ಬೆಂಗಳೂರು : ರಾಜ್ಯದಲ್ಲಿ 2025-26 ನೇ ಸಾಲಿನ ಖಾಸಗಿ ಶಾಲೆಗಳ ಪ್ರವೇಶವನ್ನು ಪ್ರಾರಂಭಿಸಿ ದಾಖಲಾತಿ ಪ್ರಾರಂಭ ಮಾಡಿದ್ದು, ಮನಸೋ ಇಚ್ಛೆ ಶುಲ್ಕ ಪಡೆಯುತ್ತಿವೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಆರೋಪಿಸಿದೆ. ಖಾಸಗಿ
ಈ ಕುರಿತು ರಾಜ್ಯ ಕಾರ್ಯದರ್ಶಿ ವಿಜಯ್ ಪತ್ರಿಕಾ ಹೇಳಿಕೆ ನೀಡಿದ್ದು, ಬಹುತೇಕ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮನಬಂದಂತೆ ವಸೂಲಿ ಮಾಡಲು ಮುಂದಾಗಿವೆ.ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಆಯುಕ್ತರು, ಅಪರ ಆಯುಕ್ತರು, ವಿವಿಧ ಜಿಲ್ಲೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರ ತಮಗೆ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:-“ ಒಕ್ಕೂಟ ತತ್ವ ಭಾರತದ ಶಕ್ತಿ” – ಮಹಾಧಿವೇಶನದ ಸಂದರ್ಭದಲ್ಲಿ ವಿಶೇಷ ವಿಚಾರ ಸಂಕಿರಣ
2025-26ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಸಮವಸ್ತ್ರ ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್, ಭೋದನಾ ಶುಲ್ಕ, ಬುಕ್, ನೋಟ್ಸ್ ಹೀಗೆ ಸೇರಿದಂತೆ ವಿವಿಧ ಶುಲ್ಕವನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ. ಸರ್ಕಾರದ 1983 ಶಿಕ್ಷಣ ಕಾಯ್ದೆಯನ್ನು ಉಲ್ಲಂಘನೆ ಮಾಡಿ ರಾಜ್ಯದ ಬಹುತೇಕ ಶಾಲೆಗಳಲ್ಲಿ ಬಟ್ಟೆ, ಶೂ ಸಾಕ್ಸ್, ನೋಟ್ ಬುಕ್ ಗಳನ್ನು ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ ಹಾಗೂ ಶಿಕ್ಷಣ ಇಲಾಖೆಯ 1983 ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದಾರೆ.
1983ರ ಶಿಕ್ಷಣ ಕಾಯಿದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳು ಪ್ರವೇಶಾತಿಗೆ ಖಾಲಿ ಇರುವ ಸೀಟುಗಳನ್ನು ತಮ್ಮ ಶಾಲೆಯ ಸೂಚನಾ ಫಲಕದಲ್ಲಿ ಹಾಕಬೇಕು, ಮತ್ತು ರೋಸ್ಟರ್ ನಿಯಮ ಜಾರಿ ಮಾಡಿ, ಶುಲ್ಕವನ್ನು ನಿಗದಿಗೊಳಿಸಿ ಶಾಲೆಯ ಮುಂಭಾಗದಲ್ಲಿ ಹಾಕಬೇಕೆಂದು ನಿಯಮ ಇದ್ದರು ರಾಜ್ಯದಲ್ಲಿ ಯಾವ ಶಾಲೆಗಳು ಸಹ ಈ ನಿಯಮವನ್ನು ಅನುಸರಿಸುತ್ತಿಲ್ಲ. ಖಾಸಗಿ ಶಾಲೆಯ ಆಡಳಿತ ಮಂಡಳಿಯ ಜೊತೆ ಇಲಾಖೆಯ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಪೋಷಕರಲ್ಲಿ ಮೂಡುತ್ತದೆ.ಖಾಸಗಿ ಶಾಲೆಗಳಿಗೆ ಸರಿಯಾದ ನಿಯಂತ್ರಣ ಇಲ್ಲದೆ ಪೋಷಕರಿಂದ ಲಕ್ಷ ಲಕ್ಷ ವಸೂಲಿ ಮಾಡುತ್ತಿವೆ. RTE ಅಡಿಯಲ್ಲಿ ಹಿಂದುಳಿದ ಮತ್ತು ದುರ್ಬಲ ಮಕ್ಕಳಿಗೆ 25% ನಿಗದಿ ಮಾಡಿದ್ದರು ಸಹ ಖಾಸಗಿ ಶಾಲೆಗಳು ಸರಿಯಾಗಿ ಅನುಸರಿಸುತಿಲ್ಲ. ಮತ್ತು ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿನಿ ಯ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚಿಸಿ ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.