ದೇವೇಗೌಡರ ಅಳಿಯ ಜೆಡಿಎಸ್ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ, ಇನ್ನು ದಳದ ಕಾರ್ಯಕರ್ತರ ಕಥೆ ಏನು..? –  ಡಿ.ಕೆ. ಸುರೇಶ್

ಚನ್ನಪಟ್ಟಣ:“ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರೇ ಜೆಡಿಎಸ್ ಬಿಟ್ಟು ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ಮುಂದಿನ ತೀರ್ಮಾನ ಮಾಡಬೇಕು” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದರು.

ಚನ್ನಪಟ್ಟಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಗುರುವಾರ ಪ್ರತಿಕ್ರಿಯಿಸಿದರು. “ಡಾ. ಮಂಜುನಾಥ್ ಅವರು ರಾಜಕಾರಣಕ್ಕೆ ಬರುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಅವರು ದೇವೇಗೌಡರ ಕುಟುಂಬದವರು. ಇದು ನನ್ನ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಜಕಾರಣಕ್ಕೆ ಹೊಸತೇನಲ್ಲ. ಹೀಗಾಗಿ ನಿಮ್ಮ (ಮಾಧ್ಯಮಗಳ) ನೇತೃತ್ವದಲ್ಲಿ ಸ್ಪರ್ಧೆ ನಡೆಯಲಿದೆ” ಎಂದು ತಿಳಿಸಿದರು.

ಮಂಜುನಾಥ್ ಅವರು ಮೃದು ಸ್ವಭಾವದವರು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಯಾರು ಏನು ಚರ್ಚೆ ಮಾಡುತ್ತಿದ್ದಾರೆ ಎಂಬುದು ನನಗೆ ಮುಖ್ಯವಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪಕ್ಷ ಸರಿಯಿಲ್ಲ ಎಂದು ಅವರ ಅಳಿಯ ತೀರ್ಮಾನ ಮಾಡಿರುವುದರ ಬಗ್ಗೆ ಜನತಾದಳದ ಕಾರ್ಯಕರ್ತರು ಚಿಂತನೆ ಮಾಡಬೇಕು. ದೇವೇಗೌಡರ ಬುದ್ಧಿವಂತ ಅಳಿಯನವರೇ ಬೇರೆ ಪಕ್ಷ ಆಯ್ಕೆ ಮಾಡಿಕೊಂಡ ನಂತರ ಅವರ ಕಾರ್ಯಕರ್ತರು ಉಳಿದ ವಿಚಾರ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.

ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿದೆಯೇ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಇದೆಲ್ಲವನ್ನು ಈಗ ಅವರ ಅಳಿಯನವರೇ ಹೇಳುತ್ತಿದ್ದಾರೆ. ದೇವೇಗೌಡರ ಅಳಿಯನವರು ಚುನಾವಣೆ ಕಣದಲ್ಲಿದ್ದಾರೆ. ದೇವೇಗೌಡರ ಸಲಹೆ ಏನಿದೆಯೋ ಗೊತ್ತಿಲ್ಲ. ಆದರೆ ದೇವೇಗೌಡರು ಕಟ್ಟಿದ ಪಕ್ಷಕ್ಕೆ ಈಗ ಜನಪ್ರಿಯತೆ ಇಲ್ಲ ಎಂಬುದನ್ನು ಅವರ ಕುಟುಂಬದ ಹಿರಿಯ ಸದಸ್ಯರೇ ಸ್ಪಷ್ಟಪಡಿಸುತ್ತಿದ್ದಾರೆ” ಎಂದು ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರು ಏನು ಮಾಡಬೇಕು ಎಂದು ಕೇಳಿದಾಗ, “ಆ ಪಕ್ಷ ಇಲ್ಲವೆಂದು ದೇವೇಗೌಡರ ಅಳಿಯನವರೇ ನಿರ್ಧರಿಸಿರುವಾಗ ಉಳಿದ ವಿಚಾರವನ್ನು ನೀವೇ ಮುಂದುವರಿಸಬೇಕು” ಎಂದರು.

 

 

Donate Janashakthi Media

Leave a Reply

Your email address will not be published. Required fields are marked *