ನಳಿನ್ ಕುಮಾರ್ ಕಟೀಲ್‌ಗೆ ಮಾನ ಮರ್ಯಾದೆ ಇದೆಯೆ?: ಸೌಜನ್ಯ ಪರ ಹೋರಾಟದಲ್ಲಿ ಮಾಜಿ ಶಾಸಕ ವಸಂತ ಬಂಗೇರ

 ‘ಎಂದೂ ಓದದ ವಿದ್ಯಾರ್ಥಿ ಅಮವಾಸ್ಯೆ ದಿನ ಓದಿದ’ ಎಂಬ ಗಾದೆ ಮಾತಿನಂತೆ ಬಿಜೆಪಿ ನಾಯಕರು ಭಾನುವಾರ ಬೀಗ ಹಾಕಿದ್ದ ತಹಶಿಲ್ದಾರ್ ಕಚೇರಿ ಮುಂದೆ ಬಂದು ಪ್ರತಿಭಟನೆ ಮಾಡಿದ್ದಾರೆ ಎಂದು ವ್ಯಂಗ್ಯ ಸೌಜನ್ಯ

ಬೆಳ್ತಂಗಡಿ: ಮೋದಿಯನ್ನು ಕಂಡರೆ ಹೆದರಿ ಓಡಿ ಹೋಗುವವರು ನನಗೆ ರಕ್ಷಣೆ ನೀಡುವ ಬಗ್ಗೆ ಹೇಳುತ್ತಿದ್ದಾರೆ, ಮೋದಿ ರಾಜ್ಯಕ್ಕೆ ಬಂದಾಗ ಮೂರು ಬಾರಿ ಸಂಸದರಾದ, ಬಿಜೆಪಿ ರಾಜ್ಯಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಪೊಲೀಸರು ಹಾಕಿದ ಬ್ಯಾರಿಕೇಡ್‌ನಲ್ಲಿ ನೇತಾಡುತ್ತಿದ್ದಾರೆ. ಇವರಿಗೆಲ್ಲಾ ಮಾನ ಮರ್ಯಾದೆ ಇದಿಯಾ? ಎಂದು ದಕ್ಷಿಣ ಕನ್ನಡ ಜನಪರ ಸಂಘಟನೆಗಳ ಒಕ್ಕೂಟದ ಗೌರವ ಸಂಚಾಲಕರು ಹಾಗೂ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ವಸಂತ ಬಂಗೇರ ಸೋಮವಾರ ಹೇಳಿದ್ದಾರೆ. ಅವರು ಕುಮಾರಿ ಸೌಜನ್ಯ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒತ್ತಾಯಿಸಿ ಹಾಗೂ ಉಜಿರೆ ಮತ್ತು ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅಸಹಜ ಸಾವುಗಳ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ‘ಚಲೋ ಬೆಳ್ತಂಗಡಿ’ ಮಹಾ ಧರಣಿಯಲ್ಲಿ ಮಾತನಾಡುತ್ತಿದ್ದರು.

ಸೌಜನ್ಯ ಹೋರಾಟದ ಪ್ಲೇ ಕಾರ್ಡ್ಸ್ ಹಿಡಿಯುವ ಮೂಲಕ ಧರಣಿಗೆ ಚಾಲನೆ ನೀಡಿದ ವಸಂತ ಬಂಗೇರ, “ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲದ ಕಾರಣ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದ್ದೆ. ಒತ್ತಾಯಕ್ಕೆ ಮಣಿದ ಅವರು ಕೂಡಾ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಹೀಗಾಗಿ ಪ್ರಕರಣ ಸಿಬಿಐಗೆ ಹೋಯಿತು. ಆರು ತಿಂಗಳು ಪ್ರಕರಣವು ಒಳ್ಳೆಯ ಅಧಿಕಾರಿಯ ಮೂಲಕ ಚೆನ್ನಾಗಿಯೆ ತನಿಖೆ ನಡೆಯಿತು. ಆದರೆ ಕೇಂದ್ರದಲ್ಲಿ ಮನಮೋಹನ್ ಅವರ ಕಾಂಗ್ರೆಸ್ ಸರ್ಕಾರ ಬಿದ್ದು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂತು. ಅಧಿಕಾರಕ್ಕೆ ಬಂದ ಕೂಡಲೇ ನಿಷ್ಠಾವಂತ ಅಧಿಕಾರಿಯ ಬದಲಾವಣೆ ಆಯಿತು. ಈ ಅಧಿಕಾರಿಯ ಬದಲಾವಣೆ ಯಾಕಾಯಿತು? ಈ ಬದಲಾವಣೆಯ ಉದ್ದೇಶವೇನು? ಇದು ಯಾಕಾಯ್ತು? ಎಲ್ಲವೂ ಪ್ರಶ್ನಾರ್ಥಕ. ಅಲ್ಲಿಂದ ಪ್ರಕರಣವು ಹಳ್ಳಹಿಡಿಯಲು ಪ್ರಾರಂಭವಾಯಿತು” ಎಂದು ಆರೋಪಿಸಿದರು.

ಇದನ್ನೂ ಓದಿ: ‘ನಮ್ಮಲ್ಲಿ ಅಸಹಜ ಸಾವಿನ ಪಟ್ಟಿಯಿದೆ’ | ಸೌಜನ್ಯ ಪರವಾಗಿ ‘ಚಲೋ ಬೆಳ್ತಂಗಡಿ’ ಮಹಾ ಧರಣಿ

“11 ವರ್ಷಗಳ ಕಾಲ ತನಿಖೆ ನಡೆಸಿ ಸಂತೋಷ್ ರಾವ್ ಅವರನ್ನು ಬಿಡುಗಡೆಗೊಳಿಸಿದರು. ಬಂಧನದ ದಿನದಿಂದಲೂ ಸಂತೋಷ್ ರಾವ್ ಆರೋಪಿಯಲ್ಲ ಎಂದು ನಾವು ಹೇಳುತ್ತಲೆ ಬಂದಿದ್ದೇವೆ. ಆದರೆ ನಮ್ಮ ಮಾತನ್ನು ಕೇಳುವವರು ಇರಲಿಲ್ಲ. ಈಗ ಸಂತೋಷ್ ರಾವ್ ಆರೋಪಿಯಲ್ಲ ಎಂದು ತೀರ್ಪು ಬಂದಿದೆ, ಹಾಗಾದರೆ ಆರೋಪಿ ಯಾರು? ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಯಾವ ತೀರ್ಮಾನ ತೆಗೆದುಕೊಂಡರು? ಪ್ರಕರಣ ಹಳ್ಳ ಹಿಡಿಯಲು ಕಾರಣಕರ್ತರು ಯಾರು? 11 ವರ್ಷಗಳ ನಂತರವೂ ಸೌಜನ್ಯಳಿಗೆ ನ್ಯಾಯ ಸಿಗದಂತಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

“ಬೀಗ ಹಾಕಿದ್ದ ತಹಶಿಲ್ದಾರ್ ಕಚೇರಿ ಎದುರುಗಡೆ ಇಲ್ಲೊಂದು ಹೋರಾಟ ನಿನ್ನೆ ನಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಬಿಜೆಪಿ ಶಾಕಸರು, ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಂದಿದ್ದರು. ಎಲ್ಲರೂ ಭಾಷಣ ಬಿಗಿದಿದ್ದಾರೆ. ಆದರೆ ನನ್ನ ಪ್ರಶ್ನೆ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಅವರೆ, ಪ್ರಕರಣ ನಡೆದು 11  ವರ್ಷಗಳಾಯಿತು. ಆದರೆ ಇಷ್ಟು ದಿನ ನೀವು ಎಲ್ಲಿ ಹೋಗಿದ್ದಿರಿ? ನೀವು ಅತ್ತೆ ಮನೆಗೆ ಹೋಗುತ್ತಿದ್ದಿದ್ದಾ ಅಥವಾ ಪಾರ್ಲಿಮೆಂಟ್‌ಗೆ ಹೋಗುತ್ತಿದ್ದಿದ್ದಾ? ಪ್ರಕರಣದ ಬಗ್ಗೆ ಚರ್ಚೆ ಮಾಡಲು ಪ್ರಧಾನಿ ಮೋದಿ ಅಥವಾ ಸ್ಪೀಕರ್‌ ಅವಕಾಶ ನೀಡಿರಲಿಲ್ಲವೆ? ಅಷ್ಟಕ್ಕೂ ಮಾತನಾಡಲು ನೀವು ಅವಕಾಶ ಕೇಳಿದ್ದೀರಾ? ಒಂದು ವೇಳೆ ನೀವು ಅವಕಾಶ ಕೇಳಿದ್ದರೆ ನಿಮಗೆ ಅವಕಾಶ ಸಿಗುತ್ತಿತ್ತು. ಆದರೆ ‘ಎಂದೂ ಓದದ ವಿದ್ಯಾರ್ಥಿ ಅಮವಾಸ್ಯೆ ದಿನ ಓದಿದ’ ಎಂಬ ಗಾದೆ ಮಾತಿನಂತೆ ನೀವು ಭಾನುವಾರ ಬೀಗ ಹಾಕಿದ್ದ ತಹಶಿಲ್ದಾರ್ ಕಚೇರಿ ಮುಂದೆ ಬಂದು ಪ್ರತಿಭಟನೆ ಮಾಡಿದ್ದೀರಿ. ಇಷ್ಟಕ್ಕೆ ನೀವು ಲಾಯಕ್ಕು” ಎಂದು ವಸಂತ ಬಂಗೇರ ವ್ಯಂಗ್ಯವಾಡಿದರು.

