ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆ: ದ್ರೌಪದಿ ಮುರ್ಮು

ನವದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಇಂದು(ಜುಲೈ 25) ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಿದರು. ಸೆಂಟ್ರಲ್ ಹಾಲ್‌ ನಲ್ಲಿ ಬೆಳಿಗ್ಗೆ 10.15ಕ್ಕೆ ನಡೆದ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಎನ್.ವಿ.ರಮಣ ಅವರು ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ, ಲೋಕಸಭಾದ್ಯಕ್ಷ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಎಸ್ ಜೈಶಂಕರ್, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ದ್ರೌಪದಿ ಮುರ್ಮು ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ಇನ್ನಷ್ಟು ಶ್ರಮಿಸಬೇಕಿದೆ. ಈಗ 75 ವರ್ಷದ ಸಂಭ್ರಮದಲ್ಲಿ ನಾನು ರಾಷ್ಟ್ರಪತಿಯಾಗುತ್ತಿದ್ದೇನೆ. ಮಹಿಳಾ ಸಬಲೀಕರಣ ನನ್ನ ಮೊದಲ ಆದ್ಯತೆಯಾಗಿದೆ ಎಂದರು.

ಈ ದೇಶದಲ್ಲಿ ಹಲವು ದಶಕಗಳಿಂದ ಅಭಿವೃದ್ಧಿ ಕಾಣದ ಜನರು, ದಲಿತರು, ಹಿಂದುಳಿದವರು, ಗಿರಿಜನರು ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ. ನಾನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರ ಹಿಂದೆ ಬಡವರ ಆಶೀರ್ವಾದವಿದೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ. ರಾಷ್ಟ್ರಪತಿ ಹುದ್ದೆಯನ್ನು ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸು ಕಾಣುವುದು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಬಡವರು ಕನಸನ್ನು ಕಾಣುವ ಮೂಲಕ ನನಸನ್ನು ಮಾಡಿಕೊಳ್ಳಬಹುದು. ನನ್ನ ಹಳ್ಳಿಯಲ್ಲಿ ಕಾಲೇಜಿಗೆ ತೆರಳಿದ ಮೊದಲ ಮಹಿಳೆ ನಾನು. ಸಂವಿಧಾನದ ಮೇಲೆ ಪೂರ್ಣ ನಿಷ್ಠೆ ಇಟ್ಟು ಕೆಲಸ ಮಾಡುವೆ ಎಂದು ಪ್ರತಿಜ್ಞೆ ಮಾಡಿದರು.

ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್​ ಅವರಿಂದ ನಿಕಟಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರವರೆಗೆ ಹಲವರು ಈ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಾನೂ ಇದೇ ರೀತಿ ನಿರ್ವಹಿಸಲು ಇಚ್ಛಿಸುತ್ತೇನೆ. ಪೂಜ್ಯ ಬಾಪು ನಮಗೆ ಸ್ವರಾಜ್ಯ, ಸ್ವಚ್ಛತೆಯ ಮಾರ್ಗ ತೋರಿಸಿದ್ದರು. ನೇತಾಜಿ, ನೆಹರು, ಚಂದ್ರಶೇಖರ್ ಆಜಾದ್‌, ಭಗತ್​ಸಿಂಗ್ ಸೇರಿದಂತೆ ಹಲವು ಹೋರಾಟಗಾರರು ಭಾರತದ ಸ್ವಾಭಿಮಾನ ಹೆಚ್ಚಿಸಲು ಹೋರಾಡಿದರು. ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಸೇರಿದಂತೆ ಹಲವು ವೀರ ವನಿತೆಯರು ದೇಶಕ್ಕಾಗಿ ಹೋರಾಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನೆನಪಿಸಿಕೊಂಡರು.

ದ್ರೌಪದಿ ಮುರ್ಮು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದವರು. 20 ಜೂನ್ 1958 ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. 64 ವರ್ಷದ ದ್ರೌಪದಿ ಮುರ್ಮು ಭಾರತ ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಜನಿಸಿದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾಗುತ್ತಿರುವುದು ಇದೇ ಮೊದಲು.

ಸಮಾರಂಭಕ್ಕೂ ಮೊದಲು ರಾಜ್‌ಘಾಟ್‌ಗೆ ತೆರಳಿದ ದ್ರೌಪದಿ ಮುರ್ಮು, ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಪ್ರಮಾಣವಚನಕ್ಕೆ ಮುನ್ನ, ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ನೂತನ ರಾಷ್ಟ್ರಪತಿ ಮುರ್ಮು ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸಿದರು.

Donate Janashakthi Media

Leave a Reply

Your email address will not be published. Required fields are marked *