ಬೆಂಗಳೂರು : ಎಲ್ಲಾ ಭಾರತೀಯರು ಸಮಾನರು, ಸಮಾನ ಅವಕಾಶಗಳು ಇರಬೇಕು ಆದರೆ ಅವಕಾಶಗಳಿಂದ ವಂಚಿತರಾಗಿರುವವರಿಗೆ ಮೊದಲ ಆಧ್ಯತೆಯಾಗಿ ಹಕ್ಕುಗಳು ಸಿಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಚಿಂತಕ ಡಾ. ಬಿ.ಆರ್. ಮಂಜುನಾಥ್ ವಿವರಿಸಿದರು.
ಅಂಬೇಡ್ಕರ್ ಜಯಂತಿ ನಿಮಿತ್ತ ಜನಶಕ್ತಿ ಶಿಕ್ಷಣ ಟ್ರಸ್ಟ್, ಕ್ರಿಯಾ ಮಾಧ್ಯಮ ಜಂಟಿಯಾಗಿ ಏರ್ಪಡಿಸಿದ್ದ ‘ಅಂಬೇಡ್ಕರ್ ಚಿಂತನೆಗಳು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘1952ರ ಚುನಾವಣೆಗೆ ಎಐಎಸ್‌ಸಿಎಫ್ ಪ್ರಣಾಳಿಕೆ’ ಎಂಬ ವಿಷಯದ ಮೇಲೆ ಉಪನ್ಯಾಸ ಮಂಡಿಸಿದ ಅವರು, ಕೈಗಾರಿಕೆಗಳ ಉತ್ಪನ್ನಅಗತ್ಯವಿದೆ. ಕೈಗಾರೀಕರಣ ಇಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ನಿರುದ್ಯೋಗ ನಿವಾರಣೆಯಾಗಬೇಕಾದರೆ ಕೈಗಾರಿಕೆಗಳು ಬೇಕು. ಆದರೆ ಆ ಕೈಗಾರಿಕೆಗಳು ಖಾಸಗಿಯಾಗಿರದೆ ಸಾರ್ವಜನಿಕ ರಂಗವಾಗಿ ಇರಬೇಕು ಎಂದು ಅಂಬೇಡ್ಕರ್ ತಮ್ಮ ಕಣ್ಣೋಟವನ್ನು ಪ್ರಣಾಳಿಕೆಯ ಮೂಲಕ ವಿವರಿಸಿದ್ದರು ಎಂದರು.
ಇದನ್ನೂ ಓದಿ : ಮರಳಿ ಬರುತ್ತಿದೆ ಚಿಂತಕರ ಬೇಟೆಯಾಡುವ ಮೆಕ್ಕಾರ್ಥಿವಾದ
ಅಂಬೇಡ್ಕರ್ ಬಡತನ ನಿವಾರಣೆಗೆ ಸಾಕಷ್ಟು ಒತ್ತು ನೀಡಿದರು. ಕೃಷಿಯ ಬಗ್ಗೆ ಪ್ರಣಾಳಿಕೆಯ ಬಗ್ಗೆ ಪ್ರಸ್ಥಾಪ ಇದೆ. ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಸಣ್ಣ ಪುಟ್ಟ ಹಿಡುವಳಿಯಿಂದ ಸಾದ್ಯವಿಲ್ಲ. ಯಂತ್ರಗಳನ್ನು ತೊಡಗಿಸಿ ಅಭಿವೃದ್ದಿ ಮಾಡಬೇಕಾಗುತ್ತದೆ. ಹಾಗಾಗಿ ಸೋವಿಯತ್ ಒಕ್ಕೂಟದ ಮಾದರಿಯ ಬಗ್ಗೆ ಅವರು ಪ್ರಸ್ಥಾಪಿಸುತ್ತಾರೆ. ಸಹಕಾರಿ ಕೃಷಿ ಮತ್ತು ಸಾಮುದಾಯಿಕ ಕೃಷಿ ಬಗ್ಗೆ ಪ್ರಸ್ಥಾಪಿಸುತ್ತಾರೆ. ಇದಕ್ಕಾಗಿ ಸೊಸೈಟಿಗಳನ್ನು ಸ್ಥಾಪಿಸಬೇಕು. ರೈತರಿಗೆ ಅಗತ್ಯವಿರುವ ಸಹಾಯವನ್ನು ಸರ್ಕಾರ ಮಾಡಬೇಕು. ಮುಖ್ಯವಾಗಿ, ತೆರೆಗೆಗಳಿಂದ ವಿನಾಯ್ತಿ ಇರಬೇಕು. ವಿದ್ಯುತ್‌ಚ್ಛಕ್ತಿ ಒದಗಿಸಬೇಕು, ಯಾಂತ್ರಿಕರಣದ ಸಹಾಯ ಮಾಡಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
