ವಾರಣಾಸಿ ಗ್ಯಾನವಾಪಿ ಕುರಿತು ಸಂದೇಶ: ಪ್ರೊಫೆಸರ್ ಡಾ. ರತನ್‌ಲಾಲ್ ಬಂಧನ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ವಾಸ್ತವತೆಯನ್ನು ಪ್ರಶ್ನಿಸುವಂತಹ ವಿಷಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಿದ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್‍ಲಾಲ್‍ ಅವರನ್ನು ನೆನ್ನೆ(ಮಾ.20) ರಾತ್ರಿ ಬಂಧಿಸಲಾಗಿದೆ.

ಉತ್ತರ ದೆಹಲಿಯ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ರತನ್‌ಲಾಲ್‌ ಅವರನ್ನು ಬಂಧಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೇಳಿಕೆಗಳನ್ನು ವ್ಯಕ್ತಪಡಿಸಿದ ರತನ್‌ಲಾಲ್‌ ಬಗ್ಗೆ ಪೊಲೀಸರು, ಇತಿಹಾಸದ ಪ್ರಾಧ್ಯಾಪಕ ಮಂಗಳವಾರ ಫೋಟೋವನ್ನು ಹಂಚಿಕೊಂಡಿದ್ದಾರೆ ಹಾಗೂ  ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾರೆ ಎಂದರು.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಪ್ರಕರಣದ ಬಳಿಕ ಪ್ರಾಧ್ಯಾಪಕ ರತನ್ ಲಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಬರೆದುಕೊಂಡಿದ್ದರು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್‌ ವಿರುದ್ಧ ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೆಹಲಿ ಪೊಲೀಸರು ಪ್ರಾಧ್ಯಾಪಕ ರತನ್ ಲಾಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್, ಪೊಲೀಸರಿಗೆ ಮಂಗಳವಾರ ರಾತ್ರಿ ದೂರು ನೀಡಿದ್ದರು. ಅಲ್ಲದೆ, ರತನ್‍ಲಾಲ್ ಶಿವಲಿಂಗದ ಕುರಿತು ಅವಹೇಳನಕಾರಿ ಮತ್ತು ಪ್ರಚೋದನಕಾರಿ ಟ್ವೀಟ್ ಹಂಚಿಕೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲಾಗುತ್ತಿದೆ. ಸೌಹಾರ್ದತೆಗೆ ಧಕ್ಕೆಯಾಗುವಂತೆ ಪೂರ್ವಾಗ್ರಹ ಪೀಡಿತವಾಗಿ ಕೃತ್ಯ ಎಸಗಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.

ರತನ್‌ಲಾಲ್ ವಿರುದ್ಧ ಐಪಿಸಿ ಸೆಕ್ಷನ್ 153ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಹಿಂದೂ ಧರ್ಮದಲ್ಲಿ ಫುಲೆ, ರವಿದಾಸ್ ಮತ್ತು ಅಂಬೇಡ್ಕರ್ ಅವರನ್ನೊಳಗೊಂಡ ಸುದೀರ್ಘವಾದ ವಿಮರ್ಶೆಯ ಸಂಪ್ರದಾಯವಿದೆ. ಇಲ್ಲಿ, ನಾನು ಅದನ್ನು ವಿಮರ್ಶಿಸಿಲ್ಲ, ಇದು ಕೇವಲ ಒಂದು ಅವಲೋಕನ ಮತ್ತು ಅಭಿಪ್ರಾಯವಾಗಿದೆ. ನಮ್ಮ ದೇಶದಲ್ಲಿ (ಏನು ಮಾತನಾಡಿದರೂ) ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಬಾಯಿಗೆ ಪಟ್ಟಿ ಹಾಕಿಕೊಂಡು ಜನ ಏನು ಮಾಡುತ್ತಾರೆ?” ಎಂದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರೊಫೆಸರ್‌ ಸಮರ್ಥಿಸಿಕೊಂಡಿದ್ದಾರೆ.

ಜ್ಞಾನವಾಪಿ ಮಸೀದಿ ಕುರಿತು ಬರೆದ ಬಳಿಕ ನನ್ನ 20 ವರ್ಷದ ಮಗನಿಗೆ ಫೇಸ್‍ಬುಕ್ ಮೆಸೆಂಜರ್‌ನಲ್ಲಿ ಬಹಳಷ್ಟು ಬೆದರಿಕೆಗಳು ಬರುತ್ತಿವೆ ಎಂದು ರತನ್ ಲಾಲ್ ಟ್ವೀಟ್ ಮಾಡಿದ್ದರು.

