ಬೆಂಗಳೂರು: ಸಾಹಿತಿ ರಂಗಾರೆಡ್ಡಿ ಕೋಡಿರಾಂಪುರ ಅವರು ಭಾನುವಾರ ಬೆಳಗ್ಗೆ ನಿಧರನಾರದರು. ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೋಡಿರಾಂಪುರ ಗ್ರಾಮದ ರಂಗಾರೆಡ್ಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಪದವಿ ಪಡೆದಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ರಂಗಾರೆಡ್ಡಿ, ನಿವೃತ್ತಿ ನಂತರ ಬೆಂಗಳೂರಿನಲ್ಲೇ ನೆಲೆಸಿದ್ದರು. ಹಲವು ಕಾರ್ಯಾಗಾರಗಳನ್ನು ಕೂಡ ನಡೆಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಕೋಡಿರಾಂಪುರ ಎಂದೇ ಹೆಸರಾಗಿದ್ದರು.
ಸಾಲ ಹೊಂಗೆಯ ತಂಪು, ಬಂಡಾಯ ಜನಪದ, ನನ್ನೂರ ಹಾಡು, ಜನಪದ ಸಂಸ್ಕೃತಿ ಸೇರಿದಂತೆ 17 ಕೃತಿಗಳನ್ನ ರಂಗಾರೆಡ್ಡಿ ರಚಿಸಿದ್ದಾರೆ. ಯಕ್ಷಗಾನ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಾನಪದ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದ್ದರು. 2015ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
ಕಿವಿ ಚಿಕಿತ್ಸೆ ಮಾಡಿಸಿಕೊಂಡಿದ್ದ ರಂಗಾರೆಡ್ಡಿ ಅವರಿಗೆ ಇಂದು ಬೆಳಗಿನಜಾವ ಸ್ಟ್ರೋಕ್ ಹೊಡೆದ ಪರಿಣಾಮ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಂಗಾರೆಡ್ಡಿ ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ.
ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮೈಲಿಗಲ್ಲು ವಿದುರಾಶ್ವತ್ಥ ಹತ್ಯಾಕಾಂಡ, ಕರ್ನಾಟಕದ ಜಲಿಯನ್ ವಾಲಾಬಾಗ್, ದಕ್ಷಿಣ ಭಾರತ ಜಲಿಯನ್ ವಾಲಾಬಾಗ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಡಾ. ರಂಗಾರೆಡ್ಡಿ ಕೋಡಿರಾಂಪೂರ ಈ ವಿಷಯದ ಕುರಿತು ಮಾತನಾಡಿದ್ದಾರೆ. ವಿಡಿಯೊ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.