ಹಾವೇರಿ: 6 ವರ್ಷಗಳಿಂದ ಜಿಲ್ಲಾ ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಕನಕ’ ಎಂಬ ಹೆಸರಿನ ಶ್ವಾನ, ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಮಾರ್ಚ್ 2, ಭಾನುವಾರದಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದೆ. ಇದರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಹಾವೇರಿಯಲ್ಲಿ ನೆರವೇರಿಸಲಾಯಿತು. ಹಾವೇರಿ
2019ರ ಜನವರಿ 28ರಂದು ಜನಿಸಿದ್ದ ‘ಲ್ಯಾಬ್ರಡರ್ ರಿಟ್ರಿವರ್’ ಶ್ವಾನಕ್ಕೆ ಬೆಂಗಳೂರಿನಲ್ಲಿ 6 ತಿಂಗಳು ತರಬೇತಿ ನೀಡಲಾಗಿತ್ತು. ನಂತರ, ಹಾವೇರಿ ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳಕ್ಕೆ ಸೇರಿದ್ದ ಶ್ವಾನ, ಬಾಂಬ್ ಪತ್ತೆ ಮಾಡುವಲ್ಲಿ ಚಾಕಚಕ್ಯತೆ ಹೊಂದಿತ್ತು.
ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿ ಅಧಿವೇಶನ, ವೈಮಾನಿಕ ಪ್ರದರ್ಶನ, ವಿಧಾನಸಭೆ-ಲೋಕಸಭೆ ಚುನಾವಣೆ, ಪ್ರಧಾನಮಂತ್ರಿ-ಮುಖ್ಯಮಂತ್ರಿ ಕಾರ್ಯಕ್ರಮಗಳ ಭದ್ರತೆಯಲ್ಲೂ ಕನಕ ಶ್ವಾನ ಸೇವೆ ಸಲ್ಲಿಸಿತ್ತು.
ಇದನ್ನೂ ಓದಿ: ಲಖನೌ| ವಿಧಾನ ಸೌಧದಲ್ಲಿ ಪಾನ್ ಮಸಾಲ ಜಗಿದು ಉಗಿದ ಶಾಸಕ
ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವದಲ್ಲಿ ಭದ್ರತೆ ಕರ್ತವ್ಯಕ್ಕಾಗಿ ಫೆ. 27ರಂದು ಶ್ವಾನವನ್ನು ಕರೆದೊಯ್ಯಲಾಗಿತ್ತು. ಮಲ ವಿಸರ್ಜನೆಗೆಂದು ಮಾ. 2ರಂದು ಬೆಳಿಗ್ಗೆ ಕಮಲಾಪುರ-ಪಿ.ಕೆ. ಹಳ್ಳಿ ರಸ್ತೆಯಲ್ಲಿ ಶ್ವಾನ ವಾಯುವಿಹಾರ ಮಾಡುತ್ತಿತ್ತು. ಇದೇ ಸಂದರ್ಭದಲ್ಲಿ ಸಿಂಧನೂರು ಡಿಪೊಗೆ ಸೇರಿದ್ದ ಕೆಎಸ್‌ಆರ್‌ಟಿಸಿ ಬಸ್, ಶ್ವಾನಕ್ಕೆ ಡಿಕ್ಕಿ ಹೊಡೆದಿತ್ತು. ಬಸ್ಸಿನ ಚಕ್ರ ಶ್ವಾನದ ಮೇಲೆಯೇ ಹರಿದುಹೋಗಿತ್ತು. ತೀವ್ರ ಗಾಯಗೊಂಡಿದ್ದ ಶ್ವಾನವನ್ನು ಹೊಸಪೇಟೆಯ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಅಸುನೀಗಿದೆ.
ಶ್ವಾನದ ಅಂತ್ಯಕ್ರಿಯೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಶ್ವಾನವನ್ನು ನೆನೆದು ಮರುಕಪಟ್ಟರು. ಶ್ವಾನದ ಕೇರ್ ಟೇಕರ್ ಆಗಿದ್ದ ಕಾನ್‌ಸ್ಟೆಬಲ್‌ಗಳಾದ ಶ್ರೀಕಾಂತ್ ಹಾಗೂ ಶಿವರಾಜ್, ಶ್ವಾನವನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತರು.