ರತನ್‍ಲಾಲ್ ಬೋಧನಾ ವೃತ್ತಿಯ ಜೊತೆಗೆ, ದಲಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಅಂಬೇಡ್ಕರ್‌ನಾಮ ನ್ಯೂಸ್ ಪೋರ್ಟಲ್‍ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಟ್ವಿಟ್ಟರ್ ಸ್ವಯಂ ಪರಿಚಯದಲ್ಲಿ ಅವರು ತಮ್ಮನ್ನು ತಾವು, ಹೋರಾಟಗಾರ, ಬರಹಗಾರ ಮತ್ತು ಅಂಬೇಡ್ಕರ್ ಕ್ರಾಂತಿಯ ಮಗ ಎಂದು ಬರೆದುಕೊಂಡಿದ್ದಾರೆ.

ತನ್ನ ವಿರುದ್ಧ ಬರುತ್ತಿರುವ ನಿಂದನಾತ್ಮಕ ಅವಹೇಳನ ಹಾಗೂ ಬೆದರಿಕೆಗಳ ವಿರುದ್ಧ ರಕ್ಷಣೆ ಕೋರಿರುವ ಪ್ರಾಧ್ಯಾಪಕ ರತನ್ ಲಾಲ್ ಎಕೆ-56 ಪರವಾನಗಿ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊತ್ತಿರುವ ದೆಹಲಿ ಮತ್ತು ಲಕ್ನೋ ವಿಶ್ವವಿದ್ಯಾಲಯಗಳ ಇಬ್ಬರು ಪ್ರಾಧ್ಯಾಪಕರು ದಲಿತ ಸಮಾಜದಿಂದ ಬಂದವರು.

ರತನ್‌ಲಾಲ್ ತಮ್ಮ ಹೀಗೆ ಬರೆದಿದ್ದಾರೆ, “ಆರಂಭದಲ್ಲಿ ನಾನು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಆದರೆ ಇತ್ತೀಚೆಗೆ ನನ್ನಂತಹ ದಲಿತ ಸಮುದಾಯದಿಂದ ಬಂದ ಲಕ್ನೋ ವಿಶ್ವವಿದ್ಯಾಲಯದ ಪ್ರೊಫೆಸರ್ ರವಿಕಾಂತ್ ಚಂದನ್ ಅವರಿಗೂ ಸಮಾಜವಿರೋಧಿ ಸಂಘಟನೆಗಳ ಸದಸ್ಯರು ಮತ್ತು ಆರೋಪಿತ ವಿದ್ಯಾರ್ಥಿ ಸಂಘಟನೆಗಳ ದಾಳಿ ನಡೆದ ನಂತರ ಈ ಪತ್ರ ಬರೆಯುವುದು ಅನಿವಾರ್ಯವಾಗಿದೆ..”

“ನೀವು (ಪ್ರಧಾನಿ ಮೋದಿ) ಒಮ್ಮೆ ‘ಗುಂಡು ಹಾರಿಸಬೇಕಾದರೆ ನನ್ನನ್ನು ಕೊಲ್ಲು, ನನ್ನ ದಲಿತ ಸಹೋದರರ ಮೇಲೆ ಹಲ್ಲೆ ಮಾಡಬೇಡಿ’ ಎಂದು ಹೇಳಿದ್ದು ನನಗೆ ನೆನಪಿದೆ, ನಿಮ್ಮ ರಾಜಕೀಯದ ಬೆಂಬಲಿಗರು ಸಹ ನಿಮ್ಮ ಮಾತನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತೋರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಡಿ, ನೀವು ಅಂತಹ ಗಂಭೀರ ಹೇಳಿಕೆ ನೀಡಿದ ನಂತರವೂ ಅವರು ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ.” ಎಂದು ಬರೆದಿದ್ದಾರೆ.

