ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ. ಸರ್ಕಾರದ ದಯನೀಯ ಆಡಳಿತ ವೈಫಲ್ಯದ ಈ ವೇಳೆ ಈ ಸಂಭ್ರಮ ಯಾವ ಕಾರಣಕ್ಕೆಂದು ಸ್ವತಃ ಪಕ್ಷದ ಕಾರ್ಯಕರ್ತರಿಗೇ ಗೊತ್ತಿಲ್ಲ! ‘ಜಿಡಿಪಿಯ ಪ್ರಮಾಣವು ದಾಖಲೆ ಮಟ್ಟದಲ್ಲಿ ಕುಸಿತ ಕಂಡು, ದೇಶದ ಎಲ್ಲ ಉತ್ಪಾದಕ ವಲಯಗಳು ತತ್ತರಿಸಿ ಹೋದವು. ಇದರ ಪರಿಣಾಮ ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದಲೇ ಹೊರ ಬೀಳುವಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರವೇ ಇಂತಹ ಸಾಧನೆ ಸಾಧ್ಯ ಎಂದು ಕಾಣುತ್ತದೆ!’ ಎಂದು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಪಕ್ಷದ ರಾಜಕೀಯ ಏಳಿಗೆಗಾಗಿ ಬಳಸಿಕೊಳ್ಳುವ ಭರದಲ್ಲಿ ಜನ ಸಾಮಾನ್ಯರ ನಂಬಿಕೆಯನ್ನು ಹಾಳು ಮಾಡುತ್ತಿರುವ ಕೇಂದ್ರ ಸರಕಾರವು ಹೋರಾಟದ ಮೂಲಕ ಪಡೆದುಕೊಂಡ ಸ್ವತಂತ್ರ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಶನಿಯಂತೆ ಒಕ್ಕರಿಸಿದೆ!’ ಎಂದು ಲೇವಡಿ ಮಾಡಿದ್ದಾರೆ.
`ಅಧಿಕಾರವೆಂಬುದು ಕೇವಲ ಮುಂದಿನ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ನಂಬಿಕೊಂಡು ಇಲ್ಲದ ಹುಚ್ಚಾಟ ಮಾಡುತ್ತಾ ಜನರ ಬದುಕು ಮತ್ತು ಭವಿಷ್ಯವನ್ನು ನಾಶಮಾಡುತ್ತಿರುವ ಕೋಮುವಾದಿ ಬಿಜೆಪಿ ಸರಕಾರದ ಕೈಗೆ ಕೊಟ್ಟ ಅಧಿಕಾರವು ‘ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ’! ಎಂದು ಟೀಕಿಸಿದ್ದಾರೆ.
ಪ್ರಧಾನಿ @narendramodi ಯವರ ನೇತೃತ್ವದ ಕೇಂದ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 7 ವರ್ಷಗಳು ಪೂರೈಸಿದ ಸಂಭ್ರಮದಲ್ಲಿದೆ.
@BJP4India ಸರ್ಕಾರದ ದಯನೀಯ ಆಡಳಿತ ವೈಫಲ್ಯದ ಈ ವೇಳೆ ಈ ಸಂಭ್ರಮ ಯಾವ ಕಾರಣಕ್ಕೆಂದು ಸ್ವತಃ @BJP4Karnataka ಪಕ್ಷದ ಕಾರ್ಯಕರ್ತರಿಗೇ ಗೊತ್ತಿಲ್ಲ!
1/4
— Dr H.C.Mahadevappa (@CMahadevappa) May 30, 2021
ದುರಾದೃಷ್ಟವಶಾತ್ ಕೇಂದ್ರ ಸರ್ಕಾರವು ರಚನೆಯಾಗಿ ಇಂದಿಗೆ 7 ವರ್ಷವಾಗುತ್ತಿರುವ ವೇಳೆ ಈ ಹೊಣೆಗೇಡಿ ಸರ್ಕಾರದ ಸಾಧನೆಗಳ ಬಗ್ಗೆ ಇದೀಗ ಕೆಲ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ನನ್ನ ಪ್ರಕಾರ ಈ ದೂರದೃಷ್ಟಿ ಇಲ್ಲದ ಸರ್ಕಾರದ ಸಾಧನೆ ಮೂರಾಗಿದ್ದರೆ ಈ ಸರ್ಕಾರದಿಂದ ಜನ ಸಾಮಾನ್ಯರ ಬದುಕಿನ ಮೇಲೆ ಉಂಟಾಗಿರುವ ತೊಂದರೆ ಮುನ್ನೂರು ಎಂದರೂ ಸಹ ತಪ್ಪಾಗಲಾರದು. ಧರ್ಮದ ವಿಷದ ಮೂಲಕ ಅಭಿವೃದ್ಧಿಯನ್ನೇ ಮೂಲೆಗೆ ತಳ್ಳಿ ಕೇವಲ ಹುಸಿ ಪ್ರಚಾರದ ಮೂಲಕ ಜನರ ನಿರೀಕ್ಷೆಗಳನ್ನು ಹುಸಿ ಮಾಡಿದ ಕೇಂದ್ರ ಸರ್ಕಾರವು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿಕೆ ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಿರೋಧಿಯಾಗಿರುವ ಈ ಸರ್ಕಾರವು ಈವರೆಗೂ ಕೂಡಾ ಬಾಕಿಯಿರುವ 94,000 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೇ ದುರ್ಬಲ ವರ್ಗಗಳಿಗೆ ಸಿಗಬಹುದಾಗಿದ್ದ ಉದ್ಯೋಗಾವಕಾಶಗಳನ್ನು ವಂಚಿಸಿದೆ. ಇನ್ನು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದ್ವೇಷ ಸಾಧಿಸಲೆಂದೇ ಇವರು ಜಾರಿಗೊಳಿಸಲು ಹೊರಟಿದ್ದ CAA ಮತ್ತು NRC ಎಂಬ ಹೆಸರಿನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಅನಗತ್ಯ ಪ್ರಯತ್ನವನ್ನು ಸರ್ಕಾರ ಮಾಡಿತು ಎಂದು ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.