ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಯ ಕುರಿತು ಆಗಾಗ್ಗೆ ವಿಮರ್ಶಿಸುತ್ತಿದ್ದ ಮೇಘಾಲಯ ರಾಜ್ಯಪಾಲ ಪ್ರಸಕ್ತ ರೈತರ ಗೋಜಿಗೆ ಹೋಗದಂತೆ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದ ಜೋದಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಸತ್ಯಪಾಲ್ ಮಲಿಕ್ ರೈತರು ದೇಶದಲ್ಲೇ ಅಪಾಯಕಾರಿಯಾಗಿದ್ದು, ತಮ್ಮ ಹಕ್ಕುಗಳನ್ನು ಮಾತುಕತೆಯ ಅಥವಾ ಹೋರಾಟದ ಮೂಲಕ ಪಡೆಯುವಷ್ಟು ಶಕ್ತರಾಗಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಹಿಂಸಾತ್ಮಕ ಮಾರ್ಗವನ್ನೂ ಅನುಸರಿಸಲು ಹಿಂದೆ ಸರಿಯುವುದಿಲ್ಲ ಎಂದು ಸೂಚನೆ ನೀಡಿದರು.
ರೈತರಿಗೆ ಮೂಗುದಾರ ಹಾಕಲಾಗುವುದಿಲ್ಲ. ಅವರ ಬೇಡಿಕೆಗಳು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ. ರೈತರ ವಿರೋಧ ಕಟ್ಟಿಕೊಳ್ಳಬೇಡಿ. ಸಿಖ್ಖರು ಮತ್ತು ಜಾಟ್‌ಗಳು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
ರೈತರ ಬಗ್ಗೆ ಮಾತಾನಾಡಿರುವುದರಿಂದ ದೆಹಲಿಯಿಂದ ಯಾವಾಗ ಬೇಕಾದರೂ ಕರೆ ಬರುವ ಅವಕಾಶವಿದೆ. ರೈತರ ಸಮಸ್ಯೆಯನ್ನು ಎತ್ತುವುದಕ್ಕೆ ನನ್ನ ಹುದ್ದೆಯನ್ನು ಕಳೆದುಕೊಳ್ಳುವ ಭಯವಿಲ್ಲ. ಕೇಂದ್ರದೊಂದಿಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ರೈತರಿಗಾಗಿ ನನ್ನ ಹುದ್ದೆಯನ್ನು ಬಿಡುತ್ತೇನೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.
ಈ ಹಿಂದೆ ಕೇಂದ್ರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಆಯೋಜಿಸಿದ ಪ್ರತಿಭಟನೆಯ ಎದುರು ಶರಣಾಗಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸಿತ್ತು.
ಕಳೆದ ಡಿಸೆಂಬರ್‌ನಲ್ಲಿ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಸತ್ಯಪಾಲ್ ಮಲಿಕ್ ಮೋದಿ ಸರ್ಕಾರಕ್ಕೆ ಸೂಚಿಸಿದ್ದರು. ರೈತರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ತಮಗೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸುತ್ತಾರೆ ಎಂದು ಸತ್ಯಪಾಲ್ ಮಲಿಕ್ ಎಚ್ಚರಿಸಿದ್ದಾರೆ.