ಈ ಹಿಂದೆ ರತನ್‍ಲಾಲ್, ಭಾರತದಲ್ಲಿ ನೀವು ಯಾವುದೇ ವಿಷಯದ ಬಗ್ಗೆ ಮಾತನಾಡಿದರೆ, ಯಾರಿಗಾದರೂ ಅಥವಾ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ, ಇದು ಹೊಸದೇನಲ್ಲ. ನಾನು ಇತಿಹಾಸಕಾರ ಮತ್ತು ಹಲವಾರು ಅವಲೋಕನಗಳನ್ನು ಮಾಡಿದ್ದೇನೆ. ಹಾಗಾಗಿ ಟ್ವೀಟ್‍ನಲ್ಲಿ ಅವುಗಳನ್ನು ಬರೆದಿದ್ದೇನೆ. , ನಾನು ನನ್ನ ಸಂದೇಶದಲ್ಲಿ ರಕ್ಷಣಾತ್ಮಕ ಭಾಷೆ ಬಳಸಿದ್ದೇನೆ. ಈಗಲೂ ಅದನ್ನೇ ಬಳಸಿದ್ದೇನೆ. ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಬಂಧಿತರಾಗಿರುವ ಪ್ರಾಧ್ಯಾಪಕ ರತನ್‌ಲಾಲ್‌ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ದೆಹಲಿ  ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಲಾ ವಿಭಾಗದ ಹೊರಗೆ ಶಿಕ್ಷಕರು-ವಿದ್ಯಾರ್ಥಿಗಳು ಇಂದು(ಮೇ 21) ಪ್ರತಿಭಟನೆ ನಡೆಸಿದರು.

ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ), ಎಐಎಸ್‌ಎ, ಸಿಎಫ್‌ಐ, ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್, ಫ್ರೆಟರ್ನಿಟಿ, ಕ್ರಾಂತಿಕಾರಿ ಯುವ ಸಂಘಟನೆಯಂತಹ ವಿದ್ಯಾರ್ಥಿ ಸಂಘಟನೆಗಳು ಘೋಷಣಾ ಫಲಕಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಯಾವುದೇ ಸಂಘಟನೆಗಳೊಂದಿಗೆ ಸಂಬಂಧ ಹೊಂದಿಲ್ಲದ ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹ ಭಾಗಿಯಾಗಿದ್ದರು.

ಎಲ್‌ಎಲ್‌ಬಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಮಮತಾ ಮೀನಾ ಮಾತನಾಡಿ, ರತನ್‌ಲಾಲ್‌ ಬಂಧನವು ಇದು ಸರ್ವಾಧಿಕಾರದಂತಿದೆ. ವಸ್ತುನಿಷ್ಠ ಅಥವಾ ಇತಿಹಾಸಕ್ಕೆ ಸಂಬಂಧಿಸಿದಂತೆ ನಿಜಾಂಶವನ್ನು ಏನಾದರೂ ಹೇಳಿದರೆ ಬಂಧಿಸಲಾಗುತ್ತದೆ. ದೆಹಲಿ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಪ್ರಾಧ್ಯಾಪಕರನ್ನು ಬಂಧಿಸುವುದು ದೊಡ್ಡ ವಿಷಯವಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರರಾದ ಕಾವಲ್ಪ್ರೀತ್ ಕೌರ್, ಧರ್ಮದ ಶೈಕ್ಷಣಿಕ ವಿಮರ್ಶೆಯು ಸಮಾಜದ ಅತ್ಯಗತ್ಯ ಅಂಶವಾಗಿದೆ. ಪ್ರೊಫೆಸರ್ ರತನ್ ಲಾಲ್ ಯಾವುದೇ ತಪ್ಪು ಬರೆದಿಲ್ಲ. ಅವರ ಬಂಧನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯೇ ಹೊರತು ಬೇರೇನೂ ಅಲ್ಲ. ವ್ಯಂಗ್ಯವನ್ನೂ ತಡೆದುಕೊಳ್ಳದ ಸಮಾಜವು ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದ್ದು, ಪ್ರಾಧ್ಯಾಪಕರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದಾರೆ.

ರತನ್‍ಲಾಲ್ ಬಂಧನವನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಖಂಡಿಸಿದ್ದು, ರತನ್‌ಲಾಲ್ ಅವರಿಗೆ ಅಭಿಪ್ರಾಯ ವ್ಯಕ್ತ ಪಡಿಸುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಾಂವಿಧಾನಿಕ ಹಕ್ಕಿದೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *