ಬೆಂಗಳೂರು; ಜ. 23 : ‘ಹಿಂದಿ ರಾಷ್ಟ್ರ ಭಾಷೆ, ಅದಕ್ಕೆ ವಿರೋಧ ಸಲ್ಲದು’ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ದೊಡ್ಡರಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಮಾತನಾಡಿದ ಅವರು ಹಿಂದಿ ನಮ್ಮ ರಾಷ್ಟೀಯ ಭಾಷೆ. ಇಲ್ಲಿ ಕನ್ನಡ ಅನ್ನುವುದೂ ಹೇಗೋ ಹಾಗೇ ಹಿಂದಿ ಭಾಷೆ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಭಾಷೆಯು ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದ್ದು. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಹೆಗ್ಗಳಿಕೆಯು ಕನ್ನಡ ಭಾಷೆಗಿದೆ. ಈಗ ಹಿಂದಿ ಹೇರಿಕೆ, ಇಂಗ್ಲಿಷ್ ವ್ಯಾಮೋಹಕ್ಕೆ ಸಿಕ್ಕು ಕನ್ನಡ ಭಾಷೆ ಮೂಲೆಗುಂಪಾಗುತ್ತಿದೆ ಎಂದು ಹಿರಿಯ ಸಾಹಿತಿಗಳ ಅಭಿಪ್ರಾಯ
ಕನ್ನಡ ನಾಡು ನುಡಿ ಕನ್ನಡ ಭಾಷೆಯ ಮೆರಗು ಸಾರುವ ಮತ್ತು ಕನ್ನಡ ಭಾಷೆಯ ಇತಿಹಾಸ, ಅದರ ಸಾಧಕ ಬಾಧಕಗಳನ್ನು ಪ್ರಚುರಪಡಿಸಲು ವೇದಿಕೆಯಾಗಿರುವುದೇ ಈ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳ ಕನ್ನಡಿಗರ ಹೆಮ್ಮೆ.
ಇಂತಹ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಕನ್ನಡಕ್ಕಾಗಿ ಅವಿರತ ದುಡಿದ, ಕನ್ನಡ ಭಾಷೆಗೆ ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಸಾಹಿತಿಗಳು, ಕವಿಗಳನ್ನು ಗುರುತಿಸಿ ಅವರನ್ನು ಈ ಸಮ್ಮೇಳನ ಅಧ್ಯಕ್ಷರನ್ನಾಗಿ ನಿಯೋಜಿಸಲಾಗುತ್ತದೆ.
ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧಿರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು ಆದ ದೊಡ್ಡರಂಗೇಗೌಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವುದು ಖುಷಿಯ ವಿಚಾರ. ಆದರೆ ಇಂತಹ ಸಾಹಿತಿಗಳೇ ಕನ್ನಡವನ್ನು ಕಡೆಗಣಿಸಿದರೇ ಕನ್ನಡ ಭಾಷೆ ಮತ್ತಷ್ಟು ಕೆಳಸ್ಥರದಲ್ಲಿ ಕುಗ್ಗಲಿದೆ ಎಂದು ಚಿಂತಕರು, ಕನ್ನಡ ಹೋರಾಟಗಾರರ ಆರೋಪಿಸಿದ್ದಾರೆ.
ಇದನ್ನು ಓದಿ : ಪೊಲೀಸ್ ಠಾಣೆಗೆ ಕರೆಯಿಸಿ ಹಂಪನಾ ವಿಚಾರಣೆಗೆ ವ್ಯಾಪಕ ಖಂಡನೆ
ಇದು ಆಕಸ್ಮಿಕ ಹೇಳಿಕೆಯಲ್ಲ.ಇದು ಹಿಂದಿ ಸಾಮ್ರಾಜ್ಯಶಾಹಿಯ ರಾಜಕೀಯ ಅಜೆಂಡಾದ ಭಾಗ. ಕನ್ನಡವನ್ನು ಕನ್ನಡಿಗರಿಂದ ದಮನಗೊಳಿಸುವುದು ಈ ಸಾಮ್ರಾಜ್ಯಶಾಹಿಯ ಕುತಂತ್ರ. ತೇಜಸ್ವಿ ಸೂರ್ಯ, ಸಿ.ಟಿ.ರವಿ ಥರದವರು ಆಗಾಗ ಹಿಂದಿ ಹೇರಿಕೆ ಪರವಾಗಿ ಬ್ಯಾಟ್ ಬೀಸುವುದನ್ನು ನಾವು ಗಮನಿಸಿದ್ದೇವೆ. ಈಗ ಸಾಹಿತಿಗಳ ಬಾಯಿಂದಲೂ ಅದನ್ನೇ ಹೇಳಿಸುತ್ತಿದ್ದಾರೆ. ಹಿಂದಿ ಸಾಮ್ರಾಜ್ಯಶಾಹಿಯ ಗುರಿ ದೇಶವನ್ನು ಹಿಂದಿಯನ್ನರು ಮಾತ್ರ ಆಳಬೇಕು, ಹಿಂದಿಯೇತರರು ಎರಡನೇ ದರ್ಜೆ ಪ್ರಜೆಗಳಾಗಬೇಕು. ಮುಂಬರುವ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಹಿಂದಿಯನ್ನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು. ಹಿಂದಿಯೇತರ ತಾಯ್ನುಡಿಗಳನ್ನೆಲ್ಲ ನಾಶಮಾಡಿ ದೇಶಕ್ಕೆ ಒಂದೇ ಭಾಷೆ ಇರುವಂತೆ ಮಾಡುವುದು ಆಗಿದೆ ಎಂಬುದು ಚಿಂತಕರವಾದವಾಗಿದೆ.