“ಎಲ್ಲಾ ಬಿಜೆಪಿ ಶಾಸಕರು ಇಲ್ಲಿ ಬಂದು ಭಾರಿ ಮಾತನಾಡಿ ಹೋಗಿದ್ದಾರೆ. ಕೇಂದ್ರದ ಸರ್ಕಾರ ಅವರದ್ದೆ ಸರ್ಕಾರ, ಸಿಬಿಐ ಅವರದೇ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಸಂಸ್ಥೆ. ಅವರು ಮನಸ್ಸು ಮಾಡಿದ್ದರೆ ಸರ್ಕಾರಕ್ಕೆ ಒತ್ತಾಯ ಮಾಡಿ ತನಿಖೆ ಚುರುಕು ಮಾಡಿಸಿ ಸೌಜನ್ಯ ಅವರಿಗೆ ನ್ಯಾಯ ಕೊಡಿಸಬಹುದಿತ್ತು. ಬಿಜೆಪಿ ಶಾಸಕರಾಗಿರುವ ಸುನಿಲ್ ಕುಮಾರ್ ಹಿಂದೆ ಸಚಿವರಾಗಿ ಕೆಲಸ ಮಾಡಿದ್ದರು. ಆಗೆಲ್ಲಾ ಏನು ಮಾಡಿದ್ದೀರಿ ಸುನಿಲ್ ಕುಮಾರ್ ಅವರೆ? ಸೊಪ್ಪು ಕಡಿಯಲು ಹೋಗಿದ್ದಿರಿ, ಸದನದಲ್ಲಿ ಸೌಜನ್ಯ ಪರವಾಗಿ ಮಾತನಾಡಿದ್ದೀರಾ?” ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯ ಬಿಜೆಪಿಯ ಸೌಜನ್ಯ ನ್ಯಾಯದ ಹೋರಾಟದ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲಿ

“ನಮ್ಮಲ್ಲೂ ಹರೀಶ್ ಪೂಂಜಾ ಎಂಬ ಒಬ್ಬ ಶಾಸಕರಿದ್ದಾರೆ. ಇದೀಗ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಅವರು ಕಳೆದ 5 ವರ್ಷದಲ್ಲಿ ಸೌಜನ್ಯ ಪರವಾಗಿ ಒಂದೇ ಒಂದು ಮಾತೆತ್ತಿಲ್ಲ. ಆದರೆ ನಿನ್ನೆ ಬಂದು ಇಲ್ಲಿ ಬೊಗಳಿದ್ದಾರೆ. ಕಳೆದ 5 ವರ್ಷಗಳಲ್ಲಿ ಸದನದಲ್ಲಿ ಸೌಜನ್ಯ ಪರವಾಗಿ ಮಾತನಾಡ ನೀವು ಏನು ಮಾಡುತ್ತಿದ್ದಿರಿ? 40% ಕೊಳ್ಳೆ ಹೊಡೆಯಲು ಹೋಗಿದ್ದೀರಾ? ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯರಾಗಿ 4 ವರ್ಷಗಳಾಗಿವೆ, ಪರಿಷತ್‌ನಲ್ಲಿ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಲು ಆಗಿಲ್ಲ. ಆದರೆ ನಿನ್ನೆ ಬಂದು ಇಲ್ಲಿ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.

