ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಕಾಳೇಗೌಡ ಮತ್ತು ಅಪ್ಪಾಜಿಗೌಡ ಸೇರಿದಂತೆ ಒಟ್ಟು ಮೂವರ ವಿರುದ್ಧ ವಿವಿಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಕಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು ಪಾವತಿಸಿದ್ದ 70 ಲಕ್ಷ ರೂಪಾಯಿ ಶುಲ್ಕವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿಯು ಕಟ್ಟಿದ್ದ ಶುಲ್ಕವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡ ಕಿಮ್ಸ್ ಕಾಲೇಜಿನ ಮಾಜಿ ಅಧ್ಯಕ್ಷ ಕಾಳೇಗೌಡ, ಅಪ್ಪಾಜಿಗೌಡ ಸೇರಿದಂತೆ ಒಟ್ಟು ಮೂವರ ವಿರುದ್ಧ ಕಿಮ್ಸ್ ನ ಸಿಇಒ ಸಿದ್ದರಾಮಯ್ಯ ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ವಿವಿಪುರಂ ಪೊಲೀಸ್ರು ಸಿಇಒ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ: ಚಾಮರಾಜನಗರದ ಡಾ. ಮರಿ ಅನುಷಾ ದೀಪ್ತಿ ಎಂಬುವರು 2016 ಹಾಗೂ 2017ನೇ ಸಾಲಿನಲ್ಲಿ ಕಿಮ್ಸ್‌ನ ಒಬಿಜಿ (ಪ್ರಸೂತಿ ಮತ್ತು ಸ್ತ್ರೀರೋಗ) ಕೋರ್ಸ್ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದರು. ಆದರೆ, ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿರಲಿಲ್ಲ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿತ್ತು.’
‘ನೋಟಿಸ್ ಪಡೆದಿದ್ದ ವಿದ್ಯಾರ್ಥಿನಿ, 2018ರ ಅಕ್ಟೋಬರ್ 26ರಂದು ಬಾಕಿ ಶುಲ್ಕ ₹ 70 ಲಕ್ಷವನ್ನು ಚೇರ್ಮನ್ ಕಾಳೇಗೌಡ ಅವರಿಗೆ ನೀಡಿದ್ದರು. ಉಳಿದ ಆರೋಪಿಗಳ ಪರವಾಗಿ ಕಾಳೇಗೌಡ ಹಣ ಪಡೆದಿದ್ದರು. ನಂತರ, ವಿದ್ಯಾರ್ಥಿನಿಯ ಪ್ರವೇಶ ದಾಖಲಾತಿಯನ್ನು ಅಂಗೀಕರಿಸಿದ್ದರು. ಆದರೆ, ವಿದ್ಯಾರ್ಥಿನಿಯಿಂದ ಪಡೆದಿದ್ದ ₹ 70 ಲಕ್ಷವನ್ನು ಆರೋಪಿಗಳು, ಕಾಲೇಜಿಗೆ ಸಂದಾಯ ಮಾಡಿರಲಿಲ್ಲ. ಎಲ್ಲ ಹಣವನ್ನು ಆರೋಪಿಗಳು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು
ತಿಳಿಸಿವೆ.
‘ಕ್ರಿಮಿನಲ್ ಪಿತೂರಿ (ಐಪಿಸಿ 120 ಬಿ), ನಂಬಿಕೆ ದ್ರೋಹ (ಐಪಿಸಿ 406), ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿ, ಆರೋಪಿಗಳಿಗೆ ನೋಟಿಸ್ ನೀಡಲಾಗುವುದು. ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.