ಮಂಗಳೂರು : ಬಿಜೆಪಿ ಮುಖಂಡರಿಗೆ ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡತೊಡಗಿದೆ. ಕರ್ನಾಟಕದಲ್ಲಿ ಅವರು ಧೂಳಿಪಟ ಆಗಲಿದ್ದಾರೆ ಎಂದು ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪಂಚರಾಜ್ಯ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿ ಬಳಕೆ ಆಗುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಯಾವ ರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದರು.
ಯಾವ ರೀತಿ ಕರ್ನಾಟಕವನ್ನ ಎಟಿಎಂಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡರು ಎಂಬುದನ್ನು ಜನ ನೋಡಿದ್ದಾರೆ. ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಸುಳ್ಳಿನ ಆರೋಪ ಮಾಡುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದರು.
ಐಟಿ, ಸಿಬಿಐ ಎಲ್ಲ ಸಂಸ್ಥೆಗಳು ಅವರ ಕೈಯಲ್ಲೇ ಇದೆ. ಐಟಿ, ಸಿಬಿಐ ಅವರ ನಿರ್ದೇಶನದಂತೆ ನಡೆಯುತ್ತಿದ್ದಾರೆ. ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಾವು ನೋಡಿಲ್ಲ. ಐಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ.
ಸಿಬಿಐಗೆ ಐಟಿ ಅವರೇ ಪ್ರಕರಣವನ್ನು ನೀಡಬೇಕು ಎಂದರು. ದಾಳಿ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ನವರಲ್ಲ. ಯಾರೇ ತಪ್ಪುಮಾಡಿದರೂ ಅವರ ವಿರುದ್ಧ ಕ್ರಮ ಆಗಲಿ. ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.