ಬೆಂಗಳೂರು: ಸಂಚಾರಿ ಪೊಲೀಸರ ಭ್ರಷ್ಟಾಚಾರ ತಡೆಗೆ ಬಾಡಿ ಓನ್ ಕ್ಯಾಮರಾ ನೀಡಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ಈಗಾಗಲೇ ಒಂದಷ್ಟು ಟ್ರಾಫಿಕ್ ಪೊಲೀಸರಿಗೆ ಬಾಡಿ ಓನ್ ಕ್ಯಾಮರಾ ನೀಡಲಾಗಿದ್ದರೂ, ಇನ್ನಷ್ಟು ಮಂದಿಗೆ ಬಾಡಿ ಓನ್ ಕ್ಯಾಮರಾ ಕೊಡಲಾಗುವುದು. ಸದ್ಯದಲ್ಲೇ ಶೇ. 50ರಷ್ಟು ಟ್ರಾಫಿಕ್ ಪೊಲೀಸರಿಗೆ ಬಾಡಿ ಓನ್ ಕ್ಯಾಮರಾ ಒದಗಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದ ಅವರು 20 ಕ್ಕೂ ಹೆಚ್ಚು ಸಾರ್ವಜನಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿಸಿದ್ದಾರೆ. ಪೊಲೀಸರು ಸಾರ್ವಜನಿಕರ ಜತೆ ಕಟುವಾಗಿ ವರ್ತಿಸಬಾರದು, ಹಾಗೂ ಸಾರ್ವಜನಿಕರು ಕೂಡಾ ಪೊಲೀಸರನ್ನು ಲಂಚಪಡೆಯುವವರು ಎಂಬಂತೆ ನೋಡಿಕೊಳ್ಳಬಾರದು. ತಪ್ಪು ಯಾರೇ ಮಾಡಿದ್ದರು. ಎಂತಹ ದೊಡ್ಡವರಿದ್ದರೂ, ಇಲ್ಲವೇ ಸ್ವತಃ ಪೊಲೀಸರೆ ತಪ್ಪು ಮಾಡಿದ್ದರು ಕಾನೂನು ಕ್ರಮ ಏನಿದೆಯೋ ಅದನ್ನು ಜಾರಿಮಾಡಬೇಕು ಎಂದಿದ್ದಾರೆ.
ಕಾನೂನು ಉಲ್ಲಂಘಿಸಿದವರೊಂದಿಗೆ ಸೌಜನ್ಯದಿಂದಲೇ ವರ್ತಿಸಿ ದಂಡ ವಿಧಿಸಬೇಕು. ಒಂದುವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಸೌಜನ್ಯದಿಂದ ವರ್ತಿಸುವ ಕುರಿತು ಪೊಲೀಸರಿಗೆ ಅದರಲ್ಲೂ ಹೊಸದಾಗಿ ನೇಮಕಗೊಂಡವರಿಗೆ ಸಾಫ್ಟ್ ಸ್ಕಿಲ್ಸ್ ಟ್ರೇನಿಂಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೊಲೀಸರು ಸುಖಾಸುಮ್ಮನೆ ತಡೆದು ಪರಿಶೀಲಿಸುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದ್ದಕ್ಕೆ, ಸಾಮಾನ್ಯವಾಗಿ ಪೊಲೀಸರು ಎರಡು ರೀತಿಯ ತಪಾಸಣೆ ಮಾಡುತ್ತಾರೆ ಎಂದರು ರವಿಕಾಂತೇಗೌಡ. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವಂಥ ಸಂಚಾರ ನಿಯಮ ಉಲ್ಲಂಘನೆ ಇರದಿದ್ದರೆ ತಡೆಯಬಾರದು. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹಾಗೂ ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತಡೆದು ತಪಾಸಣೆ ನಡೆಸಲಾಗುತ್ತದೆ ಎಂಬುದನ್ನೂ ತಿಳಿಸಿದರು.
ಪೊಲೀಸರ ಮೇಲೂ ಕ್ರಮ ಜರುಗಿಸಲಾಗಿದೆ : ಇಲ್ಲಿಯವರೆಗೆ ನಿಯಮ ಉಲ್ಲಂಘಿಸಿದ ಪೊಲೀಸರ ಮೇಲೂ ಕ್ರಮ ಜರುಗಿಸಿದ್ದೇವೆ. ರಾಜ್ಯದಲ್ಲಿ ನಿಯಮ ಉಲ್ಲಂಘನೆ ಮಾಡಿದ ಪೊಲೀಸ್ ಮತ್ತು ಸರಕಾರಿ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ 6800 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದು. ಅಂತಹ ವಾಹನಗಳನ್ನು ವಶಕ್ಕೆ ಪಡೆದು ದಂಡ ಕಟ್ಟಿದ ನಂತರ ವಾಪಸ್ ಕೊಡಲಾಗಿದೆ ಎಂದು ತಿಳಿಸಲಾಗಿದೆ.
ದಂಡ ಹಾಕುವುದು ನಮ್ಮ ಮುಖ್ಯ ಕೆಲಸ ಅಲ್ಲ. ಆದರೆ ನಿಯಮ ಉಲ್ಲಂಘನೆ ಮಾಡಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಜರುಗಿಸಬೇಕಿದೆ. ನಾವೆಲ್ಲರು ಈ ವ್ಯವಸ್ಥೆಯ ಭಾಗವಾಗಿದ್ದೇವೆ. ಲಂಚ ನೀಡುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಲಂಚ ಪಡೆಯುವವರು ಇದ್ದೇ ಇರುತ್ತಾರೆ. ಈ ಲಂಚದ ವಿರುದ್ಧ ಹೋರಾಡಬೇಕಿದೆ. ಇಂತಹ ದೂರುಗಳು ಬಂದರೆ ಖಂಡಿತಾ ನಮ್ಮನ್ನು ಸಂಪರ್ಕಿಸಿ, ಅಂತಹ ಪೊಲೀಸರು ಮೇಲೆ ಆ ಕ್ಷಣದಲ್ಲಿಯೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಯಾರೋ ಒಬ್ಬ ಪೊಲೀಸನ ತಪ್ಪನ್ನು ಎಲ್ಲರಿಗೂ ಹೋಲಿಸುವುದು ಸರಿಯಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಮನವಿ ಮಾಡಿದ್ದಾರೆ.