ಬೆಂಗಳೂರು/ ಮಂಡ್ಯ : ಮಂಡ್ಯ, ಮೈಸೂರು ಭಾಗದ ರೈತರ ಜೀವನಾಡಿಯಾದ ಮೈಷುಗರ್ ಸಕ್ಕರೆ ಕಾರ್ಖಾನೆಯ ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ರಾಜ್ಯ ಸರಕಾರ ಕೊವಿಡ್ ನಡುವೆಯೇ ಖಾಸಗಿ ಟೆಂಡರ್ ಕರೆಯಲು ಆದೇಶ ಹೊರಡಿಸಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಬುಧವಾರ ಟೆಂಡರ್ ಪ್ರಕ್ರಿಯೆ ಆರಂಭಿಸಲು ಆದೇಶ ಹೊರಡಿಸಿದ್ದು, ಸರಕಾರಿ ಸ್ವಾಮ್ಯದಲ್ಲಿದ್ದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಷುಗರ್ ಅನ್ನು 40 ವರ್ಷಗಳವರೆಗೆ ಗುತ್ತಿಗೆ ನೀಡಲಿದೆ. ಕೆಲವು ವರ್ಷಗಳಿಂದ ಮುಚ್ಚಿದ್ದ ಕಾರ್ಖಾನೆಯನ್ನ ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಒತ್ತಾಯ ಕೇಳಿಬಂದಿತ್ತು. ಹಲವು ಸುತ್ತಿನ ಮಾತುಕತೆಯಲ್ಲಿ ಖಾಸಗಿಗೆ ವಹಿಸದಂತೆ ರೈತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ರೈತರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿದ್ದ ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈಗ ಏಕಾಏಕಿ ಕಾರ್ಖಾನೆ ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಗೋಲ್ಡನ್ ಹಟ್ ಡಾಬಾ ತಲುಪುವ ಮಾರ್ಗವನ್ನು ಬಂದ್ ಮಾಡಿದ ಸರಕಾರ: ಇದು ಅಘೋಷಿತ ತುರ್ತುಪರಿಸ್ಥಿತಿಯೇ?
ರೈತರ ಪ್ರತಿಭಟನೆ : ಮೈಷುಗರ್ ಕಾರ್ಖಾನೆ ಗುತ್ತಿಗೆ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ, ಸರ್ಕಾರಿ ಸ್ವಾಮ್ಯದಲ್ಲಿ ಕಬ್ಬು ನುರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಮೈಷುಗರ್ ಕಾರ್ಖಾನೆಯನ್ನು 40 ವರ್ಷಗಳಿಗೆ ಗುತ್ತಿಗೆ ನೀಡುವ ಸಂಬಂಧ ವಿಧಾನ ಪರಿಷತ್‌ನಲ್ಲಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಕ್ಕರೆ ಸಚಿವರು ಪುನರ್ ಪರಿಶೀಲಿಸಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದಾರೆ. ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಆರಂಭಿಸಲು ಹಣವನ್ನು ಬಜೆಟ್‌ನಲ್ಲಿ ಅಧಿವೇಶನದಲ್ಲಿ ಅಂಗೀಕಾರ ಮಾಡಲಾಗಿದೆ. ಆದರೆ ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಲುವಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡಲು ಹವಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುನಂದಾ ಜಯರಾಂ, ಎಂ.ಬಿ.ಶ್ರೀನಿವಾಸ್, ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಇಂಡುವಾಳು ಚಂದ್ರಶೇಖರ್, ಸುಧೀರ್‌ಕುಮಾರ್, ಬೋರಲಿಂಗೇಗೌಡ, ದೇವಿ, ಎಂ.ಪುಟ್ಟಮಾದು, ಕಿರಂಗೂರು ಪಾಪು, ಕೃಷ್ಣ ಪ್ರಕಾಶ್, ಜನಾರ್ದನ್, ಸುಶೀಲಾ, ಬೊಮ್ಮೇಗೌಡ ಸೇರಿದಂತೆ ಹಲವರು ಇದ್ದರು.