ಬೆಂಗಳೂರು: ದೇವರ ಪ್ರಸಾದದ ಹೆಸರಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಬೆಂಗಳೂರು ಎನ್.ಸಿ.ಬಿ. ಅಧಿಕಾರಿಗಳು ಬಂಧಿಸಿದ್ದಾರೆ.
ವಾರದಲ್ಲಿ 3 ಕಡೆ ದಾಳಿ ನಡೆಸಿದ್ದ ಎನ್.ಸಿ.ಬಿ. ಅಧಿಕಾರಿಗಳು ಇದೀಗ ಮತ್ತೊಂದು ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಬಹ್ರೇನ್ ಮಾಜಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದೆ. ಬಂಧಿತರಿಂದ ಬರೋಬ್ಬರಿ 1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬ್ರಹ್ಮ ರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹಂ ಎಂದು ಕೇರಳ ಆಯುರ್ವೇದ ಔಷಧಿ ಹೆಸರಗಳನ್ನು ಬಳಸಿಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ ಬಂಧಿತರು ಪ್ರಸಾದದ ನೆಪದಲ್ಲಿ ಕೊರಿಯರ್ ನಲ್ಲಿ ಡ್ರಗ್ಸ್ ಸಾಗಾಣೆ ಮಾಡುತ್ತಿದ್ದರು. ಬೆಂಗಳೂರಿನಿಂದ ಬಹ್ರೇನ್, ಚೆನ್ನೈ ಹಾಗೂ ಕೇರಳದ ಎರ್ನಾಕುಲಂ ಗೆ ಡ್ರಗ್ಸ್ ಸಾಗಿಸುತ್ತಿದ್ದರು. ಆರೋಪಿಗಳಿಂದ 3.5 ಕೆಜಿ ಹ್ಯಾಶಿಷ್ ಜಫ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಹಡಗಿನಲ್ಲಿ ಡ್ರಗ್ಸ್ ಪಾರ್ಟಿ : ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ
ಇತ್ತೀಚಿಗೆ ವಿದೇಶಕ್ಕೆ ದೇವರ ಪ್ರಸಾದದ ಡಬ್ಬಿಯಲ್ಲಿ 3.5 ಕೆ.ಜಿ. ಹಶಿಶ್ ಅನ್ನು ತುಂಬಿ ಬಹ್ರೇನ್‌ಗೆ ಸಾಗಿಸಲು ಆರೋಪಿಗಳು ಯತ್ನಿಸಿದ್ದರು. ಆ ಬಗ್ಗೆ ಖಚಿತ ಮಾಹಿತಿ ಪಡೆದ ಎನ್‌ಸಿಬಿ ಅಧಿಕಾರಿಗಳು, ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸೆ.12ರಂದು ದೇವರ ಪ್ರಸಾದದಲ್ಲಿದ್ದ ಡ್ರಗ್ಸ್ ಪತ್ತೆ ಹಚ್ಚಿ ಒಬ್ಬಾತನನ್ನು ಸೆರೆ ಹಿಡಿದಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಈ ಜಾಲದ ಮಾಸ್ಟರ್ ಮೈಂಡ್ ಆಗಿದ್ದ ಬಹ್ರೇನ್ ದೇಶದ ಮಾಜಿ ಪೊಲೀಸ್ ಅಧಿಕಾರಿಯನ್ನು ಎನ್‌ಸಿಬಿ ಬಂಧಿಸಿದೆ.
ವಿಮಾನ ನಿಲ್ದಾಣದಲ್ಲಿ ತನ್ನ ಸಹಚರ ಸೆರೆಯಾದ ಬಳಿಕ ಬಂಧನ ಭೀತಿಯಿಂದ ಮಾಜಿ ಪೊಲೀಸ್ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ. ಆತನ ಇರುವಿಕೆಗೆ ಕುರಿತು ಖಚಿತ ಮಾಹಿತಿ ಪಡೆದು ಸೆರೆ ಹಿಡಿಯಲಾಗಿದೆ. ಅಲ್ಲದೆ ಕೇರಳದ ಎರ್ನಾಕುಲಂನಲ್ಲಿ 11.6 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ದಾಳಿಯಲ್ಲಿ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕೋರಿಯರ್ ಸೋಗಿನಲ್ಲಿ ಆಸ್ಪ್ರೇಲಿಯಾಕ್ಕೆ ಡ್ರಗ್ಸ್ ಸಾಗಿಸಲು ಯತ್ನಿಸಿದ ಮತ್ತಿಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.