- ಹೋಟೆಲ್ ‘ದಿ ಪಾರ್ಕ್ ‘ನಲ್ಲಿ ಡ್ರಗ್ಸ್ ಸೇವನೆ ಆರೋಪ
- ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು
ಬೆಂಗಳೂರು: ಡ್ರಗ್ಸ್ ಸೇವನೆ ಆರೋಪದಲ್ಲಿ ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಮಗ, ನಟಿ ಶ್ರದ್ದಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಸೇರಿ ಐದು ಮಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತದ ಸಮೀಪ ಇರುವ ಪ್ರತಿಷ್ಠಿತ ಹೋಟೆಲ್ ‘ದಿ ಪಾರ್ಕ್’ನಲ್ಲಿ ನೆನ್ನೆ(ಜೂನ್ 12) ದಾಳಿ ನಡೆಸಿದ ಹಲಸೂರು ಪೊಲೀಸರು ಡ್ರಗ್ಸ್ ಸೇವನೆ ಆರೋಪದ ಮೇಲೆ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸಿದ್ಧಾಂತ್ ಕಪೂರ್ ಅವರೊಂದಿಗೆ ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ ಸುರೇಶ್‌ರನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಟೆಕ್ಕಿಗಳಾಗಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲಸೂರು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಾರ್ಟಿಯಲ್ಲಿ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ಭಾಗಿಯಾಗಿದ್ದು, ಅವರೆಲ್ಲರೂ ಡ್ರಗ್ಸ್ ಸೇವಿಸಿರುವ ಶಂಕೆಯ ಮೇರೆಗೆ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ʻನಟ ಸಿದ್ದಾಂತ್ ಕಪೂರ್ ಸೇರಿ ಐವರ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ, 1985 (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಿದ್ಧಾರ್ಥ್ ಕಪೂರ್ 2020ರಲ್ಲಿ ಬಿಡುಗಡೆಯಾದ ಬಕುಲ ವೆಬ್ ಸೀರಿಸ್‌ನಲ್ಲಿ ಚಿಂಟು ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಶೂಟೌಟ್ ಅಟ್ ವಡಾಲಾ’, ‘ಅಗ್ಲಿ, ‘ಹಸೀನಾ ಪಾರ್ಕರ್’, ‘ಚೆಹ್ರೆ’ ಸೇರಿದಂತೆ 7 ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಭಾಗಂ ಭಾಗ್’, ‘ಚುಪ್ ಚುಪ್ ಕೆ’, ‘ಭೂಲ್ ಭುಲೈಯಾ’, ಮತ್ತು ‘ಧೋಲ್’ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲೆ ಬಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಹೆಚ್ಚಿದೆ ಎಂದು ಮಾತುಗಳು ಕೇಳಿಬಂದಿತ್ತು. ಈ ವೇಳೆ ಅನೇಕ ಚಿತ್ರರಂಗದ ಮಂದಿಯನ್ನು ಪ್ರಶ್ನೆ ಮಾಡಲಾಗಿತ್ತು, ಸಿದ್ಧಾರ್ಥ್ ಸಹೋದರಿ ಶ್ರದ್ಧಾ ಕಪೂರ್ ಅವರನ್ನು ಸಹ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಡಿಯಲ್ಲಿ ವಿಚಾರಣೆ ಮಾಡಿತ್ತು. ಆದರೆ ಯಾವುದೂ ಗಣನೀಯವಾಗಿ ಸಾಬೀತಾಗಿರಲಿಲ್ಲ.