ಪಕ್ಷದ ಮೂಲ ತತ್ವಗಳು, ನೀತಿಗಳು, ಕಾರ್ಯಕ್ರಮಗಳ ಕುರಿತು, ಹಾಗೂ ಬೇರೆ ಪಕ್ಷಗಳ ಜೊತೆಗೆ ಸಂಬಂಧ ಹೇಗಿರಬೇಕು ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸಿದ್ದಾರೆ. ಸಮಾನತೆಯ ಜೊತೆ ಸ್ವಾತಂತ್ರ್ಯವೈ ಮುಖ್ಯ, ಸಮಾನತೆ ಇಲ್ಲದೆ ಸ್ವಾತಂತ್ರ್ಯ ಸಿಕ್ಕರೆ ಅದು ಉಳ್ಳವರ ಸ್ವಾತಂತ್ರ್ಯ ಆಗುತ್ತದೆ. ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಒಂದಕ್ಕೊಂದು ಸಂಬಂಧ ಇರಬೇಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದರು ಎಂದರು.
ಉಪನ್ಯಾಸಕ ಡಾ. ರವಿಕುಮಾರ್ ಬಾಗಿ ʻಹಿಂದೂ ಕೋಡ್ ಬಿಲ್ ಮತ್ತು ಅಂಬೇಡ್ಕರ್ʼ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ, “ಶಿಕ್ಷಣ, ಆಸ್ತಿಯ ಹಕ್ಕು ಮತ್ತು ಸಮಾನತೆಯ ಕಾನೂನುಗಳ ಫಲವನ್ನು ಅನುಭವಿಸುತ್ತಿರುವ ದೇಶದ ಎಲ್ಲ ಹೆಣ್ಣುಮಕ್ಕಳೂ ಬಿ.ಆರ್.ಅಂಬೇಡ್ಕರ್ ಅವರಿಗೆ ಋಣಿಯಾಗಿರಬೇಕು’ ಎಂದು ಅಭಿಪ್ರಾಯಟ್ಟರು.
ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳೇ ಅಲ್ಲ ಎಂಬ ಮನುವಿನ ಪ್ರತಿಪಾದನೆಗೇ ಜೋತುಬಿದ್ದಿದ್ದ ಮನುವಾದಿಗಳು, ಆಕೆಯನ್ನು ದಾಸಿಯಂತೆಯೇ ನೋಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕೊನೆ ಹಾಡಬೇಕು ಎಂಬ ಉದ್ದೇಶದಿಂದಲೇ ಅಂಬೇಡ್ಕರ್ ಅವರು ‘ಹಿಂದೂ ಸಂಹಿತೆ ಮಸೂದೆ’ಯನ್ನು ಮಂಡಿಸಿದರು. ಅಂಬೇಡ್ಕರರ ಈ ನಡೆ ಮನುವಾದಿಗಳನ್ನು ಕೆರಳಿಸಿತು. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ತರಲು ಹೊರಟ ಕಾನೂನಿನ ವಿರುದ್ಧ, ಮನುವಾದಿಗಳು ಹೆಣ್ಣುಮಕ್ಕಳನ್ನೇ ಎತ್ತಿಕಟ್ಟಿದರು. ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು.
