ಚಿಕ್ಕಬಳ್ಳಾಪುರ: ಕಲುಷಿತ ನೀರಿನಿಂದ ಇಲ್ಲೊಂದು ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಗ್ರಾಮದ ಗಂಗಮ್ಮ (70), ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ (75) ಮೃತ ಪಟ್ಟವರು.
ವೀರಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೀರಾಪುರ ಗ್ರಾಮದ ವರಲಕ್ಷ್ಮಿ ಲಕ್ಷ್ಮೀದೇವಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ವತಿಯಿಂದ ಪೂರೈಸಿದ್ದ ನೀರು ಕಲುಷಿತ ಗೊಂಡಿದ್ದ ಕಾರಣ ಜನರಲ್ಲಿ ವಾಂತಿ ಕಾಣಿಸಿಕೊಂಡಿದೆ. ನೀರು ಸರಬರಾಜು ಮಾಡಿರುವ ಕೋಟಗಲ್ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಒಂದೇ ವಾರದಲ್ಲಿ ಗ್ರಾಮದಲ್ಲಿ ನಾಲ್ಕು ಸರಣಿ ಸಾವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ವಾಸನೆ ಬರುತ್ತಿವೆ. ಅದನ್ನೆಲ್ಲ ರಿಪೇರಿ ಮಾಡದ ಕಾರಣ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿದೆ. ಅದರಿಂದಾಗಿಯೇ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ಇದನ್ನೂ ಓದಿ : ಕಲುಷಿತ ನೀರು ಕುಡಿದು 3 ವಿದ್ಯಾರ್ಥಿಗಳು ಅಸ್ವಸ್ಥ| ಆಸ್ಪತ್ರೆಗೆ ದಾಖಲು!
ತುಮಕೂರು :ಕಲುಷಿತ ನೀರು ಸೇವಿಸಿ ಮೂರು ವರ್ಷದ ಬಾಲಕಿ ಸೇರಿದಂತೆ ಮೂವರು ಸಾವಿಗೀಡಾಗಿರುವ ದಾರುಣ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76), ಪೆದ್ದಣ್ಣ (74) ಹಾಗೂ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೀನಾಕ್ಷಿ (3) ಮೃತಪಟ್ಟಿದ್ದಾರೆ.
ವಾಂತಿ, ಬೇಧಿಯಿಂದ ಬಳಲುತ್ತಿದ್ದ ಮೀನಾಕ್ಷಿ ಆರೋಗ್ಯದಲ್ಲಿ ಬುಧವಾರ ಬೆಳಗ್ಗೆ ಏರುಪೇರಾಗಿತ್ತು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಆಕೆಯನ್ನು ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಮನೆಗೆ ಹೋದ ಬಳಿಕ ಮತ್ತೆ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಳು. ಚಿಕ್ಕದಾಸಪ್ಪ ಮತ್ತು ಪೆದ್ದಣ್ಣ ಜೂನ್ 10 ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಒಟ್ಟು 59 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ 10 ರಂದು ಗ್ರಾಮದಲ್ಲಿನ ಓವರ್‌ಹೆಡ್ ಟ್ಯಾಂಕ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದಿಂದ ಸರಬರಾಜು ಮಾಡಿದ ನೀರು ಕುಡಿದು ವಾಂತಿ, ಬೇಧಿಯಿಂದ ಗ್ರಾಮದ 98 ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 59 ಜನರು ಗುಣಮುಖರಾಗಿದ್ದರು. ಜೂನ್ 7ರಂದು ಚಿನ್ನೇನಹಳ್ಳಿಯಲ್ಲಿ ಜಾತ್ರೆ ನಡೆದಿದ್ದರಿಂದಾಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.