ವೈದ್ಯನ ಮೇಲೆ ಅಮಾನುಷ ಹಲ್ಲೆ: 24 ಆರೋಪಿಗಳ ಬಂಧನ

ಗುವಾಹಟಿ: ಅಸ್ಸಾಂ ರಾಜ್ಯದ ಹೊಜೈ ಜಿಲ್ಲೆಯ ಒಡಾಲಿಯದ ಮಾಡೆಲ್‌ ಆಸ್ಪತ್ರೆಯಲ್ಲಿ ನೆನ್ನೆದಿನ ಕೋವಿಡ್ ಚಿಕಿತ್ಸಾ ಕೇಂದ್ರದ ಯುವ ವೈದ್ಯನ ಮೇಲೆ ಅತ್ಯಂತ ಅಮಾನುಷವಾಗಿ ಹಲ್ಲೆಯನ್ನು ಮಾಡಿದ ಆರೋಪದ ಮೇಲೆ ಪೊಲೀಸರು 24 ಆರೋಪಿಗಳನ್ನು ಬಂಧಿಸಿದ್ದಾರೆ.

ಕೋವಿಡ್ ಸೋಂಕಿತ ವ್ಯಕ್ತಿ ನಿಧನದ ನಂತರ ರೋಗಿಯ ಕುಟುಂಬದ ಸದಸ್ಯರು  ವೈದ್ಯನ ಮೇಲೆ ಧಾಳಿ ನಡೆಸಿರುವ ಘಟನೆ ನೆನ್ನೆ ಮಧ್ಯಾಹ್ನ 1.30ರ ಸುಮಾರಿಗೆ  ನಡೆಸಿದೆ.  ಹಲ್ಲೆಗೊಳಗಾದ ವೈದ್ಯ ಸೆಯುಜ್ ಕುಮಾರ್ ಸೇನಾಪತಿ ಎಂದು ಗುರುತಿಸಲಾಗಿದೆ.

ವೈದ್ಯನ ಮೇಲೆ ಹಲ್ಲೆಯ ವಿರುದ್ಧ ಎಲ್ಲೆಡೆ ತೀವ್ರತರವಾದ ಆಕ್ರೋಶ ವ್ಯಕ್ತಗೊಂಡಿದೆ. ವೈದ್ಯರ ಮೇಲೆ ಇಂತಹ ಧಾಳಿಯನ್ನು ಖಂಡಿಸಿರುವ ಜನರು ಆರೋಗ್ಯ ಕ್ಷೇತ್ರದಲ್ಲಿ ಬಿಗುವಿನ ವಾತಾವರಣದಿಂದ ರಕ್ಷಣೆ ಒದಗಿಸುವವರು ಯಾರು ಎಂಬ ಪ್ರಶ್ನೆಗಳು ಎದ್ದಿವೆ.

ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ವೈದ್ಯರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ 24 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಕ್ರೂರ ಕೃತ್ಯದಲ್ಲಿ ಭಾಗಿಯಾಗಿರುವ 24 ಮಂದಿ ಅಪರಾಧಿಗಳನ್ನು ಬಂಧಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ದಾಖಲಿಸಲಾಗುವುದು. ನಾನು ಈ ತನಿಖೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಮತ್ತು ನ್ಯಾಯ ಒದಗಿಸುವ ಭರವಸೆ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೋವಿಡ್ ಸೋಂಕಿತ ಮೃತಪಟ್ಟ ಹಿನ್ನೆಲೆಯಲ್ಲಿ  ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ಮೇಲೆ ಏಕಾಏಕಿ ದಾಳಿ ನಡೆಸಿ ತೀವ್ರತರವಾದ ಹಲ್ಲೆ ನಡೆಸಿದ್ದಾರೆ. ಇದರಿಂದ ಯುವ ವೈದ್ಯನು ಗಂಭೀರ ಗಾಯಗೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ವೈದ್ಯಕೀಯ ಜಗತ್ತು ಸೇರಿದಂತೆ ಎಲ್ಲ ವಿಭಾಗದಿಂದಲೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸೆಯುಜ್ ಕುಮಾರ್ ಸೇನಾಪತಿ, ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ಸಂಬಂಧಿಕರು ನನ್ನ ಬಳಿ ಹೇಳಿದ್ದರು. ನಾನು ರೋಗಿಯನ್ನು ಪರೀಕ್ಷಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ. ರೋಗಿಯ ಸಂಬಂಧಿಕರು ಆಸ್ಪತ್ರೆಯ ಪಿಠೋಪಕರಣಗಳನ್ನು ಧ್ವಂಸ ಮಾಡಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದರು ಎಂದು  ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *