ನವದೆಹಲಿ: ಹಿಜಾಬ್ ಕುರಿತಂತೆ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯ ತುರ್ತು ವಿಚಾರಣೆ ನಿರಾಕರಿಸಿದೆ. ಸೂಕ್ತ ಸಂದರ್ಭದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.
ಸಾಂವಿಧಾನಿಕ ಹಕ್ಕುಗಳು ಎಲ್ಲರಿಗೂ ಇವೆ. ಅದನ್ನು ಸುಪ್ರೀಂ ಕೋರ್ಟ್ ರಕ್ಷಿಸಲಿದೆ ಎಂದು ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಈ ಸಂಗತಿಗಳನ್ನು ನೀವು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಡಿ. ವಿವಾದವನ್ನು ಹಾಗೂ ಕರ್ನಾಟಕ ಹೈಕೋರ್ಟ್ ಮುಂದೆ ಇರುವ ವಿಚಾರಣೆಯನ್ನು ಗಮನಿಸುತ್ತಿರುವುದಾಗಿ ಹೇಳಿದರು.
ಹಿರಿಯ ವಕೀಲ ದೇವದತ್ ಕಾಮತ್ ಅವರು ಪ್ರಕರಣದ ಕುರಿತಾಗಿ ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಇಂದಿನ ಕಲಾಪದ ಆರಂಭದ ವೇಳೆ ಉಲ್ಲೇಖಿಸಿದರು. ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಅದೇಶವು ಉಂಟು ಮಾಡುವ ಪರಿಣಾಮದ ಬಗ್ಗೆ ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತಗಳನ್ನು ಪ್ರತಿನಿಧಿಸುವ ವಸ್ತ್ರಗಳನ್ನು ಧರಿಸದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವು ಮುಸ್ಲಿಮರಿಗೆ ಮಾತ್ರವೇ ಅಲ್ಲದೆ ಎಲ್ಲ ಧರ್ಮದ ವ್ಯಕ್ತಿಗಳಿಗೂ ಅನ್ವಯಿಸುತ್ತದೆ ಎಂದರು.
ರಾಜ್ಯವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್‌ನ ಆದೇಶ ಇನ್ನೂ ನ್ಯಾಯಾಲಯದ ಅಂತರ್ಜಾಲ ತಾಣದಲ್ಲಿ ಅಪ್‌ಲೋಡ್ ಅಗಿಲ್ಲ ಎಂದರು.
“ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶವು ಮುಸ್ಲಿಮ್ ಮತ್ತು ಮುಸ್ಲಿಮೇತರ ವಿದ್ಯಾರ್ಥಿನಿಯರ ನಡುವೆ ಭೇದಭಾವ ಸೃಷ್ಟಿಸಲಿದ್ದು, ಸಂವಿಧಾನದ ಮೂಲರಚನೆಯಾದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ” ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.
“ಹಿಜಾಬ್ ಧರಿಸುವುದು ಸಂವಿಧಾನದ 19(1)(ಎ) ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 25ನೇ ವಿಧಿಯಡಿ ಖಾಸಗಿ ಹಕ್ಕು ಮತ್ತು ಆತ್ಮಸಾಕ್ಷಿ ಸ್ವಾತಂತ್ರ್ಯದ ವ್ಯಾಪ್ತಿಗೆ ಒಳಪಡಲಿದೆ. ಸೂಕ್ತ ಕಾನೂನಿನ ಬೆಂಬಲವಿಲ್ಲದೆ ಈ ಹಕ್ಕುಗಳನ್ನು ಅತಿಕ್ರಮಿಸಲಾಗದು” ಎಂದು ಆಕ್ಷೇಪಿಸಲಾಗಿದೆ.