ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಇಂದಿನಿಂದಲೇ (ಜುಲೈ 06) ಜಾರಿಗೆ ಬರುವಂತೆ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿದ್ದು, 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ಪ್ರಕಟಿಸಿವೆ.
ದೆಹಲಿಯಲ್ಲಿ 14.2 ಕೆ.ಜಿ ತೂಕದ ಸಿಲಿಂಡರ್ ದರ ರೂ. 1,053ರಷ್ಟು ಆಗಿದೆ. ಬೆಂಗಳೂರಿನಲ್ಲಿ 14.2 ಕೆ.ಜಿ ತೂಕದ ಸಿಲಿಂಡರ್ ದರ ರೂ.1,005.50 ರಿಂದ ರೂ.1055.50 ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ.1,053ಕ್ಕೆ ತಲುಪಿದೆ.
ಇದೇ ವೇಳೆ 5ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡಾ ಪರಿಷ್ಕರಿಸಲಾಗಿದ್ದು, 18 ರೂಪಾಯಿ ಏರಿಕೆ ಕಂಡಿದೆ. 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ದರ ರೂ.8.50 ಪ್ರತಿ ಸಿಲಿಂಡರ್ ನಂತೆ ಇಳಿಕೆಯಾಗಿದೆ.
2022ರ ಮೇ ತಿಂಗಳಿನಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಮೇ 7ರಂದು ರೂ. 50 ರೂ. ಹಾಗೂ ಮೇ 19 ರಂದು ರೂ. 3.50 ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ರೂ. 50 ಹೆಚ್ಚಳ ಮಾಡಿರುವುದರಿಂದ ಜನಸಾಮಾನ್ಯರಗೆ ಮತ್ತಷ್ಟು ಬೆಲೆ ಏರಿಕೆ ಹೊರೆ ಬಿದ್ದಿದೆ.
ಆರು ತಿಂಗಳಲ್ಲಿ ರೂ. 153ರಷ್ಟು ಏರಿಕೆ
ಕೇಂದ್ರ ಸರ್ಕಾರ ಕೆಲವು ತಿಂಗಳುಗಳ ಕಾಲ ಅಡುಗೆ ಅನಿಲ ದರವನ್ನು ಸತತವಾಗಿ ಏರಿಕೆ ಮಾಡುತ್ತಲೇ ಇದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ಅನಿಲ ದರವನ್ನು ಹೆಚ್ಚಿಸುತ್ತಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 2022ನೇ ಜನವರಿ 1ರಿಂದ ಇಲ್ಲಿಯವರೆಗೆ ಒಟ್ಟು 153ರೂ. ಏರಿಕೆ ಮಾಡಿದೆ.