1951ರಲ್ಲಿ ಸಂಸತ್ತಿನಲ್ಲಿ ಮಸೂದೆಗೆ ಅನುಮೋದನೆ ದೊರೆಯದೇ ಇದ್ದಾಗ, “ ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸುವ ಸರ್ಕಾರದಲ್ಲಿ ನಾನು ಸಚಿವನಾಗಿ ಮುಂದುವರೆಯಲಾರೆ ಎಂದು ಅಂಬೇಡ್ಕರ್ ರಾಜೀನಾಮೆ ನೀಡಿದರು ಎಂದರು.
ವಕೀಲರಾದ ಅಶ್ವಿನಿ ಒಬುಳೇಶ್ ‘ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು’ ಕುರಿತು ಮಾತನಾಡುತ್ತಾ, ಡಾ. ಅಂಬೇಡ್ಕರ್ ಕೂಡ ಕಾರ್ಮಿಕ ಪಡೆಯ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದರು. ಕಾರ್ಮಿಕರ ಸ್ಥಿತಿಯನ್ನು ಸುಧಾರಿಸುವಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದರು. ಅಸ್ತಿತ್ವದಲ್ಲಿರುವ ಹನ್ನೆರಡು ಗಂಟೆಗಳಿಂದ ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸದ ದಿನದ ಮಸೂದೆಯನ್ನು ಅಂಗೀಕರಿಸುವಂತೆ ಮಾಡಿದರು. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆಗಾಗಿ ಹೋರಾಡಿದರು. ಬಡ ಬಾಡಿಗೆದಾರರು, ರೈತರು ಮತ್ತು ಕಾರ್ಮಿಕರ ಅಗತ್ಯಗಳನ್ನು ಪೂರೈಸುವ ಮತ್ತು ಕುಂದುಕೊರತೆಗಳನ್ನು ಪರಿಹರಿಸುವ ಕಾರ್ಯಸೂಚಿಯೊಂದಿಗೆ ಅವರು 1936 ರಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸಹ ರಚಿಸಿದರು ಎಂದರು.
ವಾಸ್ತವವಾಗಿ ಭಾರತದಲ್ಲಿ ಮಹಿಳೆಯರ ಹಕ್ಕುಗಳ ಜೊತೆಗೆ ಕಾರ್ಮಿಕರ ಹಕ್ಕುಗಳಿಗೂ ಅಡಿಪಾಯ ಹಾಕಿದವರು ಡಾ. ಬಿ.ಆರ್. ಅಂಬೇಡ್ಕರ್. ಇಂದು ದೇಶದ ಮಹಿಳೆಯರು ರಾಜಕೀಯ, ಶಿಕ್ಷಣ, ವ್ಯವಹಾರ, ಅಧಿಕಾರಶಾಹಿ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ, ಇದು ಡಾ. ಅಂಬೇಡ್ಕರ್ ಅವರ ಅವಿರತ ಪ್ರಯತ್ನಗಳ ಫಲವಾಗಿದೆ ಎಂದರು.
ಈ ವೇಳೆ ದಲಿತ ನಾಯಕ ಮಾವಳ್ಳಿ ಶಂಕರ್, ಜನಶಿಕ್ಷಣ ಟ್ರಸ್ಟ್‌ನ ಎನ್.ಕೆ ವಸಂತರಾಜ್, ಕ್ರಿಯಾ ಮಾಧ್ಯಮದ ಕೆ.ಎಸ್.ವಿಮಲಾ, ವಿಮಾ ನೌಕರರ ಸಂಘಟನೆಯ ಹಿರಿಯ ನಾಯಕ ಟಿ.ಸುರೇಂದ್ರರಾವ್ ಉಪಸ್ಥಿತರಿದ್ದರು. ಸಂಗಮೇಶ್ ಸಿವಣಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಇದನ್ನೂ ನೋಡಿ : ಅಂಬೇಡ್ಕರ್ ಜನ್ಮ ದಿನದ ಅಂಗವಾಗಿ ಅಂಬೇಡ್ಕರ್ ಚಿಂತನ ಕಾರ್ಯಕ್ರಮ