“ಬಿಜೆಪಿ ಶಾಸಕರು ಮತ್ತು ಸಂಸದ ನಳಿನ್ ಕುಮಾರ್ ನನಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಮೋದಿ ಬಳಿ ಹೋಗಿ ಮಾತಾಡಲು ಶಕ್ತಿ – ಧೈರ್ಯ ಇಲ್ಲ. ಮೊದಿಯನ್ನು ಕಂಡರೆ ಹೆದರಿ ಓಡಿ ಹೋಗುವವರು ನನಗೆ ರಕ್ಷಣೆ ನೀಡುವ ಬಗ್ಗೆ ಹೇಳುತ್ತಾರೆ. ಮೋದಿ ರಾಜ್ಯಕ್ಕೆ ಬಂದಾಗ ಮೂರು ಬಾರಿ ಸಂಸದರಾದ, ಬಿಜೆಪಿ ರಾಜ್ಯಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಪೊಲೀಸರು ಹಾಕಿದ ಬ್ಯಾರಿಕೇಡ್‌ನಲ್ಲಿ ನೇತಾಡುತ್ತಿದ್ದಾರೆ. ಇವರಿಗೆಲ್ಲಾ ಮಾನ ಮರ್ಯಾದೆ ಇದಿಯಾ? ನೀವು ಮತದಾನದಲ್ಲಿ ಗೆದ್ದಿಲ್ಲವೆ? ನೀವೇನು ಸಾಮಾನ್ಯ ಕಾರ್ಯಕರ್ತನೆ? ಪ್ರಧಾನಿಯ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲವೆ? ನಿಮಗೆ ಧೈರ್ಯ ಇಲ್ಲವೆಂದರೆ ನಿಮ್ಮನ್ನು ನಾನು ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿಮ್ಮ ಬಾಯಿಗೆ ಹಾಕಿರುವ ಬೀಗ ತೆಗೆಯುವಂತೆ ಹೇಳಿ ನಿಮ್ಮನ್ನು ಮಾತಾಡುವಂತೆ ಮಾಡುತ್ತೇನೆ” ಎಂದು ವಸಂತ ಬಂಗೇರ ಹೇಳಿದರು.

“ಸಂಸದ ನಳಿನ್ ಕುಮಾರ್ ಅವರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿಗೆ ನರೇಂದ್ರ ಮೋದಿಯ ಮೇಲೆ ನಂಬಿಕೆ ಇಲ್ಲವೆಂದು ತೋರುತ್ತಿದೆ. ಆದ್ದರಿಂದಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನ್ಯಾಯ ನೀಡಿ ಎಂದು ಬೇಡುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯೆ? ಹೆಬ್ರಿಯ ಸುಚಿತ್ರ ಶೆಟ್ಟಿಯ ಹತ್ಯೆ ಹೆಸರಿನಲ್ಲಿ ಮತ ಕೇಳಿ ಗೆದ್ದ ಸುನಿಲ್ ಕುಮಾರ್‌ ನಂತರ ಪ್ರಕರಣ ಏನಾಯ್ತು? ಗೆದ್ದ ನಂತರ ಮಂತ್ರಿಯು ಆದಿರಿ, ಆದರೆ ಸುಚಿತ್ರ ಶೆಟ್ಟಿಗೆ ನೀವು ನ್ಯಾಯ ದೊರಕಿಸಿ ಕೊಟ್ಟಿರಾ? ಇಂತಹ ನೀವು ನನಗೆ ಬುದ್ದಿ ಹೇಳಲು ಬರುತ್ತೀರಿ. ಸಣ್ಣ ವಯಸ್ಸಿನವರಾದ ನಿಮಗೆ ಪಾಠ ಮಾಡುತ್ತೇನೆ. ಅದನ್ನು ಕೇಳಿಕೊಂಡಾದರೂ ಬುದ್ದಿ ಕಲಿಯಿರಿ” ಎಂದು ವಸಂತ ಬಂಗೇರ ಹೇಳಿದರು.

ವಿಡಿಯೊ ನೋಡಿ: ಸೌಜನ್ಯ ಪರವಾಗಿ ಬೆಳ್ತಂಗಡಿಯಲ್ಲಿ ನಡೆದ ಚಲೋ ಬೆಳ್ತಂಗಡಿ ಮಹಾಧರಣಿಯಲ್ಲಿ ವಸಂತ ಬಂಗೇರ ಅವರ ಮಾತು ಕೇಳಿ

 

Donate Janashakthi Media

Leave a Reply

Your email address will not be published. Required fields are marked *