ಕೆ.ಷರೀಫಾ
ತುಂಬಿದ ಸಭೆಯಲ್ಲಿ ದ್ರೌಪದಿಯ
ಎಳೆತಂದು ಸೀರೆ ಸೆಳೆದರಂತೆ
ದುಶ್ಯಾಸನರ ಸಭೆಯಲ್ಲಿ ಅಪಮಾನ
ಸಹಿಸಲಾರದೇ ಅವಳು ಬಿಕ್ಕಿದಳಂತೆ
ಯಾರ ಸಹಾಯ ನಿರೀಕ್ಷಿಸುತ್ತಾಳೆ
ಅಲ್ಲಿ ಎಲ್ಲರೂ ಬಿಕರಿಯಾಗಿದ್ದಾರೆ.
ನಿನ್ನ ಸೀರೆ ಸೆಳೆದಾಗ ಸೆಟಗೊಳ್ಳಲಿಲ್ಲ
ಯಾರೂ ತಡೆಗೋಡೆಯಾಗಲಿಲ್ಲ
ನಿನಗೆ ನೀನೆ ರಕ್ಷಿಸಿಕೋ ದ್ರೌಪದಿ
ನೀನೇ ಎದ್ದು ನಿಲ್ಲಬೇಕಿದೆ ಕೊಡವಿ
ಧರ್ಮ ಶಾಸ್ತ್ರಗಳ ಲಜ್ಜೆಗಳ ಬಿಟ್ಟು
ಶಸ್ತ್ರಗಳ ಎತ್ತುವುದನು ಕಲಿತುಕೊ
ಹರಲಿಯನು ಹೆಗಲಿಗೇರಿಸಿಕೋ
ಯಾರ ಬರುವಿಗೆ ಕಾಯುತ್ತಿರುವೆ
ರಕ್ಷಣೆಗೀಗ ಕೃಷ್ಣನೂ ಬರಲಾರ.
ದುಶ್ಶಾಸನರ ದರ್ಭಾರಿನಲಿ
ಎಲ್ಲ ಕುರುಕ್ಷೇತ್ರದ ದಾಳಗಳು
ಇಲ್ಲಿ ಯಾರೂ ನಿನ್ನ ರಕ್ಷಿಸಲಾರರು.
ಪಗಡೆಯಾಟದಲಿ ಸೋಲು ಗೆಲವು
ರಕ್ತದ ಹರಿದಾಟ, ಹೆಣ್ಣ ದೇಹವಿಲ್ಲಿ
ಯುದ್ಧಭೂಮಿಯಾಗಿದೆಯಲ್ಲ
ದೇಹದ ತುಂಬ ಹೆಪ್ಪುಗಟ್ಟಿದೆ ರಕ್ತ.
ಬಿದ್ದ ರಕ್ತದ ಕಲೆಗಳ ಎಣಿಸಲಾಗದು
ಯುದ್ದ ನಡೆದಿದೆ ಗೆಲುವಿಗಾಗಿ
ಪಗಡೆಯಾಟದ ದಾಳಗಳು.
ಕತ್ತಿ ಹಿಡಿದು ಎದ್ದು ನಿಲ್ಲು ಬಾ.
ಲಜ್ಜಾಗೆಟ್ಟವರ ದರ್ಬಾರಿನಲ್ಲಿ
ಬೆತ್ತಲೇ ಮಾಡಿ ಬಕ್ಷಿಸುವವರೇ
ಸೀರೆ ನೀಡಿ ರಕ್ಷಿಸುವ ಕೃಷ್ಣರಿಲ್ಲಿಗೆ
ಬರಲಾರರು.
ಅವನೂ ಬಿಕರಿಯಾದಂತಿದೆ ದ್ರೌಪದಿ
ನಿನ್ನ ಮಾನ ನೀನೇ ರಕ್ಷಿಸಿಕೋ.
ಇದನ್ನೂ ಓದಿ: ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು
ದೇಶ ರಕ್ಷಿಪ ಪತಿಗಳೈವರು
ನಿನ್ನ ಮಾನ ಕಾಯದಾದರು
ಎಂತಹ ದೌರ್ಭಾಗ್ಯ ನಿನ್ನದು ನೋಡು
ರಾಷ್ಟ್ರದ ಮಾನ ಕಾಯ್ದ ಯೋಧನಿಗೆ
ಪತ್ನಿಯ ರಕ್ಷಿಸಲಾಗದ ಅಸಹಾಯಕತೆ
ಕಾರ್ಗಿಲ್ ಯುದ್ದ ಗೆದ್ದರೇನಂತೆ
ಗೆಲ್ಲಬೇಕಾಗಿರುವುದು ಕುರುಕ್ಷೇತ್ರದಲ್ಲಿ
ನಿನ್ನೂರ ಮಾನ ಲೂಟಿಯಾಯಿತು
ಯುದ್ದಭೂಮಿಯ ಶವಗಳೂ ಕಾಣ್ಮರೆ.
ಜಂಗಲ್ ರಾಜ್ಯದಲಿ ಕಾನೂನಿಲ್ಲ
ಮನುಷ್ಯತ್ವ ಬೆಳೆಯುವುದೆಂತು
ಬೀಜ ಮೊಳೆಯುವುದೆಂತು
ಮೃಗಗಳಿಂದ ನ್ಯಾಯ ನಿರೀಕ್ಷಿಸದಿರು
ನೀನೊಂದು ಯುಧ್ಧಭೂಮಿಯಲ್ಲ
ನಿನ್ನದೇ ದೇಹ ರಕ್ಷಿಸಿಕೊ
ಎದ್ದು ನಿಲ್ಲು ಬಾ ಗೆಳತಿ
ಕಾಂಗ್ ಫೋಕ್ರಿ ಲೂಟಿಯಾಗಿದೆ.
ಎದ್ದು ನಿಲ್ಲು ಬಾ.
ವಿಡಿಯೋ ನೋಡಿ: ಸೌಜನ್ಯ ಪ್ರಕರಣ : ಯಾವ ಬಾಯಿಂದ ಮುಗಿದ ಪ್ರಕರಣ ಅಂತ ಹೇಳ್ತೀರಿ? Janashakthi Media