- ಸ್ವಯಂ ದೂರು ದಾಖಲಿಸಿಕೊಂಡು ಬೆಳಗ್ಗೆ ನಿವಾಸದಲ್ಲಿ ಸರ್ಚ್ ಮಾಡಿದ್ದ ಪೊಲೀಸರು
- ಸಿಸಿಬಿ ಕಚೇರಿಯಲ್ಲಿ ವಿಚಾರಣೆ – ನ್ಯಾಯಾಲಯಕ್ಕೆ ಹಾಜರು – ಸಿಸಿಬಿ ಕಸ್ಟಡಿಗೆ ನೀಡಿದ ಸಿಸಿಬಿ ಕೋರ್ಟ್
ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿರುವ ಪೊಲೀಸರು, ಅದರ ಮೂಲಕವೇ ನ್ಯಾಯಾಲಯದಿಂದ ವಾರೆಂಟ್ ಪಡೆದು ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದರು.
ದಾಳಿ ನಂತರ ರಾಗಿಣಿ ಅವರನ್ನು ವಶಕ್ಕೆ ಪಡೆದು ಕಚೇರಿಗೆ ಕರೆತಂದಿದ್ದರು. ಇದೀಗ ರಾಗಿಣಿ ಅವರನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾದ ಎರಡನೇ ಆರೋಪಿ ರಾಗಿಣಿ ಆಗಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಶಂಕರ್ ಮತ್ತು ರಾಹುಲ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಸಿಸಿಬಿ ಪೊಲೀಸರು ನಗರದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು. ಪಾರ್ಟಿಗಳಲ್ಲಿ ಡ್ರಗ್ ಬಳಕೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆರೋಪಿಗಳ ಮೊಬೈಲ್‌ನಿಂದ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಹಂತ-ಹಂತವಾಗಿ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.