ಬೆಂಗಳೂರು: ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯಲು ಆರಂಭವಾಗುತ್ತದೆ. ಆದರೆ, ಮಳೆ, ಬಿಸಿಲು ಹಾಗೂ ಪ್ರದೇಶದ ಹವಾಮಾನ ಹೇಗೆ ಇದ್ದರೂ, 100 ವರ್ಷಗಳವರೆಗೆ ಶವಗಳನ್ನು ಕೆಡದಂತೆ ಇಡಬಹುದಾದ ನೂತನ ತಂತ್ರಜ್ಞಾನ ಆವಿಷ್ಕರಿಸಲಾಗಿದೆ. ಈ ಆವಿಷ್ಕಾರವನ್ನು ಮಾಡಿದ ಹೆಮ್ಮೆ ಕರ್ನಾಟಕದ್ದು ಎಂಬುದು ವಿಶೇಷ. ವಿಶ್ವದಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಪೈಕಿ ಇದು ಅತ್ಯಂತ ವಿಶಿಷ್ಟವಾಗಿದೆ.
ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರು ಆಕ್ಸ್ಫರ್ಡ್ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ದಿನೇಶ್ ರಾವ್ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು, ಇದರ ಪ್ರಯೋಗ ಯಶಸ್ವಿಯಾಗಿದೆ. ಆನೇಕಲ್ ತಾಲೂಕಿನ ಯಡವನಹಳ್ಳಿ ಸಮೀಪದ ಆಕ್ಸ್ರ್ಡ್ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ದಿನೇಶ್ ರಾವ್ ಪ್ರಯೋಗ ಯಶಸ್ವಿಯಾಗಿರುವ ಮಾಹಿತಿ ಹಂಚಿಕೊಂಡರು.
ಪ್ರಾಣಿಗಳ ಅವಶೇಷಗಳ ಮೇಲೆ ಪ್ರಯೋಗ: ಮುಂಬಾಲ್ಮಿಂಗ್ ಎಂಬ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು 2003ರಿಂದಲೂ ಪ್ರಯೋಗ ಮಾಡಲಾಗುತ್ತಿತ್ತು. ಪ್ರಾಣಿ, ಪಕ್ಷಿ, ಹಾವು, ಕಪ್ಪೆಗಳ ಕಳೇಬರಗಳ ಮೇಲೆ ಪ್ರಯೋಗ ಮಾಡಲಾಗುತ್ತಿತ್ತು. ಸಣ್ಣವನಿದ್ದಾಗ ನನಗೆ ಶವಗಳನ್ನು ಹೂಳುವುದು, ಸುಡುವುದನ್ನು ನೋಡುವಾಗ ನೋವಾಗುತ್ತಿತ್ತು. ಆದ್ದರಿಂದ, ಶವವನ್ನು ಕೆಡದಂತೆ ರಸುವ ಪ್ರಯೋಗ ಕೈಗೊಳ್ಳುವ ನಿರ್ಧಾರವನ್ನು ಅಂದೇ ಕೈಗೊಂಡಿದ್ದೆ. 2018ರಲ್ಲಿ ಮನುಷ್ಯನ ಮೇಲೆ ಪ್ರಯೋಗ ಮಾಡಿದಾಗ ಯಶಸ್ಸು ಲಭಿಸಿತ್ತು. 2019ರಲ್ಲಿ ನವಜಾತ ಶಿಶುವಿನ ಶವದ ಮೇಲೂ ಪ್ರಯೋಗ ಮಾಡಿದ್ದೆ. ಅದರ ಜತೆಗೆ ಸದ್ಯ ಮೂವರ ಶವಗಳನ್ನು ಆಕ್ಸ್ರ್ಡ್ ಕಾಲೇಜಿನಲ್ಲಿ ಸಂರಕ್ಷಿಸಿಡಲಾಗಿದೆ. ನೂರು ವರ್ಷವಾದರೂ ಶವಗಳು ಕೆಡುವುದಿಲ್ಲ. ಸತ್ತಾಗ ಹೇಗಿತ್ತೋ ಹಾಗೆಯೇ ಇರುತ್ತವೆ ಎಂದು ಡಾ. ದಿನೇಶ್ ರಾವ್ ವಿವರಿಸಿದರು.
