ಬೆಂಗಳೂರು : ಉಪಯುಕ್ತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆ್ಯಪ್ ಡಂಝೋ ಹಾಗೂ ಸರಕು – ಗೃಹೋಪಯೋಗಿ ವಸ್ತುಗಳ ಸಾಗಾಣಿಕೆಯ ಪೋರ್ಟರ್ ಆ್ಯಪ್ ಸೇವೆಗಳ ಮೂಲಕ ಡ್ರಗ್ಸ್ ಗಳನ್ನು ಗ್ರಾಹಕರಿಗೆ ಕಳುಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಿಂಗ್‌ಪಿನ್‌ನ ಸೂಚನೆಯಂತೆ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೋರ್ಟರ್ ಮೂಲಕ ಡ್ರಗ್ಸ್ ಪೂರೈಸುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಫಯೀಸ್ (28), ನಾಗರಬಾವಿಯ ಕೆ.ಗೌತಮ್ ಬಂಧಿತರು. ಆರೋಪಿಗಳು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 71 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಹೈಡ್ರೋ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಫ್ಸ್ ಹಾಗೂ ಹಾಶಿಶ್ ಆಯಿಲ್ ಅನ್ನು ಜಪ್ತಿ ಮಾಡಲಾಗಿದೆ.
ಸಾಫ್ಟ್‌ವೇರ್ ಕಂಪನಿಯೊಂದರಲ್ಲಿಕೆಲಸ ಮಾಡುತ್ತಿದ್ದ ಗೌತಮ್, ಡ್ರಗ್ಸ್ ದಂಧೆಗಿಳಿದ ಬಳಿಕ ಉದ್ಯೋಗ ತೊರೆದಿದ್ದ. ಕಳೆದ ಒಂದೂವರೆ ವರ್ಷದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈತನನ್ನು ಜನವರಿಯಲ್ಲಿಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದ ಬಳಿಕ ಫಯೀಸ್ ಜತೆ ಸೇರಿ ದಂಧೆ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದರು.
ಡ್ರಗ್ಸ್ ಮಾರಾಟ ಮಾಡುವ ಸಲುವಾಗಿಯೇ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪ್ರಮುಖ ಆರೋಪಿ ಫಯೀಸ್, ಕುಮಾರಸ್ವಾಮಿ ಲೇಔಟ್‌ನ ಚಂದ್ರಾನಗರದಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಿದ್ದ ಎಂದು ಪೊಲೀಸರು ಹೇಳಿದರು.