ಹಿಂದಿ ಭಾರತದ ರಾಷ್ಟ್ರಭಾಷೆ ಎಂಬ ಡಾ॥ ದೊಡ್ಡರಂಗೇಗೌಡರ ಹೇಳಿಕೆಯನ್ನು ಕನ್ನಡ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ಅಧ್ಯಕ್ಷಕೋ.ವೆಂ. ರಾಮಕೃಷ್ಣೇಗೌಡ ಹೇಳಿದ್ದಾರೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಅದು ಕೇವಲ ಸಂಪರ್ಕ ಭಾಷೆ ಮಾತ್ರ ಭಾರತವು ಭಾಷಿಕ ರಾಷ್ಟ್ರಗಳ ಒಕ್ಕೂಟ ಹೊರತು ಏಕಸಂಸ್ಕೃತಿಯ ರಾಷ್ಟ್ರವಲ್ಲ ಎಂದು ಅವರು ಹೇಳಿದ್ದಾರೆ.

ದೊಡ್ಡರಂಗೇಗೌಡರಂಥವರು ಈ ಹಿಂದಿ ಸಾಮ್ರಾಜ್ಯಶಾಹಿಯ ಸಣ್ಣ ಹತಾರಗಳಲ್ಲಿ ಒಂದು. ಅಂಥವರನ್ನು ಹೇಗೆ ಬಳಸಿ ಬಿಸಾಡುವುದೆಂಬುದು ಅದಕ್ಕೆ ಚೆನ್ನಾಗಿ ಗೊತ್ತಿದೆ. ಹಿಂದೀಕರಣದ ಅಪಾಯಗಳ ಬಗ್ಗೆ ಅತ್ಯಂತ ಸ್ಪಷ್ಟ ತಿಳಿವಳಿಕೆ, ದೂರಾಲೋಚನೆ ಇದ್ದಿದ್ದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾತ್ರವೇ. ಆದರೆ ಆ ಕಾಲದಿಂದಲೂ ನಮ್ಮ ಸಾಹಿತಿಗಳು ಹಿಂದಿಯ ಅಪಾಯಗಳ ಕುರಿತು ಮಾತನಾಡಲೇ ಇಲ್ಲ, ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.
ಈಗಲೂ ಅಷ್ಟೆ, ಹಿಂದಿಹೇರಿಕೆ ಕುರಿತು ಜಾಗೃತಿ ಮೂಡಿಸುತ್ತ, ಮುಂಬರುವ ಅಪಾಯಗಳ ಕುರಿತು ಹೆಚ್ಚುಹೆಚ್ಚು ಮಾತನಾಡುತ್ತಿರುವುದು ಕನ್ನಡಪರ ಚಳವಳಿಗಾರರೇ ಹೊರತು ಸಾಹಿತಿಗಳಲ್ಲ. ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಮೆಟ್ರೋದಲ್ಲಿನ ಹಿಂದಿಹೇರಿಕೆಯನ್ನು ತೀವ್ರರೂಪದಲ್ಲಿ ಪ್ರತಿಭಟಿಸಿ ಒಂದೇ ದಿನ, ಒಂದೇ ಸಮಯದಲ್ಲಿ ಎಲ್ಲ ನಿಲ್ದಾಣಗಳಿಗೆ ನುಗ್ಗಿ ಅಲ್ಲಿನ ಬೋರ್ಡುಗಳನ್ನು ಕಿತ್ತು ಎಸೆದಾಗ ಬಹಳಷ್ಟು ಸಾಹಿತಿಗಳು ಮೌನವಾಗೇ ಇದ್ದರು. ಅಪಾಯ ತುಂಬ ದೊಡ್ಡದಿದೆ. ಕತ್ತಿ ನಮ್ಮವರೇ ಹಾಕಿ ತಿವಿದರೆ ಅದೇನು ಹೂವೇ ಎಂದು ಪ್ರಶ್ನಿಸಿದ್ದರು ಕುವೆಂಪು. ಈಗ ತಿವಿಯುತ್ತಿರುವವರು ನಮ್ಮವರೇ. ಕನ್ನಡಕ್ಕಿಂತ ದೊಡ್ಡವರು, ದೊಡ್ಡದು ಯಾರೂ, ಯಾವುದೂ ಇಲ್ಲ. ಇದನ್ನು ದೊಡ್ಡರಂಗೇಗೌಡರಂಥವರಿಗೆ ಅರ್ಥ ಮಾಡಿಸುವುದು ಹೇಗೆ? ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿರುವವರನ್ನು ಹೇಗೆ ಎಬ್ಬಿಸುವುದು? ಎಂದು ದಿನೇಶ್ ಕುಮಾರ್ ಎಸ್.ಸಿ. ಯವರು ಪ್ರಶ್ನಿಸಿದ್ದಾರೆ.
ಈ ವಿಡೀಯೋ ನೋಡಿ : ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿ, ನಿರ್ದೇಶಕ ಬಿ. ಸುರೇಶ್ ಮಾತುಗಳು