18 ಬಗೆಯ ರಾಸಾಯನಿಕಗಳ ಬಳಕೆ: ಶವಗಳನ್ನು ಕೆಡದಂತೆ ಸಂರಸಲು 18 ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಶವದ ಮೇಲೆ ಈ ರಾಸಾಯನಿಕಗಳನ್ನು ಪ್ರಯೋಗಿಸಲಾಗುತ್ತದೆ. ಈ ವಿಧಾನವನ್ನು ಪೂರ್ಣಗೊಳಿಸಲು ಗರಿಷ್ಠ 1 ಗಂಟೆ 30 ನಿಮಿಷ ಬೇಕಾಗುತ್ತದೆ. ಸಾವು ಸಂಭವಿಸುತ್ತಲೇ ರಾಸಾಯನಿಕಗಳನ್ನು ಪ್ರಯೋಗಿಸಿದರೆ, ಉತ್ತಮ ಫಲಿತಾಂಶ ದೊರೆಯುತ್ತದೆ. ತಡವಾಗುವುದಾದರೆ, ಶವವನ್ನು ಕೋಲ್ಡ್ ಸ್ಟೋರೇಜ್ನಲ್ಲಿರಿಸಿ, ಬಳಿಕ ರಾಸಾಯನಿಕ ಗಳನ್ನು ಪ್ರಯೋಗಿಸಬಹುದಾಗಿದೆ. ಇದಕ್ಕೆ 60 ಸಾವಿರ ರೂ. ವೆಚ್ಚವಾಗುತ್ತದೆ ಎಂದು ಡಾ. ದಿನೇಶ್ ರಾವ್ ವಿವರಿಸಿದರು.
ಎಲ್ಲಿ ಬೇಕಾದರೂ ಇಡಬಹುದು: ನೂತನ ತಂತ್ರಜ್ಞಾನ ಬಳಸಿ ಸಂರಸಿದ ಶವವನ್ನು ಉದ್ಯಾನ, ವಾಸದ ಕೋಣೆಗಳು, ಟೆರೇಸ್ನಂಥ ಸಾಮಾನ್ಯ ಪರಿಸರದಲ್ಲೂ ಇರಿಸಬಹದಾಗಿದೆ. ಕಾರಿನಲ್ಲಿ ಸುಲಭವಾಗಿ ಅದನ್ನು ಸಾಗಿಸಬಹುದಾಗಿದೆ. ಕಾಪಿಟ್ಟಿರುವ ಶವದಿಂದ ಯಾವುದೇ ರೀತಿಯ ಸೋಂಕು ಆಗಲಿ, ವಿಷಕಾರಿ ಅಂಶವಾಗಲಿ ಹೊಮ್ಮುವುದಿಲ್ಲ. ಈ ಅಂಶದಿಂದಲೇ ಈ ತಂತ್ರಜ್ಞಾನ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ಶವಗಳು ಸಹಜವಾಗಿ ಕಾಣುವುದರಿಂದ, ಸತ್ತವರು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂಬ ಭಾವನೆ ಮೂಡುವುದರಿಂದ, ಅಗಲಿಕೆಯ ನೋವು ಕಾಡುವುದಿಲ್ಲ. ಆಪ್ತರ ಶವವನ್ನು ಸಂರಸಿಡಲು ಬಯಸಿದರೆ, ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕೆ ಯಾವುದೇ ಕಾನೂನು ತೊಡಕಿಲ್ಲ. ಆದರೆ, ಸತ್ತವರು ಯಾವ ಕಾರಣದಿಂದ ಸತ್ತಿದ್ದಾರೆ ಎಂಬ ಪ್ರಮಾಣಪತ್ರವನ್ನು ಪೊಲೀಸ್ ಇಲಾಖೆಯಿಂದ ಪಡೆಯಬೇಕು. ಕುಟುಂಬಸ್ಥರ ಸಮ್ಮತಿ ಇರಬೇಕು ಎಂದು ಡಾ. ದಿನೇಶ್ ರಾವ್ ಹೇಳಿದರು.