ಕೊಲೆ ಪ್ರಕರಣ ಭೇದಿಸಿದ್ದ ಶ್ವಾನ
‘ಹಲಗೇರಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ಮಹಿಳೆಯೊಬ್ಬರ ಕೊಲೆ ನಡೆದಿತ್ತು. ಕೃತ್ಯ ಎಸಗಿದ್ದ ಆರೋಪಿ, ಮಹಿಳೆಯ ಮನೆ ಬಳಿಯೇ ಓಡಾಡುತ್ತಿದ್ದರೂ ಸುಳಿವು ಸಿಕ್ಕಿರಲಿಲ್ಲ. ಸ್ಥಳಕ್ಕೆ ಹೋಗಿದ್ದ ಕನಕ ಶ್ವಾನ, ವಾಸನೆ ಹಿಡಿದು ಆರೋಪಿ ಮನೆ ಬಾಗಿಲಿಗೆ ಹೋಗಿತ್ತು. ಇದೊಂದೇ ಸುಳಿವು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ, ಆರೋಪಿ ಸಿಕ್ಕಿಬಿದ್ದ’ ಎಂದು ಹೇಳಿದ ಪೊಲೀಸ್ ಅಧಿಕಾರಿ, ಶ್ವಾನದ ಕೆಲಸವನ್ನು ಹೊಗಳಿದರು.
‘ಶ್ವಾನದ ಸಾವಿಗೆ ಕೇರ್ ಟೇಕರ್ ಅವರ ನಿರ್ಲಕ್ಷ್ಯ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅವರಿಗೆ ನೋಟಿಸ್ ನೀಡಿ, ಇಲಾಖೆ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದರು.
‘ನಾಲ್ಕು ಶ್ವಾನಗಳ ಪೈಕಿ ಎರಡು ಶ್ವಾನ ಸೇವೆ’
‘ಹಾವೇರಿ ಜಿಲ್ಲೆಯಲ್ಲಿ ಅಪರಾಧ ಕೃತ್ಯ ಭೇದಿಸಲು ಎರಡು ಹಾಗೂ ಬಾಂಬ್ ನಿಷ್ಕ್ರಿಯ ದಳದ ಕೆಲಸಕ್ಕೆ ಎರಡು ಶ್ವಾನಗಳ ಸೇವೆ ಪಡೆಯಲು ಅವಕಾಶವಿದೆ. ಅಪರಾಧ ಕೃತ್ಯ ಭೇದಿಸಲು ಎರಡು ಶ್ವಾನಗಳಿವೆ. ಬಾಂಬ್ ನಿಷ್ಕ್ರಿಯ ದಳಕ್ಕೆ ಒಂದೇ ಶ್ವಾನವಿತ್ತು. ಇನ್ನೊಂದು ಶ್ವಾನವನ್ನು ಇಲಾಖೆಯಿಂದ ತರಬೇಕಿತ್ತು. ಅಷ್ಟರಲ್ಲೇ ಈ ಅವಘಡ ಸಂಭವಿಸಿದ್ದು ಎರಡು ಶ್ವಾನಗಳು ಮಾತ್ರ ಉಳಿದಿವೆ’ ಎಂದು ಹೆಚ್ಚುವರಿ ಪೊಲೀಸ್ ಎಸ್ಪಿ ಎಲ್.ವೈ. ಶಿರಕೋಳ ತಿಳಿಸಿದರು.
‘ಬಾಂಬ್ ನಿಷ್ಕ್ರಿಯ ದಳದ ಶ್ವಾನಕ್ಕೆ 6 ತಿಂಗಳ ತರಬೇತಿ ಇರುತ್ತದೆ. ಎಲ್ಲ ತರಬೇತಿ ಪಡೆದಿದ್ದ ಕನಕ ಶ್ವಾನ 6 ವರ್ಷಗಳ ಸೇವೆ ಮುಗಿಸಿತ್ತು. 4 ವರ್ಷ ಸೇವೆ ಬಾಕಿ ಇತ್ತು’ ಎಂದರು.
‘ಕನಕ ಶ್ವಾನದ ಸ್ಥಾನ ತುಂಬಲು ಮತ್ತೊಂದು ಶ್ವಾನ ತರಬೇಕು. ಇಲಾಖೆಯಿಂದ 6 ತಿಂಗಳ ಮರಿ ಕೊಡುತ್ತಾರೆ. ಅದಕ್ಕೆ 6 ತಿಂಗಳ ತರಬೇತಿ ನೀಡಬೇಕು. ಇನ್ನೊಂದು ವರ್ಷದ ನಂತರವೇ ಜಿಲ್ಲೆಯ ಬಾಂಬ್ ನಿಷ್ಕ್ರಿಯ ದಳಕ್ಕೆ ಶ್ವಾನ ಸಿಗಲಿದೆ’ ಎಂದು ಹೇಳಿದರು.
ಇದನ್ನೂ ನೋಡಿ: ಅಹೋರಾತ್ರಿ ಹೋರಾಟಕ್ಕೆ ಚಾಲನೆ | ಶ್ರಮಿಕರ ಸಮಸ್ಯೆಗಳಿಗೆ ಪರಿಹಾರ ನೀಡಿ – ಮೀನಾಕ್ಷಿ ಸುಂದರಂ