ಡಿವೈಎಫ್ಐ ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು.
ಇದನ್ನು ಓದಿ: ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಎಸ್ಎಫ್ಐ ಪ್ರತಿಭಟನೆ
ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್ಐ) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ದುಪ್ಪಟ್ಟು ಶುಲ್ಕ ವಸೂಲಾತಿಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ದೇಶವನ್ನು ವ್ಯಾಪಿಸಿರುವ ಕೊರೊನಾ ಮಹಾಮಾರಿ ದುಡಿಯುವ ಜನರಿಗೆ ಆದಾಯವೇ ಇಲ್ಲದಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯತೆ ಇಲ್ಲದೇ ಪೋಷಕರನ್ನು ಪೀಡಿಸಿ ಶುಲ್ಕ ವಸೂಲಾತಿ ಮಾಡುತ್ತಿರುವುದು ಖಂಡನೀಯ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್ಚುವರಿಯಾಗಿ ಯಾವ ಶಿಕ್ಷಣ ಸಂಸ್ಥೆ ಶುಲ್ಕ ವಸೂಲಾತಿಯಲ್ಲಿ ತೊಡಗಿದೆಯೋ ಆ ಶಿಕ್ಷಣ ಸಂಸ್ಥೆಯ ವಿರುದ್ದ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ಶುಲ್ಕ ಕಟ್ಟಿಸಿಕೊಳ್ಳಲು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ಎಸ್.ಎಫ್. ಐ ಆಗ್ರಹ
ಆನ್ಲೈನ್ ತರಗತಿಗಳಿಂದಾಗಿ ಕಷ್ಟಪಟ್ಟು ಪೋಷಕರು ದುಬಾರಿ ಬೆಲೆಯ ಫೋನ್ಗಳನ್ನು ಖರೀದಿಸಿ ಮಕ್ಕಳಿಗೆ ಕೊಟ್ಟಿದ್ದಾರೆ. ಶಾಲಾ ಕಾಲೇಜುಗಳಲ್ಲಿ ತರಗತಿಯಗಳು ನಡೆಯದ ಕಾರಣ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ವೆಚ್ಚವೂ ಜಾಸ್ತಿಯಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೂಡ ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ ಕೊಡಬೇಕೆಂದು ಪೀಡಿಸುತ್ತಿದ್ದಾರೆ. ಆನ್ಲೈನ್ ತರಗತಿಗಳು ನಡೆಯುತ್ತಿದ್ದರೂ ಪೂರ್ಣ ಶುಲ್ಕ ಭರಿಸುವಂತೆ ಒತ್ತಡ ಹೇರಲಾಗುತ್ತಿದೆ. ಕೊರೊನಾ ಸಂದರ್ಭದಲ್ಲೂ ಕೂಡ ಮಾನವೀಯತೆ ಇಲ್ಲದೇ ಶುಲ್ಕ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸದಿದ್ದಲ್ಲಿ ಎಸ್ಎಫ್ಐ ಮತ್ತು ಡಿವೈಎಫ್ಐ ರಾಜ್ಯಾವ್ಯಾಪಿ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಬಳಿಕ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ಕೆ ಪದ್ಮನಾಭ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ತಾಲೂಕು ಅಧ್ಯಕ್ಷ ರಾಜೇಶ ವಡೇರ ಹೋಬಳಿ, ಮುಖಂಡರಾದ ಉದಯ್ ಟೈಲರ್, ರವಿ ವಿ ಎಂ, ಕಟ್ಟಡ ಕಾರ್ಮಿಕ ಸಂಘಟನೆಯ ಸಂತೋಷ ಹೆಮ್ಮಾಡಿ, ಪೋಷಕರಾದ ಚಂದ್ರಶೇಖರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.